ಕುಂತಿಯ ಎದೆಗಾರಿಕೆ ಎಲ್ಲ ಮಹಿಳೆಯರಿಗೂ ಆದರ್ಶಪ್ರಾಯ. ಇಂತಹವರ ಮಕ್ಕಳು ಹೇಗಿರಬೇಕು ಎಂಬುದನ್ನು ಕೃಷ್ಣನು ಪಾರ್ಥ ಎಂದು ಅರ್ಜುನನ್ನು ಕರೆಯುವ ಮೂಲಕ ಸೂಚಿಸಿದ್ದಾನೆ. ಅಂದರೆ ಮಕ್ಕಳಾದವರು ಹೇಡಿಗಳಾಗದೆ, ಪರಾಕ್ರಮಿಗಳಾಗಿರಬೇಕು ಎಂಬ ಸಂದೇಶ.
ಹಾಗಿದ್ದರೆ ಕುಂತಿಯ ಧೈರ್ಯವಾದರೂ ಎಂಥದ್ದು? ಗಂಡ ಪಾಂಡು ಸಾಯುವಾಗ ಕಾಡಿನಲ್ಲಿದ್ದಳು. ಅಂತಹ ಸ್ಥಿತಿಯಲ್ಲಿಯೂ ಧೈರ್ಯಗೆಡದೆ ಚಿಕ್ಕ ಮಕ್ಕಳನ್ನು ಕರೆದುಕೊಂಡು ಅರಮನೆಗೆ ಬರುತ್ತಾಳೆ. ಪಗಡೆಯಾಟದಲ್ಲಿ ಸೋತಾಗಲೂ ಮಕ್ಕಳಿಗೆ ಆಸರೆಯಾಗಿ ಅವರ ಜತೆ ಕಾಡಿಗೆ ಹೋಗುತ್ತಾಳೆ. ಅಲ್ಲಿಯೂ ಸಂದರ್ಭಾನುಸಾರ ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಾಳೆ. ರಾಜ್ಯ ಸಿಕ್ಕಿದ ಬಳಿಕ ಸುಖವಾಗಿ ಅರಮನೆಯಲ್ಲಿರರಬಹುದಿತ್ತು. ಹಾಗೆ ಮಾಡದೆ ಧೃತರಾಷ್ಟ್ರ ಕಾಡಿಗೆ ಹೋಗುವಾಗ ತಾನೂ ಕಾಡಿಗೆ ಹೊರಡುತ್ತಾಳೆ.
ಅಂದರೆ ಆಯಾ ಕಾಲಘಟ್ಟದಲ್ಲಿ ಮಾಡಬೇಕಾದ ಎಲ್ಲ ಕರ್ತವ್ಯಗಳನ್ನು ಸ್ವಾರ್ಥವಿಲ್ಲದೆ ನೆರವೇರಿಸುತ್ತಾಳೆ. ಇಂತಹ ಮನುಷ್ಯ ನಪುಂಸಕನ ಹಾಗೆ ಏಕೆ ಮಾತನಾಡುತ್ತೀ? ಕ್ಷುದ್ರವಾದ ಹೃದಯದೌರ್ಬಲ್ಯ ಬಿಡು ಎಂದು ಕೃಷ್ಣ ಹೇಳುತ್ತಾನೆ. ಮೋಹಪ್ರಯುಕ್ತ ದೌರ್ಬಲ್ಯವೆಂದರ್ಥ. ಕ್ಷುದ್ರ ಎಂದಾಕ್ಷಣ ಅವುಗಳನ್ನು ಕಡೆಗಣಿಸುವಂತಿಲ್ಲ. ಕ್ಷುದ್ರ ಗ್ರಹಗಳಿಗೂ ಸಾಮರ್ಥ್ಯವಿದೆ. ಕ್ಷುದ್ರ ದೇವತೆಗಳೂ ಹಾಗೆ. ದೊಡ್ಡದಾಗಿ ಕಾಣುತ್ತವೆ. ಕ್ಷುದ್ರ ಮನುಷ್ಯರೂ ಹಾಗೆ.
– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ
– ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ ಗೀತಾ ಮಂದಿರ,
ಉಡುಪಿ ಸಂಪರ್ಕ ಸಂಖ್ಯೆ: 8055338811