ದೇವನಹಳ್ಳಿ: ರಾಜ್ಯಾದ್ಯಂತ ಉತ್ತಮ ಮಳೆಯಾಗಿದ್ದು, ಬೆಂಗಳೂರು ಗ್ರಾಮಾಂತರ ತಾಲೂಕಿನ ಕೆರೆಗಳು ತುಂಬಿ ಕೋಡಿ ಹರಿದಿರುವುದು ಸಂತಸ ತಂದಿದೆ. ಮಳೆನೀರು ಕೆರೆಗಳಲ್ಲಿ ಶೇಖರಣೆಯಾಗಿದ್ದು ರೈತರು ಉತ್ತಮ ಬೆಳೆ ಬೆಳೆಯುವಂತಾಗಬೇಕು ಎಂದು ಶಾಸಕ ಎಲ್.ಎನ್. ನಾರಾಯಣಸ್ವಾಮಿ ತಿಳಿಸಿದರು.
ಪಟ್ಟಣದ ದೊಡ್ಡಬಳ್ಳಾಪುರ ರಸ್ತೆಯಲ್ಲಿರುವ ದೊಡ್ಡ ಕೆರೆ ತುಂಬಿ ಕೋಡಿ ಹರಿದಿರುವುದರಿಂದ ಬಾಗಿನ ಅರ್ಪಿಸಿ, ಮಾತನಾಡಿದರು. ಮೂವತ್ತು ವರ್ಷಗಳ ನಂತರ ಕೆರೆ ತುಂಬಿರುವುದು ಸಂತಸ ತಂದಿದೆ. ತಾಲೂ ಕಿನಾದ್ಯಂತ ಉತ್ತಮ ಮಳೆಯಾಗಿ ಕೆರೆಗಳು ತುಂಬಿ ಕೋಡಿ ಹರಿಯುತ್ತಿವೆ. ಇದರಿಂದ ಅಕ್ಕಪಕ್ಕದ ತೋಟ ಗಳ ಹತ್ತಿರ ಹಾಗೂ ಸುತ್ತಮುತ್ತಲಿನಲ್ಲಿರುವ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಲಿದೆ.
ನಾಗವಾರ ಹೆಬ್ಟಾಳ ಶುದ್ದೀಕರಿಸಿದ ನೀರನ್ನೂ ಸಹ ಈ ಕೆರೆಗೆ ಬಿಟ್ಟಿರುವುದರಿಂದ ಮಳೆ ನೀರು ಮತ್ತು ತ್ಯಾಜ್ಯನೀರು ಸೇರಿ ಕೆರೆ ತುಂಬಿ ಕೋಡಿ ಹರಿಯಲು ಸಹಕಾರಿಯಾ ಗಿದೆ. ಕೆರೆಗಳನ್ನು ಅಭಿವೃದ್ದಿಪಡಿಸಿದರೆ ಕೆರೆಗಳಲ್ಲಿ ಮಳೆ ನೀರು ಶೇಖರಣೆಯಾಗಲು ಸಹಕಾರಿಯಾಗುತ್ತದೆ. ನಮ್ಮ ಪೂರ್ವಜರು ಆಗಿನ ಕಾಲದಲ್ಲಿ ಕೆರೆ, ಕುಂಟೆ, ಬಾವಿ ನಿರ್ಮಾಣ ಮಾಡಿ ನೀರು ಶೇಖರಣೆ ಮಾಡಲು ಆದ್ಯತೆ ನೀಡಿದರು ಎಂದರು.
ರಾಜಕಾಲುವೆ ದುರಸ್ತಿಗೆ ಸರ್ವೆ: ರಾಜಕಾಲುವೆ ದುರಸ್ತಿಗಾಗಿ ಸರ್ವೆ ಇಲಾಖೆಯವರಿಗೆ ಸರ್ವೆ ಮಾಡಲು ಸೂಚಿಸಲಾಗಿದೆ. ಮಳೆ ನಿಂತ ಕೆಲವೇ ದಿನ ಗಳಲ್ಲೆ ರಾಜಕಾಲುವೆ ಕೆಲಸ ಪ್ರಾರಂಭಿಸಲಾಗುವುದು. ತಾಲೂಕಿನ ಅನೇಕ ಕಡೆ ಕೆರೆಗಳು ಕೋಡಿ ಹೋಗಿದ್ದು, ಆ ಭಾಗದ ರೈತರು ಇದೇ ರೀತಿ ದೂರಿದ್ದಾರೆ. ನಮಗೆ ರಾಜಕಾಲುವೆ ಪಕ್ಕದ ರೈತರ ಸಹಕಾರ ನೀಡಿದರೆ ಮಾತ್ರ ಕಾಮಗಾರಿ ಪ್ರಾರಂಭಿಸಬಹುದು.
ಪುರಸಭಾ ಅಧ್ಯಕ್ಷೆ ರೇಖಾ ವೇಣುಗೋಪಾಲ್, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಎನ್.ನಾಗೇಶ್, ಪುರಸಭಾ ಉಪಾಧ್ಯಕ್ಷೆ ಪುಷ್ಪಲತಾ ಲಕ್ಷ್ಮೀನಾರಾಯಣ್, ಪುರಸಭಾ ಸದಸ್ಯರಾದ ಎನ್.ರಘು, ಬಾಲರಾಜ್, ಎಸ್.ಸಿ.ಚಂದ್ರಪ್ಪ, ಲೀಲಾವತಿ, ಮುನಿಕೃಷ್ಣ, ಮಂಜು ನಾಥ್, ಟೌನ್ ಜೆಡಿಎಸ್ ಅಧ್ಯಕ್ಷ ಮುನಿನಂಜಪ್ಪ, ಪ್ರಧಾನ ಕಾರ್ಯದರ್ಶಿ ಸಾಯಿಕುಮಾರ್ ಬಾಬು, ಮಾಜಿ ಪುರಸಭಾ ಸದಸ್ಯರಾದ ವಿ.ಗೋಪಾಲ್, ಕುಮಾರ್, ಮುಖಂಡ ಕಾಳಪ್ಪನವರ ವೆಂಕಟೇಶ್, ವಿ. ಹನುಮಂತಪ್ಪ, ಎಂ.ಎಸ್.ರಮೇಶ್, ಕಾಂತರಾಜು, ಶಶಿ ಕಲಾ ಕಾಂತರಾಜು, ವಿಜಯಕುಮಾರ್ ಇತರರಿದ್ದರು.
ಮೂರು ದಶಕದ ಬಳಿಕ ಕೋಡಿ ಹರಿದ ದೊಡ್ಡಕರೆ-
ದೇವನಹಳ್ಳಿ: ಸದಾ ಬರಪೀಡಿತ ತಾಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ದೇವನಹಳ್ಳಿ ತಾಲೂಕು ಹೇಳಿ ಕೇಳಿ ಬಯಲು ಸೀಮೆಯ ಅವಿಭಾಜ್ಯ ಅಂಗ. ಕೆರೆ ಕುಂಟೆಗಳು ತನ್ನ ಒಡಿಲುನಲ್ಲಿರುವ ಸತತ ಮಳೆ ಅಭಾವ, ಹವಾಮಾನ ವೈಪರ್ಯ ದಿಂದ ಮೂರು ದಶಕಗಳಿಂದಲೂ ನಿರಂತರವಾಗಿ ಬರಕ್ಕೆ ತುತ್ತಾಗಿತ್ತು.
ಇದೀಗ ಬೀಳುತ್ತಿರುವ ಮಳೆಯಿಂದಾಗಿ ದೊಡ್ಡಕೆರೆ ಕೋಡಿ ಹರಿದು ಹೋಗುತ್ತಿರುವುದು ಸಂತಸ ತಂದಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆ ಯಲ್ಲಿ ದೊಡ್ಡಕೆರೆಯಲ್ಲಿಯೇ ನಾಗವಾರ ಮತ್ತು ಹೆಬ್ಟಾಳ ಶುದ್ಧೀಕರಿಸಿದ ನೀರಿನ ಶಂಕುಸ್ಥಾಪನೆ ಮಾಡಲಾಗಿತ್ತು. ನಂತರ ತ್ಯಾಜ್ಯ ನೀರನ್ನು ಶುದ್ದೀಕರಿಸಿ ಕೆರೆಗೆ ಹರಿಸಲಾಗಿತ್ತು.
ಧಾರಾಕಾರ ಮಳೆ ನೀರು ಮತ್ತು ಈ ಎರಡು ನೀರುಗಳು ಸೇರಿರುವುದ ರಿಂದ ಕೆರೆ ಕೋಡಿ ಹರಿಯಲು ಸಾಧ್ಯವಾಗಿದೆ. ಮೂವತ್ತು ವರ್ಷಗಳ ನಂತರ ಕೆರೆ ಕೋಡಿ ಹರಿದಿ ರುವುದು ಸುತ್ತಮುತ್ತಲಿನ ರೈತರ ಮತ್ತು ಸಾರ್ವಜನಿಕರಲ್ಲಿ ಹರ್ಷ ಮೂಡಿಸಿದೆ. ನಿರಂತರ ಬರಗಾಲದಿಂದ ತಾಲೂಕಿನಲ್ಲಿ ಅಂತ ರ್ಜಲ ಕುಸಿದು ಕೊಳವೆಬಾವಿಗಳು ಸರಣಿಯಂತೆ ಬತ್ತಿಹೋಗಿತ್ತು.
ಇಂತಹ ಸಂದಿಗ್ನ ಪರಿಸ್ಥಿತಿಯಲ್ಲಿ ತಾಲೂಕಿನಲ್ಲಿ ಮಳೆ ಮತ್ತೆ ವರುಣನ ಕೃಪೆ ತೋರಿದ್ದು ತಾಲೂಕಿನ ಪಾಲಿಗೆ ಜೀವನಾಡಿಗಳಾಗಿರುವ ಕೆರೆ ಕುಂಟೆಗಳು ನೀರು ತುಂಬಿ ರೈತರ ಮೊಗದಲ್ಲಿ ಹರ್ಷದ ಹೊನಲು ಹೆಚ್ಚಿಸಿದೆ. ತಾಲೂಕಿನ ಬಹು ತೇಕ ಕೆರೆಗಳು ತುಂಬಿ ಕೋಡಿ ಹರಿಯುತ್ತಿವೆ. ದೊಡ್ಡ ಕೆರೆ ತುಂಬಿ ಕೋಡಿ ಹೋಗುತ್ತಿರುವುದರಿಂದ ಈ ಕೆರೆಯಿಂದ ದೊಡ್ಡಸಣ್ಣೆಕೆರೆ ಮೂಲಕ ಬೆಟ್ಟಕೋಟೆ ಕೆರೆಗೆ ನೀರು ಸೇರಲಿದೆ.
ಇದನ್ನೂ ಓದಿ:- ಪ್ರತಾಪ್ ಸಿಂಹ ಸಂಸದ ಆಗಲು ಲಾಯಕ್ಕಿಲ್ಲ : ಇಕ್ಬಾಲ್ ಅನ್ಸಾರಿ
ಈ ಹಿಂದೆ ಜಿಲ್ಲಾಧಿಕಾರಿ ಯಾಗಿದ್ದ ಕರೀಗೌಡ ಅವರು ಜಿಲ್ಲೆಯಲ್ಲಿ ಸಾಕಷ್ಟು ಕೆರೆಗಳನ್ನು ಹೂಳೆತ್ತುವ ಕಾರ್ಯ ಮಾಡಿದ್ದರು. ಮಳೆ ನೀರು ಯಥೇಚ್ಚವಾಗಿ ಬಂದಿರುವುದರಿಂದ ಸುತ್ತ ಮುತ್ತಲಿನ ಕೆರೆಗಳ ಸಮೀಪವಿರುವ ಬೋರ್‌ವೆಲ್ ಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಲು ಅನುಕೂಲ ವಾಗಿದೆ. ಮುಂದಿನ ಬೇಸಿಗೆ ವೇಳೆಗೆ ನೀರಿನ ಸಮಸ್ಯೆಗೆ ಒಂದಿಷ್ಟು ಪರಿಹಾರ ನೀಡಲು ಸಾಧ್ಯವಾಗುತ್ತದೆ. ಮಳೆಯಿಂದ ಬಂದಿರುವ ನೀರನ್ನು ಸಂರಕ್ಷಿಸಬೇಕು ಎಂದು ಸಾರ್ವಜನಿಕರ ವಾದವಾಗಿದೆ.
“ಕೆರೆ ಕೋಡಿ ಹರಿದಿದೆ. ಕೆರೆಯ ನೀರನ್ನು ಸಂರಕ್ಷಿಸಬೇಕು. ಕೆರೆಯಲ್ಲಿರುವ ಜಾಲಿ ಮರಗಳನ್ನು ತೆಗೆದರೆ ಮಾತ್ರ ಕೆರೆಯ ನೀರನ್ನು ಸಂರಕ್ಷಿಸಲು ಸಾಧ್ಯ. ಎಷ್ಟೋ ವರ್ಷಗಳ ನಂತರ ಇಂತಹ ಮಳೆಯಾಗಿರುವುದು ಜನಮಾನಸದಲ್ಲಿ ಸಂತಸ ಮೂಡಿಸಿದೆ.”
– ಆನಂದ್, ನೀರಗಂಟಿಪಾಳ್ಯದ ನಿವಾಸಿ
“ತಾಲೂಕಿನಲ್ಲಿ ಎಲ್ಲಾ ಕೆರೆಗಳು ತುಂಬಿ ಕೋಡಿ ಹರಿದಿವೆ. ಆದರೆ ಕೆರೆಗಳ ಸಮೀಪದಲ್ಲಿರುವ ರಾಜಕಾಲುವೆ ಗಳು ಒತ್ತುವರಿಯಾಗಿದ್ದು ಮಳೆಯ ನೀರು ಸರಾಗವಾಗಿ ಹರಿಯಲು ಎಲ್ಲಾ ಕೆರೆಗಳ ಹತ್ತಿರದಲ್ಲಿರುವ ರಾಜಕಾಲುವೆ ಗಳನ್ನು ಒತ್ತುವರಿ ತೆರವುಗೊಳಿಸಲು ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಗಮನಹರಿಸಬೇಕು.” –
ಬಿದಲೂರು ರಮೇಶ್, ತಾಲೂಕು ರೈತಸಂಘದ ಪ್ರಧಾನ ಕಾರ್ಯದರ್ಶಿ
“30 ವರ್ಷಗಳಿಂದ ಕೆರೆ ತುಂಬದೆ ಅವನತಿಯ ಅಂಚಿಗೆ ಕೆರೆಗಳು ಹೋಗಿದ್ದವು. 30 ವರ್ಷದ ನಂತರ ಕೆರೆ ತುಂಬಿರುವುದು ಸಂತಸ ತಂದಿದೆ.”
– ಸುನಂದಮ್ಮ, ಸ್ಥಳೀಯ ಮಹಿಳೆ