ತಿರುವನಂತಪುರ: ಮಹಾರಾಷ್ಟ್ರದ ಮೀನುಗಾರಿಕಾ ಸಚಿವ ನಿತೇಶ್ ರಾ
ಣೆ ಕೇರಳ “ಮಿನಿ ಪಾಕಿಸ್ಥಾನ” ಎಂಬ ವಿವಾದಾತ್ಮಕ ಹೇಳಿಕೆಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತೀವ್ರವಾಗಿ ಖಂಡಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ ಸಚಿವ ನಿತೇಶ್ ರಾಣೆಯವರ ಹೇಳಿಕೆಯು ಪ್ರಚೋದನಾತ್ಮಕ, ಖಂಡನೀಯ. ಸಂಘ ಪರಿವಾರದ ಪ್ರತ್ಯೇಕಿಸುವ ಅಜೆಂಡಾ ಹೊಂದಿರುವಂತಿದೆ. ಇದು ಸಂವಿಧಾನದ ಉಲ್ಲಂಘನೆಯಾಗಿದ್ದು, ರಾಣೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ ಅವರು ಸಂವಿಧಾನದ ನಿಯಮಗಳ ಉಲ್ಲಂಘಿಸಿದರೂ ಅಲ್ಲಿನ ಆಡಳಿತ ಪಕ್ಷದ ನಾಯಕರು ಈ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡದೇ ಇರುವುದು ಆಶ್ಚರ್ಯ ತಂದಿದೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಕೆಟ್ಟದಾಗಿ ಪ್ರತಿಕ್ರಿಯೆ ನೀಡುವುದು ದುರುದ್ದೇಶಪೂರಿತದಿಂದ ಕೂಡಿದ್ದು, ಇದು ಖಂಡನೀಯ ವಿಚಾರ.
ಇಂತಹ ದ್ವೇಷದ ಅಭಿಯಾನಗಳ ವಿರುದ್ಧ ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳು ಒಂದಾಗಲು ಸಿಎಂ ಪಿಣರಾಯಿ ಒತ್ತಾಯಿಸಿದರು.
ಸಚಿವ ನಿತೇಶ್ ರಾಣೆ ಹೇಳಿದ್ದೇನು?
ಸೋಮವಾರ ಪುಣೆ ಜಿಲ್ಲೆಯ ಪುರಂದರ ತಾಲೂಕಿನಲ್ಲಿ ಅಫ್ಜಲ್ ಖಾನ್ ಎದುರು ಛತ್ರಪತಿ ಶಿವಾಜಿಯ ಗೆಲುವಿನ ವರ್ಷಾಚರಣೆ ವೇಳೆ “ಕೇರಳ ಮಿನಿ ಪಾಕಿಸ್ಥಾನವಾಗಿದೆ. ಅದಕ್ಕಾಗಿಯೇ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅಲ್ಲಿಂದ ಆಯ್ಕೆಯಾಗಿದ್ದಾರೆ. ಎಲ್ಲಾ ಭಯೋತ್ಪಾದಕರು ಅವರಿಗೆ ಮತ ಹಾಕುತ್ತಾರೆ. ಇದು ಸತ್ಯ. ಇವರೆಲ್ಲಾ ಭಯೋತ್ಪಾದಕರ ನೆರವಿನಿಂದ ಸಂಸದರಾಗಿದ್ದಾರೆ” ಎಂದು ರಾಣೆ ಹೇಳಿಕೆ ನೀಡಿದ್ದರು.
ತಮ್ಮ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ರಾಣೆ, ಕೇರಳ ಭಾರತದ ಭಾಗವಾಗಿದೆ ಎಂದು ಸ್ಪಷ್ಟಪಡಿಸಿದರು. ಆದರೆ ಕೇರಳನ್ನು ಪಾಕಿಸ್ಥಾನಕ್ಕೆ ಹೋಲಿಸಿದ ಹೇಳಿಕೆಯ ಸಮರ್ಥಿಸಿಕೊಂಡು ಇಲ್ಲಿ ಹಿಂದೂಗಳನ್ನು ಪಾಕಿಸ್ಥಾನದಲ್ಲಿರುವಂತೆ ನೋಡಿಕೊಳ್ಳಲಾಗುತ್ತಿದೆ ಅದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ನನ್ನ ಹೇಳಿಕೆಯ ಉದ್ದೇಶವಾಗಿತ್ತು ಎಂದಿದ್ದಾರೆ. “ಧಾರ್ಮಿಕ ಮತಾಂತರಗಳು” ಮತ್ತು “ಲವ್ ಜಿಹಾದ್” ನಂತಹ ವಿಷಯಗಳ ಉಲ್ಲೇಖಿಸಿದ್ದು, ತಮ್ಮ ಹೇಳಿಕೆ ವಾಸ್ತವಿಕವಾಗಿದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ ಅವರ ಪುತ್ರ ನಿತೇಶ್ ರಾಣೆ ಇತ್ತೀಚೆಗೆ ಮುಕ್ತಾಯವಾದ 2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕಂಕಾವ್ಲಿ ಕ್ಷೇತ್ರದಿಂದ ಗೆದ್ದಿದ್ದಾರೆ.