ಯಾದಗಿರಿ: ವಿದ್ಯಾರ್ಥಿಗಳು ಸರಕಾರಿ ಸೌಲಭ್ಯಗಳ ಸದುಪಯೋಗ ಪಡೆದು ನಿರಂತರ ಪ್ರಯತ್ನದೊಂದಿಗೆ ಕಷ್ಟಪಟ್ಟು ಅಭ್ಯಾಸ ಮಾಡಬೇಕು. ಉತ್ತಮ ಗೆಳೆಯ-ಗೆಳತಿಯರ ಸ್ನೇಹದೊಂದಿಗೆ ಅಭ್ಯಾಸದ ಕುರಿತು ಚರ್ಚೆ ಮಾಡಿದಾಗ ವಿಷಯದ ಮನನವಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ರಾಚಪ್ಪ ಕೆ. ತಾಳಿಕೋಟಿ ಹೇಳಿದರು.
ಗುರುವಾರ ಕೋಲಿವಾಡ ಸರಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಕಾನೂನು ಸಾಕ್ಷರತಾ ಕ್ಲಬ್ ಉದ್ಘಾಟನೆ ಹಾಗೂ ಮೂಲಭೂತ ಹಕ್ಕುಗಳು ಮತ್ತು ಮೂಲಭೂತ ಕರ್ತವ್ಯಗಳು ಕುರಿತ ಹಮ್ಮಿಕೊಳ್ಳಲಾಗಿದ್ದ
ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಉನ್ನತ ಶ್ರೇಣಿಯಲ್ಲಿ ಉತೀರ್ಣರಾಗುವುದರೊಂದಿಗೆ ಉನ್ನತ ಹುದ್ದೆ ಪಡೆಯಲು ಸಾಧ್ಯವಿದೆ.
ವಿದ್ಯಾಥಿಗಳಿಗೆ ಸರಿಯಾದ ದಾರಿ ತೋರಲು ಹಿಂದೆ ಗುರುಗಳು ಇರುತ್ತಾರೆ. ಆದರೆ ಗುರಿ ಸಾಧಿಸುವ ಪ್ರಯತ್ನ ವಿದ್ಯಾರ್ಥಿಗಳು ಮಾಡಬೇಕು ಎಂದು ಕಿವಿಮಾತು ಹೇಳಿದರು. ಎಲ್ಲಾ ಕಾನೂನು ಮೂಲ ಸಂವಿಧಾನವಾಗಿದ್ದು. ಎಲ್ಲರೂ ಸಂವಿಧಾನಕ್ಕೆ ಬದ್ಧರಾಗಿರಬೇಕು. ಸಂವಿಧಾನದಲ್ಲಿರುವ ನೀತಿಗಳಿಗೆ ವಿರುದ್ಧವಾಗಿ ಯಾವುದೇ ಕಾಯ್ದೆಗಳನ್ನು ರಚಿಸುವಂತಿಲ್ಲ. ಸರ್ವರಿಗೂ ಸಮಬಾಳು ಎನ್ನುವ ರೀತಿಯಲ್ಲಿ ಎಲ್ಲರಿಗೂ ಸಾಧ್ಯವಾದಷ್ಟು ಕಾನೂನಿನ ಅರಿವು ಅಗತ್ಯವಾಗಿದೆ. ಇಂದು ಸ್ತ್ರೀಯರಿಗೂ ಪುರುಷರಿಗೂ ಸಮಾನವಾದ ಕಾನೂನಿನ ನಿಯಮಗಳಿವೆ ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಕಾಶ ಅರ್ಜುನ ಬನಸೊಡೆ ಮಾತನಾಡಿ, ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರವು ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟಗಳಲ್ಲಿ ಕಾನೂನು ಸೇವಾ ಕ್ಲಬ್‌ಗಳನ್ನು ನಿರ್ಮಿಸಿ ಆ ಮೂಲಕ ಜನರಲ್ಲಿ ಕಾನೂನಿನ ಅರಿವು ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಶಾಲೆಗಳಲ್ಲಿ ಮುಖ್ಯ ಗುರುಗಳ ಅಧ್ಯಕ್ಷತೆಯಲ್ಲಿ ಕಾನೂನು ಸಾಕ್ಷರತಾ ಕ್ಲಬ್‌ಗನ್ನು ಸ್ಥಾಪಿಸಿ ವಿದ್ಯಾರ್ಥಿಗಳಲ್ಲಿ ನಿಬಂಧ, ಚರ್ಚಾಕೂಟ ಮುಂತಾದ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ಕಾನೂನಿನ ಅರಿವು
ಮೂಡಿಸಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ವಕೀಲರಾದ ಕಲ್ಲಪ್ಪ ಬಿ. ಅಂಗಡಿ ಮಾತನಾಡಿ, ಮೂಲಭೂತ ಹಕ್ಕುಗಳು, ಮೂಲಭೂತ ಕತವ್ಯಗಳು ಹಾಗೂ ಜನನ ಮತ್ತು ಮರಣ ನೋಂದಣಿ ಮಾಡಿಸುವುದರಿಂದ ಆಗುವ ಲಾಭ-ನಷ್ಟದ ಬಗ್ಗೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಗೌಡ ಪಾಟೀಲ ಮಾತನಾಡಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶ್ರೀನಿವಾಸರಾವ್ ಕುಲಕರ್ಣಿ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಸಿ.ಎಸ್. ಮಾಲಿಪಾಟೀಲ, ಪ್ರೌಢಶಾಲೆಯ ಪ್ರಭಾರ ಮುಖ್ಯಗುರು ಖಾಜಾ ಮೈನುದ್ದೀನ್ ಹಾಗೂ ಜಿಲ್ಲಾ ವಕೀಲರ ಸಂಘದ
ಕಾರ್ಯದರ್ಶಿ ಶಾಂತಪ್ಪ ಖಾನಹಳ್ಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕೋಲಿವಾಡ ಸರಕಾರಿ ಪ್ರೌಢಶಾಲೆಯ ಸಹ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಹ ಶಿಕ್ಷಕ ಎಸ್.ಕೆ. ಬಿರಾದಾರ ನಿರೂಪಿಸಿದರು. ಸಹ ಶಿಕ್ಷಕ ಮೈಬೂಬ ವಂದಿಸಿದರು.