Advertisement

Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್

07:22 PM Dec 18, 2024 | Team Udayavani |

ಉಜಿರೆ: ನಿರ್ದಿಷ್ಟ ದೇಶ, ಪ್ರದೇಶಗಳಿಗೆ ಅನುಗುಣವಾದ ಸಂವೇದನೆಗಳನ್ನು ವಿಭಿನ್ನವಾಗಿ ದಾಟಿಸುವ ಶಕ್ತಿ ಕಥನ ಕಟ್ಟುವ ಸೃಜನಶೀಲತೆಗೆ ಇದೆ ಎಂದು ಕಥೆಗಾರ್ತಿ ಅನುಪಮಾ ಪ್ರಸಾದ್ ಅಭಿಪ್ರಾಯಪಟ್ಟರು.

Advertisement

ಎಸ್‌ಡಿಎಂ ಕಾಲೇಜಿನ ಸಮ್ಯಕ್‌ದರ್ಶನ ಸಭಾಂಗಣದಲ್ಲಿ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಮಂಗಳವಾರ ಕಥೆ-ಅನುಭವ-ಕಲ್ಪನೆ ನಿವೇದನೆಯ ‘ಸ್ಪೀಕ್ಸ್ – 3’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಕಥೆ ಹೇಳುವುದು, ಕೇಳುವುದು ನಮ್ಮ ಪರಂಪರೆಯ ಅತ್ಯಂತ ಸಹಜ ಗುಣಲಕ್ಷಣವಾಗಿದೆ. ಒಬ್ಬರು ಕಥೆ ಹೇಳುವ ಮತ್ತೊಬ್ಬರು ಕೇಳುವ ಪ್ರಕ್ರಿಯೆ ವಿಭಿನ್ನವಾದುದು. ಕೇಳಲ್ಪಡುವ ಕಥೆಗೂ ಮತ್ತು ಓದಿಸಿಕೊಂಡು ಹೋಗುವ ಕಥೆಗೂ ವ್ಯತ್ಯಾಸಗಳಿವೆ. ಆದರೆ, ಕಥೆ ಕಟ್ಟುವ ಸೃಜನಶೀಲ ಕೌಶಲ್ಯವು ವಿವಿಧ ಪ್ರದೇಶಗಳ ಮನುಷ್ಯ ಸಂವೇದನೆಗಳನ್ನು ವಿಭಿನ್ನವಾಗಿ ದಾಖಲಿಸುತ್ತದೆ. ಅಂಥ ಕಥೆಗಳು ಆಪ್ತ ಓದನ್ನು ಸಾಧ್ಯವಾಗಿಸಿಕೊಳ್ಳುತ್ತವೆ ಎಂದರು.

ಕತೆಗಳು ಬೇರೆ ಬೇರೆ ಪ್ರದೇಶಗಳಿಂದ ಬಂದಷ್ಟೂ, ಅದರ ವಸ್ತುವಿನಲ್ಲಿ ವೈವಿಧ್ಯತೆ ಕಾಣಬಹುದು. ಆ ರೀತಿಯ ಕತೆಗಳು ನಿರೂಪಣೆಯಲ್ಲಿ ಹಾಗೂ ಭಾಷಾ ಬಳಕೆಯಲ್ಲಿ ವಿಭಿನ್ನ ಪ್ರಯತ್ನವಾಗಿ ಗುರುತಿಸಿಕೊಳ್ಳುತ್ತವೆ. ಕಥೆ ಕಟ್ಟುವ ಕಾಲಕ್ಕೆ ಪಾತ್ರಗಳ ಆಯ್ಕೆ, ನಿರೂಪಣೆ ಮತ್ತು ವಸ್ತುವನ್ನು ಯಾವ ನೆಲೆಯ ಗಮ್ಯಕ್ಕೆ ತಲುಪಿಸಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಕಂಡುಕೊಳ್ಳುವ ಸ್ಪಷ್ಟತೆ ಮುಖ್ಯ. ಹಾಗಾದಾಗ ಮಾತ್ರ ಕಥೆಯೊಂದು ಕೇಳಿಸಿಕೊಳ್ಳಲ್ಪಡುತ್ತದೆ. ಓದಿಸಿಕೊಳ್ಳುತ್ತದೆ ಎಂದರು.

ಆಯಾ ಪ್ರಾದೇಶಿಕ ಭಾಷೆಯ ಸೊಗಡನ್ನು ಕಥೆಗಳಲ್ಲಿ ಹಿಡಿದಿಡುವ ಶೈಲಿಯು ಕಥೆಗೆ ಹೊಸ ಜೀವಂತಿಕೆಯನ್ನು ತಂದುಕೊಡುತ್ತದೆ. ಆಯಾ ಪ್ರಾದೇಶಿಕ ಭಾಷೆಯ ಶೈಲಿಯನ್ನು ಕಥನದ ನಿರೂಪಣೆಯ ಭಾಗವಾಗಿಸುವುದು ಸೂಕ್ತ. ಈ ಶೈಲಿಯೊಂದಿಗಿನ ಕಥೆಗಳ ಮೂಲಕ ಕೌಟುಂಬಿಕ ಮತ್ತು ಹೊರ ಸಮಾಜದ ಸೂಕ್ಷ್ಮಗಳನ್ನು ಅನಾವರಣಗೊಳಿಸಬಹುದು. ಸ್ವಾನುಭವದ ಎಳೆಗಳನ್ನು ವ್ಯಕ್ತಿಯಾಗಿ ಗ್ರಹಿಸುವುದಕ್ಕಿಂತ ಬರಹಗಾರನ ಎಚ್ಚರದ ಪ್ರಜ್ಞೆಯಲ್ಲಿ ಅದ್ದಿ ನೋಡಬೇಕು. ಆಗ ಸ್ವಾನುಭವದ ಮಿತಿಗಳ ವ್ಯಾಪ್ತಿಯನ್ನು ಮೀರಿ ಹೊಸದಾದ ನೋಟಗಳನ್ನು ಕಥೆಗಳಿಂದ ಕಟ್ಟಲು ಸಾಧ್ಯವಾಗುತ್ತದೆ ಎಂದರು.

Advertisement

ಹೊಸ ತಲೆಮಾರಿನ ಹೊಸ ಕತೆಗಾರರ ಸಂವೇದನೆಯನ್ನು ಮತ್ತಷ್ಟು ನಿಖರವಾಗಿಸುವ ದೃಷ್ಟಿಯಿಂದ ಸ್ಪೀಕ್ಸ್‌ನಂತಹ ವೇದಿಕೆಗಳು ಮುಖ್ಯವೆನ್ನಿಸುತ್ತವೆ. ಮಾತುಕತೆ, ವಿವಿಧ ಅನುಭವಗಳ ನಿವೇದನೆ ಮತ್ತು ಸರಿತಪ್ಪುಗಳ ಪರಾಮರ್ಶೆಯ ನೆಲೆಯಲ್ಲಿ ಚರ್ಚೆಗಳು ನಡೆದರೆ ಮಹತ್ವದ ಕಥೆಗಾರರನ್ನು ರೂಪಿಸಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಅವರು ಹೊಸ ಕಥೆಗಾರರ ಸೃಜನಶೀಲ ಅಭಿವ್ಯಕ್ತಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಪ್ರತಿಯೊಬ್ಬ ವ್ಯಕ್ತಿಯೊಳಗೂ ಕತೆಗಳು ಇರುತ್ತವೆ. ಸ್ಪೀಕ್ಸ್‌ನಂತಹ ಕಾರ್ಯಕ್ರಮಗಳು ಹೊಸ ಹೊಸ ಕತೆಗಾರರಿಗೆ ವೇದಿಕೆಯಾಗಿದ್ದು, ಪ್ರತಿಭೆಗಳನ್ನು ಗುರುತಿಸಲು ಸಹಾಯ ಮಾಡುತ್ತವೆ ಎಂದರು.

ಕತೆಗಾರ, ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ರಾಜಶೇಖರ ಹಳೆಮನೆ ಅವರು ಈ ಸಂದರ್ಭದಲ್ಲಿ ಮಾತನಾಡಿದರು.

ಸ್ಪೀಕ್ಸ್‌ನ  ಮೂರನೇ ಸಂಚಿಕೆಯಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕ ವಿರಾಟ್ ಪದ್ಮನಾಭ, ವಿದ್ಯಾರ್ಥಿಗಳಾದ ಸಂಜಯ್ ಚಿತ್ರದುರ್ಗ, ಸೃಷ್ಟಿ ಚಂಡಕಿ, ದರ್ಶಿನಿ ತಿಪ್ಪಾರೆಡ್ಡಿ, ಸಿಂಚನ ಕಲ್ಲೂರಾಯ ಅವರು ಕತೆಗಳನ್ನು ಪ್ರಸ್ತುತಪಡಿಸಿದರು.

ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ ಪಿ ಹಾಗೂ ವಿವಿಧ ವಿಭಾಗಗಳ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ. ಭಾಸ್ಕರ್ ಹೆಗಡೆ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿನಿ ದಿವ್ಯ ಶ್ರೀ ಹೆಗಡೆ ಅವರು ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next