ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರ ವಿಧಾನಸೌಧದಲ್ಲಿನ ಕೊಠಡಿ ನವೀಕರಣಕ್ಕಾಗಿ ರಾಜ್ಯ ಸರಕಾರವು 15.10 ಲಕ್ಷ ರೂ.ಗಳನ್ನು ಪಾರದರ್ಶಕ ಕಾಯ್ದೆ ವಿನಾಯಿತಿ ನೀಡಿ ಮಂಜೂರು ಮಾಡಿದೆ.
ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಕೊಠಡಿಯ ಟೈಲ್ಸ್‌ಗೆ ಪಾಲಿಶ್ ಮಾಡುವುದು, ಕಾನ್ಫರೆನ್ಸ್ ಟೇಬಲ್ ಅಳವಡಿಕೆ, ಹೊಸ ಮೇಜು, ಕುರ್ಚಿ ಹಾಗೂ ಸೋಫಾ ಸೆಟ್ ಅಳವಡಿಕೆ, ಶೌಚಾಲಯ ನವೀಕರಣ ಸೇರಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಲೋಕೋಪಯೋಗಿ ಇಲಾಖೆಗೆ 15.10 ಲಕ್ಷ ರೂ.ಗಳನ್ನು ನೀಡಲಾಗಿದೆ.
ಅದೇ ರೀತಿ ಬಾಲ್ಯ ವಿವಾಹ ಪ್ರಕರಣಗಳ ಅನುಸರಣೆ ಮತ್ತು ಮೇಲ್ವಿಚಾರಣೆಗಾಗಿ ಎನ್‌ಐಸಿ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿರುವ ಸುರಕ್ಷಿಣಿ ವೆಬ್ ಪೋರ್ಟಲ್‌ನ್ನು ಸಿಡಿಎಸಿ ಸಂಸ್ಥೆಯ ಸಹಯೋಗದೊಂದಿಗೆ ಹೊಸ ವರ್ಧಿತ ಸಂರಕ್ಷಿಣಿ ತಂತ್ರಾಂಶವನ್ನಾಗಿ ಅಭಿವೃದ್ಧಿಪಡಿಸಲು 34.50 ಲಕ್ಷ ರೂ. ಹಾಗೂ ಸಮಗ್ರ ಮಕ್ಕಳ ರಕ್ಷಣಾ ಯೋಜನೆ (ಐಸಿಪಿಎಸ್) ಅಡಿ ಒಂದು ವರ್ಷ ಅವಧಿಗೆ ಐವರು ಸಮಾಲೋಚಕರನ್ನು ನೇಮಿಸಿಕೊಳ್ಳಲು 21 ಲಕ್ಷ ರೂ.ಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನೀಡಲಾಗಿದೆ.
ಬಸ್ ಖರೀದಿ
ಲೋಕಾಯುಕ್ತ ಸಂಸ್ಥೆಯಲ್ಲಿ ಮೂವರು ಸಂಶೋಧನ ಸಹಾಯಕರ ಸಮಾಲೋಚನ ಶುಲ್ಕ 33,450 ರೂ., ಸಂಶೋಧನ ಅಧ್ಯಯನ, ತರಬೇತಿ, ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮ, ಪ್ರಯೋಗಾಲಯಗಳ ಮಾದರಿ ವಿಶ್ಲೇಷಣೆಗಾಗಿ ಪರಿಸರ ನಿರ್ವಹಣೆ ಹಾಗೂ ನೀತಿ ಸಂಶೋಧನ ಸಂಸ್ಥೆ (ಎಂಪ್ರಿ) ಸಂಸ್ಥೆಗೆ 30 ಲಕ್ಷ ರೂ.ಗಳನ್ನು ರಾಜ್ಯ ಸರಕಾರ ಮಂಜೂರು ಮಾಡಿದೆ.
ಕರ್ನಾಟಕ ನ್ಯಾಯಾಂಗ ಅಕಾಡೆಮಿಗೆ ಅವಶ್ಯವಿರುವ ಹೊಸ ಬಸ್ ಖರೀದಿಸಲು ಬರ್ಮಾ ಆಟೋಮೋಟಿವ್ಸ್ ಪ್ರೈ.ಲಿ.ಗೆ 35.90 ಲಕ್ಷ ರೂ.ಗಳನ್ನು ಮಂಜೂರು ಮಾಡಿದ್ದು ಇದರೊಂದಿಗೆ ರಾಜ್ಯದ ಸಂಗ್ರಹಣ ಪ್ರಾಧಿಕಾರಗಳು ಅವಶ್ಯವಿರುವ ತೆಂಗಿನ ನಾರಿನ ಉತ್ಪನ್ನಗಳನ್ನು ಕರ್ನಾಟಕ ರಾಜ್ಯ ತೆಂಗಿನ ನಾರು ಅಭಿವೃದ್ಧಿ ನಿಗಮದಿಂದ ಪಡೆಯಲು 50 ಲಕ್ಷ ರೂ.ಗೆ ಮಂಜೂರಾತಿ ನೀಡಿದೆ. ಈ ಎಲ್ಲ ಸೇವೆಗಳನ್ನು ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ1999ರ ಕಲಂ 4 (ಜಿ) ಅಡಿ ವಿನಾಯಿತಿ ನೀಡಿ ಅಧಿಸೂಚಿಸಿದೆ.