Advertisement
ಒಂದು ಮನೆಯಲ್ಲಿ ಮದುವೆ ಅಂದರೆ ಊರಿಗೆ ಊರೇ ಸಂಭ್ರಮದಲ್ಲಿರುತ್ತಿತ್ತು. ಗೆಳೆಯರು, ಸಂಬಂಧಿಕರು ಎಲ್ಲರೂ ಕೈ ಜೋಡಿಸಿ ತಯಾರಿ ನಡೆಯುತ್ತಿತ್ತು. ಇನ್ನು ಮದುವೆ ಮನೆಯವರ ಸಂಭ್ರಮ ಹೇಳಿ ಮುಗಿಯುವಂಥದ್ದಲ್ಲ ಬಿಡಿ. ಅದರಲ್ಲೂ ಮಧ್ಯಮ ವರ್ಗದ ಜನರಿಗೆ ಮದುವೆ ಕಾರ್ಯಕ್ರಮ ನಡೆಸುವುದು ಎಂದರೆ ಸಣ್ಣ ವಿಚಾರ ಅಲ್ವೇ ಅಲ್ಲ. ಆರು ತಿಂಗಳ ಹಿಂದೆಯೇ ತಯಾರಿ ಶುರು. ಇನ್ನು ಮದುವೆಯ ದಿನ ಮನೆಯೊಳಗಡೆ ಹುಡುಗಿಯರೆಲ್ಲಾ ಒಂದು ದಿನಕ್ಕೆ ಕನ್ನಡಿ ಪ್ರೇಮಿಗಳಾಗಿರುತ್ತಾರೆ. ಹೊರಗಿನ ಜವಾಬ್ದಾರಿಯೆಲ್ಲಾ ಹುಡುಗರದ್ದೇ. ಎಲ್ಲ ಜವಾಬ್ದಾರಿಗಳಲ್ಲೂ ದೊಡ್ಡ ಜವಾಬ್ದಾರಿ ಎಂದರೆ ಅದು ಅಡುಗೆ. ಉಳಿದ ದಿನಗಳೆಲ್ಲಾ ಹೆಂಗಸರೇ ಅಡುಗೆ ಮಾಡಿದರೆ ಆ ಒಂದು ದಿನ ಮಾತ್ರ ಸಂಭ್ರಮದ ಅಡುಗೆ ಹುಡುಗರದ್ದು.
Related Articles
Advertisement
ಅರ್ಧ ದಿನ ಮನೆ ಹಿಂಭಾಗದಲ್ಲಿ ಕಳೆದ ನಮಗೆ ಅನ್ನ ಬಡಿಸಲು ನಿಲ್ಲುವಾಗಲೇ ಹೊಸ ಸಂಬಂಧಿಕರ ಪರಿಚಯವಾಗುವುದು. ಅದರಲ್ಲೂ ಕೆಲವೊಂದು ಹಿರಿಯರ ತಮಾಷೆ ಇರುತ್ತೆ. ಎಲ್ಲರಲ್ಲಾಯ್ತು ನಿಂದ್ಯಾವಾಗ ಮದುವೆ. ಅವರ ಮಾತಿಗೆ ಉತ್ತರ ಕೊಡೋದ ಬೇಡ್ವಾ ಎನ್ನೋ ಉಪ ಪ್ರಶ್ನೆ ನಮ್ಮಲ್ಲಿ.
ಎಲ್ಲ ಮುಗಿದ ಅನಂತರ ಮಗಳನ್ನು ಇನ್ನೊಂದು ಮನೆಗೆ ಕಳುಹಿಸುವಾಗ ತಾಯಿಗೆ ಎಷ್ಟು ನೋವಾಗುತ್ತೋ ಅಷ್ಟೇ ನೋವು ನಮಗೆ ಅಡುಗೆ ಪಾತ್ರೆ ತೊಳೆಯಬೇಕು ಅಂದಾಗ ಆಗುವುದು. ಅದಾದ ಅನಂತರ ಅಡುಗೆ ಮನೆಯ ಕಸ ಗುಡಿಸೋದು ಇನ್ನೊಂದು ತಲೆನೋವು. ಎಲ್ಲ ಮುಗಿದು ಊಟ ಮಾಡೋವಾಗ ಸೂರ್ಯನಿಗೂ ಸುಸ್ತಾಗಿರುತ್ತೆ. ಎಲ್ಲ ಆದ ಮೇಲೆ ರಾತ್ರಿ ಮಲಗಲು ಹುಡುಗರೆಲ್ಲರೂ ಅಂಗಳದಲ್ಲಿ ಚಾಪೆ ಹಾಕಿ ಮಲಗೋವಾಗ ಆ ದಿನದ ತಮಾಷೆ ಸಂದರ್ಭ ಹೇಳಿ ನಕ್ಕು ನಕ್ಕು ಹೊಟ್ಟೆ ನೋವು ಶುರುವಾಗಿಬಿಡುತ್ತೆ.
ಈ ಎಲ್ಲ ಅಡುಗೆ ಸಂಭ್ರಮ ಈಗ ಕ್ಯಾಟರಿಂಗ್ ಎಂಬ ಆಧುನಿಕತೆಯ ಪಾಲಾಗಿದೆ. ಹಾಗಂತ ಕ್ಯಾಟರಿಂಗ್ ತಪ್ಪು ಅಂತ ಹೇಳ್ಳೋದಲ್ಲ. ಒತ್ತಡ ಸುಧಾರಿಸಲು ಈ ರೀತಿ ಮಾಡುವುದೆಲ್ಲಾ ಅಗತ್ಯವೇ. ಆದರೆ ನಾವು ಎಲ್ಲೋ ಒಂದು ಕಡೆ ನಮ್ಮ ಹಿಂದಿನ ಸಂಸ್ಕೃತಿ ಅಡಗಿದ ಮನೆ ಅಡುಗೆಯನ್ನು ಮರೆಯುತ್ತಿದ್ದೇವೋ ಅನಿಸುತ್ತಿದೆ. ನಾವು ಸಣ್ಣ ವಯಸ್ಸಿನಲ್ಲಿ ಅಡುಗೆ ಎಂದಾಗ ಓಡೋಡಿ ಬರುತ್ತಿದ್ದ ಕಾಲ ನಿಧಾನವಾಗಿ ಇತಿಹಾಸ ಸೇರುತ್ತಿದೆ.
-ದೀಪಕ್
ವಿ.ವಿ. ಕಾಲೇಜು, ಹಂಪನಕಟ್ಟೆ