Advertisement

ವೈದ್ಯಕೀಯ ಶಿಕ್ಷಣ ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಾಗಲಿ: ಟಿ.ಎಸ್‌. ನಾಗಾಭರಣ

06:52 PM May 22, 2021 | Team Udayavani |

ಬೆಂಗಳೂರು: ಆರೋಗ್ಯ ಇಲಾಖೆಯ ಪ್ರಕಟಣೆಗಳು ಮತ್ತು ಮಾರ್ಗ ಸೂಚಿಗಳು ಸ್ಥಳೀಯರಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಕನ್ನಡದಲ್ಲಿ ಪ್ರಕಟವಾಗಬೇಕಾದ ಅಗತ್ಯವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌. ನಾಗಾಭರಣ ಹೇಳಿದ್ದಾರೆ.

Advertisement

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 25ನೇ ವಾರ್ಷಿಕೋತ್ಸವದ ಅಂಗವಾಗಿ ಶನಿವಾರ ಆನ್‌ಲೈನ್‌ ನಲ್ಲಿ ಹಮ್ಮಿಕೊಂಡಿದ್ದ ಕನ್ನಡ ವೈದ್ಯ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಕೋವಿಡ್‌ ಸಂಬಂಧಿಸಿದ ಮಾರ್ಗಸೂಚಿಗಳು ಮತ್ತು ಪ್ರಕಟಣೆಗಳು ಆಂಗ್ಲ ಭಾಷೆಯಲ್ಲಿ ಪ್ರಕಟವಾಗುತ್ತಿವೆ. ಶೇ 70 ರಷ್ಟು ಮಂದಿಗೆ ಈ ಪ್ರಕಟಣೆಗಳ ಬಗ್ಗೆ ತಿಳುವಳಿಕೆ ಇರುವುದಿಲ್ಲ. ಆ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕನ್ನಡದಲ್ಲಿ ಪ್ರಕಟಣೆಗಳನ್ನ ಹೊರಡಿಸಲಿ ಎಂದು ಸಲಹೆ ನೀಡಿದರು.

ಪಾರಂಪರಿಕ ಜ್ಞಾನದ ಜತೆಗೆ ವಿಜ್ಞಾನ ಮೇಳೈಸಿದಾಗ ಮಾತ್ರ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ತರವಾದುದನ್ನು ಸಾಧಿಸಬಹುದಾಗಿದೆ. ನಮ್ಮ ಪೂರ್ವಿಕರು ಆರೋಗ್ಯ ರಕ್ಷಣೆಗಾಗಿ ಪಾರಂಪರಿಕವಾಗಿ ಬಳಸುತ್ತಿದ್ದ ಗಿಡಮೂಲಿಕೆಗಳು ಇಂದಿಗೂ ನಮಗೆ ಸಂಜೀವಿನಿಯಾಗಿ ಕಾಣಸಿಗುತ್ತವೆ ಎಂದು ಹೇಳಿದರು.

ಭಾಷೆ ಕೇವಲ ಸಂವಹನ ಅಷ್ಟೇ ಅಲ್ಲ; ಅದು ಜ್ಞಾನವನ್ನು ಕೂಡ ಸಮೃದ್ಧಿಯಾಗಿಸುತ್ತದೆ. ಹಾಗಾಗಿ ವೈದ್ಯಕೀಯ ಶಿಕ್ಷಣವು ಪ್ರಾದೇಶಿಕ ಭಾಷೆಯಲ್ಲಿ ದೊರೆಯುವಂತಾದರೆ ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಜತೆಗೆ ಜನಸಾಮಾನ್ಯರೊಂದಿಗೆ ಹೃದಯಸ್ಪರ್ಶಿಯಾಗಿ ಸ್ಪಂದಿಸಿ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ವೈದ್ಯಕೀಯ ಕ್ಷೇತ್ರದಲ್ಲಿ ಕನ್ನಡವನ್ನು ಬೆಳಸುವ ನಿಟ್ಟಿನಲ್ಲಿ ವಿವಿಯು ಶ್ಲಾಘನೀಯ ಕೆಲಸ ಮಾಡುತ್ತಿದೆ. ವೈದ್ಯಕೀಯ ಕ್ಷೇತ್ರಕ್ಕೆ ಅನುಕೂಲ ಆಗುವ ನಿಟ್ಟಿನಲ್ಲಿ ಕನ್ನಡ ನಿಘಂಟು ಹೊರತರಲಿ ಎಂದರು.

Advertisement

ಇದನ್ನೂ ಓದಿ :ತಾಯಿಯಾದ ಗಾಯಕಿ : ಶ್ರೇಯಾ ಘೋಷಾಲ್ ಮನೆಗೆ ಹೊಸ ಅತಿಥಿ ಆಗಮನ

ವಿವಿ ಕುಲಪತಿ ಸಚ್ಚಿದಾನಂದ ಮಾತನಾಡಿ, ಕನ್ನಡ ವೈದ್ಯಕೀಯ ಸಾಹಿತ್ಯ ಸಾಕಷ್ಟು ಬೆಳೆಯ ಬೇಕಾಗಿದೆ. ಆ ನಿಟ್ಟಿನಲ್ಲಿ ರಾಜೀವ್‌ ಗಾಂಧಿ ಆರೋಗ್ಯ ವಿವಿ ಹಲವು ಯೋಜನೆ ರೂಪಿದೆ ಎಂದು ಹೇಳಿದರು.

ಸಮ್ಮೇಳನ ಅಧ್ಯಕ್ಷತೆ ವಹಿಸಿದ್ದ ಕಲಬುರ್ಗಿಯ ಕೆಪಿಎಂ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ನಾಡೋಜ ಪಿ.ಎಸ್‌. ಶಂಕರ್‌, ಬೆಳಗಾವಿಯಲ್ಲಿ ಪ್ರಥಮ ಕನ್ನಡ ವೈದ್ಯಕೀಯ ಸಾಹಿತ್ಯ ಸಮ್ಮೇಳನ ನಡೆಯಿತು. ಆನಂತರ ದಿನಗಳಲ್ಲಿ ಅದು ಅಪರೂಪವಾಯಿತು ಎಂದು ಹೇಳಿದರು. ವಿವಿ ಕುಲಸಚಿವ ಡಾ.ಎನ್‌.ರಾಮಕೃಷ್ಣ ರೆಡ್ಡಿ, ಉಪಕುಲಸಚಿವ ಡಾ.ಬಿ.ವಸಂತ ಶೆಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next