ತಿರುವನಂತಪುರಂ: ಚಾಲಕನ ನಿಯಂತ್ರಣ ತಪ್ಪಿದ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದು ಕಮರಿಗೆ ಬಿದ್ದು ಸಂಭವಿಸಿದ ಅಪಘಾತದಲ್ಲಿ ನಾಲ್ವರು ಮೃತಪಟ್ಟು 32 ಮಂದಿ ಗಾಯಗೊಂಡಿರುವ ಘಟನೆ ಕೊಟ್ಟಾರಕರ-ದಿಂಡುಗಲ್ ರಾಷ್ಟ್ರೀಯ ಹೆದ್ದಾರಿಯ ಪುಲ್ಲುಪಾರ ಬಳಿ ಸೋಮವಾರ(ಜ.6) ಮುಂಜಾನೆ ಸಂಭವಿಸಿದೆ.
ಮೃತರನ್ನು ಮಾವೇಲಿಕ್ಕರ ನಿವಾಸಿಗಳಾದ ಅರುಣ್ ಹರಿ (55), ರಾಮ ಮೋಹನ್ (40), ಸಂಗೀತ್ (45), ಮತ್ತು ಬಿಂದು ಉನ್ನಿಥಾನ್ (59) ಎಂದು ಗುರುತಿಸಲಾಗಿದೆ.
ಕೆಎಸ್‌ಆರ್‌ಟಿಸಿ ಬಸ್ ಪ್ರವಾಸಿಗರನ್ನು ತಮಿಳುನಾಡಿನ ತಂಜಾವೂರಿಗೆ ಕರೆತಂದಿದ್ದು ಬಳಿಕ ಅಲಪ್ಪುಳ ಜಿಲ್ಲೆಯ ಮಾವೇಲಿಕ್ಕರಕ್ಕೆ ಬೆಳಿಗ್ಗೆ 6.15 ರ ಸುಮಾರಿಗೆ ಹಿಂತಿರುಗುತ್ತಿರುವ ವೇಳೆ ಇಡುಕ್ಕಿ ಜಿಲ್ಲೆಯ ಕಲ್ಲಿವಾಯಲ್ ಎಸ್ಟೇಟ್ ಬಳಿ ಅಪಘಾತಕ್ಕೀಡಾಗಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ ಬಸು ಕಡಿದಾದ ತಿರುವಿನಲ್ಲಿ ಬ್ರೇಕ್ ವಿಫಲಗೊಂಡು 70 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ ಈ ವೇಳೆ ಬಸ್ಸು ಮರಕ್ಕೆ ಗುದ್ದಿ ನಿಂತಿದ್ದರಿಂದ ಹೆಚ್ಚಿನ ಅವಘಡ ತಪ್ಪಿದೆ ಎಂದು ಹೇಳಲಾಗಿದೆ.
ಘಾಟನೆ ನಡೆದ ಕೂಡಲೇ ಸ್ಥಳೀಯ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು ಬಳಿಕ ಸ್ಥಳೀಯರು, ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ಸೇರಿ ಬಸ್ಸಿನಲ್ಲಿದ್ದವರ ರಕ್ಷಣಾ ಕಾರ್ಯ ನಡೆಸಿದ್ದಾರೆ ಈ ವೇಳೆ ನಾಲ್ವರು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ ಉಳಿದ 32 ಮಂದಿ ಗಾಯಗೊಂಡಿದ್ದು ಅವರನ್ನು ಮುಂಡಕಯಂ ನಲ್ಲಿರುವ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಕೊಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Kundapura: ನರೇಗಾದಿಂದ ಆಲೂರಿನ ಮಹಿಳೆಯ ಸ್ವಾವಲಂಬಿ ಬದುಕು