ಬೆಂಗಳೂರು:ವಿಶ್ವದ ಅದ್ಭುತಗಳಲ್ಲಿ ಒಂದಾದ ನಯಾಗರ ಜಲಪಾತ ನೋಡಲು ಅಮೆರಿಕಾಕ್ಕೆ ಹೋಗಬೇಕಾಗಿಲ್ಲ, ಅದೇ ಮಾದರಿಯ ಸುಂದರ ಜಲಪಾತ ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ನಿರ್ಮಾಣವಾಗಿದ್ದು, ಡಿಸೆಂಬರ್ ಅಥವಾ ಜನವರಿ ಹೊತ್ತಿಗೆ ಪ್ರವಾಸಿಗರ ವೀಕ್ಷಣೆಗೆ ಲಭ್ಯವಾಗಲಿದೆ.
ಕಳೆದ ಒಂದು ವರ್ಷದಿಂದ ನಿರ್ಮಾಣ ಕಾಮಗಾರಿಯನ್ನು ಮಾಡಲಾಗುತ್ತಿದ್ದು, ಇದೀಗ ಅಂತಿಮ ಹಂತ ತಲುಪಿದೆ. ಇಂದು ತೋಟಗಾರಿಕಾ ಇಲಾಖಾ ಅಧಿಕಾರಿಗಳು ಭೇಟಿ ನೀಡಿ ಮಿನಿ ನಯಾಗರ ಫಾಲ್ಸ್ ವೀಕ್ಷಿಸಿದರು.
ಉದ್ಘಾಟನೆಗೂ ಮುನ್ನ ಪ್ರಾಯೋಗಿಕ ಪರೀಕ್ಷೆಯ ಹಿನ್ನೆಲೆಯಲ್ಲಿ ಮೊದಲ ದಿನವೇ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು 20ಅಡಿ ಎತ್ತರದಿಂದ 240ಅಶ್ವಶಕ್ತಿ ಬಳಸಿ ನೀರನ್ನು ಪಂಪ್ ಮಾಡುವ ಮೂಲಕ ನಯಾಗರ ಫಾಲ್ಸ್ ಮಾದರಿ ರೀತಿ ಮಾಡಲಾಗಿದೆ.
ಲಾಲ್ ಬಾಗ್ ನ ಕೆರೆಗಳಿಂದಲೇ ಮಿನಿ ಫಾಲ್ಸ್ ಗೆ ಅಗತ್ಯ ನೀರು ಪೂರೈಕೆ ಮಾಡಲಾಗುತ್ತಿದೆ. ಅಂದಾಜು 1.8ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದೆ ಈ ಮಿನಿ ನಯಾಗರ ಫಾಲ್ಸ್. ಇನ್ನೊಂದು ವಾರದಲ್ಲಿ ಕಾಮಗಾರಿ ಮುಗಿದಿದ್ದು, ಶೀಘ್ರವೇ ಜಲಪಾತ ಪ್ರವಾಸಿಗರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.