Advertisement
ಕೋವಿಡ್ ಪರಿಣಾಮದಿಂದಾಗಿ ಸುಮಾರು ಎರಡು ವರ್ಷಗಳ ಕಾಲ ಶಾಲೆಯಲ್ಲಿ ಮಗುವಿನ ಕಲಿಕೆ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ ಎನ್ನುವುದು ಅಕ್ಷರಶಃ ಸತ್ಯ. ಎರಡು ವರ್ಷಗಳಲ್ಲಿ ಮಗು ಕಲಿಯಬೇಕಾದ ವಿಷಯ ವಸ್ತುವನ್ನು ಕಲಿತಿಲ್ಲ ಎಂದರೆ ಅದು ಶಿಕ್ಷಣ ಪದ್ಧತಿಗೆ ಮಾರಕವಾಗುವುದರೊಂದಿಗೆ ಒಂದು ಜನಾಂಗದ ಅಧಃಪತನಕ್ಕೂ ಕಾರಣವಾಗಬಹುದು. ಆದ್ದರಿಂದ ಕೋವಿಡ್ ಸಮಯದಲ್ಲಿ ಉಂಟಾದ ಕಲಿಕಾ ನಷ್ಟವನ್ನು ಸರಿದೂಗಿಸುವ ಹೊಣೆ ಶಿಕ್ಷಣ ವ್ಯವಸ್ಥೆಯ ಮೇಲಿದೆ. ಕೋವಿಡ್‌ನಿಂದ ಮುಖ್ಯವಾಗಿ ಸರಕಾರಿ ಶಾಲೆಗಳ ಮಕ್ಕಳ ಕಲಿಕೆಯ ಮೇಲೆ ಹೆಚ್ಚಿನ ಹೊಡೆತ ಬಿದ್ದಿರುವುದನ್ನು ನಾವು ನೋಡಿದ್ದೇವೆ.
Related Articles
Advertisement
ಇನ್ನೂ ಮುಂದುವರಿದು ರಾಜ್ಯ ಹಂತದಲ್ಲಿ ವಿಷಯವಾರು ಶಿಕ್ಷಕರಿಗೆ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ, ಜಿಲ್ಲಾ ಹಂತದಲ್ಲಿ ವಿಷಯವಾರು ಶಿಕ್ಷಕರಿಗೆ ತರಬೇತಿ, ತಾಲೂಕು ಮತ್ತು ಕ್ಲಸ್ಟರ್ ಹಂತದಲ್ಲಿಯು ತರಬೇತಿಗಳನ್ನು ಶಿಕ್ಷಕರಿಗೆ ಪೂರ್ಣ ಪ್ರಮಾಣದಲ್ಲಿ ರಜಾವಧಿಯಲ್ಲಿಯೇ ನೀಡಲಾಗಿದೆ. ಇದರಿಂದ ತರಬೇತಿಯ ನೆಪದಲ್ಲಿ ಶೈಕ್ಷಣಿಕ ವರ್ಷದ ಮಧ್ಯ ಮಕ್ಕಳ ಕಲಿಕೆಯ ಅಪವ್ಯಯವಾಗುವುದನ್ನು ಸಂಪೂರ್ಣವಾಗಿ ತಪ್ಪಿಸಿದಂತಾಗಿದೆ. ಒಟ್ಟಾರೆಯಾಗಿ 2022-23 ಶೈಕ್ಷಣಿಕ ವರ್ಷವನ್ನು ಮಕ್ಕಳ ಕಲಿಕೆಗೆ ಮಾತ್ರ ಸೀಮಿತವಾಗಿಸಿ, ಮಕ್ಕಳಲ್ಲಿ ಮೂಲ ಸಾಮರ್ಥ್ಯಗಳನ್ನು ಗಟ್ಟಿಗೊಳಿಸುವ ಕಡೆ ಹೆಚ್ಚು ಒತ್ತು ನೀಡಲಾಗಿದೆ. ಈ ಉಪಕ್ರಮದಲ್ಲಿ ಪಠ್ಯಪುಸ್ತಕಗಳನ್ನು ನೇರವಾಗಿ ಬೋಧನೆಗೆ ಬಳಸದೆ ಅಗತ್ಯಾನುಸಾರವಾಗಿ ಕಲಿಕಾ ಹಾಳೆಗಳಿಗೆ ಪೂರಕವಾಗಿ ಬಳಸಲು ಪ್ರೇರೇಪಿಸಲಾಗಿದೆ.
ಪ್ರಸಕ್ತದ ಶೈಕ್ಷಣಿಕ ವರ್ಷ ಪ್ರಾರಂಭದ 15 ದಿನಗಳ ಕಾಲ ಮಕ್ಕಳ ಪೂರ್ವ ಜ್ಞಾನ ಮತ್ತು ಕಲಿಕಾ ಮಟ್ಟವನ್ನು ಅಂದಾಜಿಸಲು ಪ್ರತೀ ವಿಷಯದಲ್ಲೂ ನೈದಾನಿಕ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದು ಮಕ್ಕಳ ಪೂರ್ವ ಕಲಿಕಾ ಜ್ಞಾನವನ್ನು ತಿಳಿಯಲು ಇರುವ ಸಾಧನವಾಗಿದೆ. ಇದು ಮಕ್ಕಳ ಕಲಿಕಾ ಅಗತ್ಯಗಳನ್ನು ತಿಳಿದುಕೊಳ್ಳುವುದರ ಜತೆಗೆ ಅದನ್ನು ಪೂರೈಸಲು ಯಾವ ರೀತಿ ಯೋಜನೆಗಳನ್ನು ಶಿಕ್ಷಕರು ಹಾಕಿಕೊಳ್ಳಬೇಕು ಎಂಬುದನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. ಶಿಕ್ಷಣ ಇಲಾಖೆ ಮಕ್ಕಳ ಕಲಿಕೆಯನ್ನು ಅರ್ಥಪೂರ್ಣಗೊಳಿಸಲು ಕಲಿಕಾ ಚೇತರಿಕೆ ಉಪಕ್ರಮವನ್ನು ಮನೋವೈಜ್ಞಾನಿಕ ಹಾಗೂ ಶಿಕ್ಷಣ ಶಾಸ್ತ್ರೀಯ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಪರಿಪೂರ್ಣವಾಗಿ ಆಯೋಜಿಸಿದೆ ಎಂದು ಹೆಮ್ಮೆಯಿಂದ ಹೇಳಬಹುದು. ರಾಜ್ಯದ ಶೈಕ್ಷಣಿಕ ಕ್ಷೇತ್ರದಲ್ಲಿ ಈ ಉಪಕ್ರಮವು ಒಂದು ದೊಡ್ಡ ಮೈಲಿಗಲ್ಲಾಗಿದೆ.
ಸರಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕೆಗೆ ಒತ್ತು ನೀಡಲು ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಲೇ ಬರಲಾಗಿದೆ. ಕೋವಿಡ್‌ನ ಅನಂತರ ಸರಕಾರಿ ಶಾಲೆಗಳ ಕಲಿಕಾ ವಿಧಾನದಲ್ಲಿ ಅನೇಕ ಬದಲಾವಣೆಗಳು ನಡೆದಿವೆ. ಕಲಿಕಾ ಚೇತರಿಕೆ ಉಪಕ್ರಮದ ಮೂಲಕ ಕಲಿಕಾಫಲಗಳನ್ನು ಪರಿಪೂರ್ಣವಾಗಿ ಕಲಿತು ಮುಂದಿನ ಶೈಕ್ಷಣಿಕ ಆರಂಭದ ವೇಳೆಗೆ ಪ್ರತೀ ವಿದ್ಯಾರ್ಥಿಯು ತನ್ನ ತರಗತಿ ಮಟ್ಟದ ಕಲಿಕೆಯನ್ನು ಯಾವುದೇ ಅಡೆ ತಡೆ ಇಲ್ಲದೆ ಸಾಧಿಸಲು ಸಜ್ಜುಗೊಳಿಸುವಂತೆ ಮಾಡುವ ಗುರಿಯನ್ನು ಹೊಂದಿದೆ.
ಇತ್ತೀಚಿನ ದಿನಗಳಲ್ಲಿ ಸರಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕೆಯ ವಿಚಾರದಲ್ಲಿ ಹೊಸ ಹೊಸ ಕಾರ್ಯಕ್ರಮಗಳು ಜಾರಿಯಾಗುತ್ತಿವೆ. ಆದರೆ ಕಲಿಕಾ ಚೇತರಿಕೆ ಒಂದು ಉಪಕ್ರಮವಾಗಿರುವುದರಿಂದ ಇದರ ವ್ಯಾಪ್ತಿ ವಿಸ್ತಾರವಾಗಿದೆ. ಇದರ ಮೂಲಕ ಮಕ್ಕಳ ಸಾಮರ್ಥ್ಯವನ್ನು ಗಟ್ಟಿಯಾಗಿಸಿ, ಹೊಸ ಶಿಕ್ಷಣ ನೀತಿಯ ಮೂಲ ಉದ್ದೇಶಗಳನ್ನು ಈಡೇರಿಸಲು ನಾವೆಲ್ಲರೂ ನಮ್ಮ ಮಕ್ಕಳನ್ನು ಸಿದ್ಧಪಡಿಸಬೇಕಾಗಿದೆ. ನಮ್ಮ ಶಿಕ್ಷಣ ವ್ಯವಸ್ಥೆಗೆ ಕಲಿಕಾ ಚೇತರಿಕೆಯ ಮೂಲಕ ಹೊಸ ಶೈಕ್ಷಣಿಕ ಸ್ಪರ್ಶವನ್ನು ನೀಡುವ ಜವಾಬ್ದಾರಿಯು ನಮ್ಮೆಲ್ಲರ ಮೇಲಿದೆ ಎಂಬುದನ್ನು ನಾವು ಮರೆಯಬಾರದು.
-ದಿಲೀಪ್ ಕುಮಾರ್ ಸಂಪಡ್ಕ