ಬೆಂಗಳೂರು: “ನಮ್ಮ ಮೆಟ್ರೋ’ ಲಾಲ್‌ಬಾಗ್ ನಿಲ್ದಾಣದಲ್ಲಿ ಪ್ರತಿನಿತ್ಯ ಸಾಮಾನ್ಯವಾಗಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಅಂದಾಜು 15 ಸಾವಿರ. ಆದರೆ, ಬುಧವಾರ ಈ ಸಂಖ್ಯೆ ದುಪ್ಪಟ್ಟಾಗಿತ್ತು!
ಇದು ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಬರುವವರ ಅನುಕೂಲಕ್ಕಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ) ನೀಡಿದ್ದ “ವಿಶೇಷ ಆಫರ್’ ಎಫೆಕ್ಟ್. ಸ್ವಾತಂತ್ರೊತ್ಸವದ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ.
ಇದರ ವೀಕ್ಷಣೆಗೆ ಬರುವವರ ಅನುಕೂಲಕ್ಕಾಗಿ ಲಾಲ್‌ಬಾಗ್ ನಿಲ್ದಾಣದಿಂದ ಮೆಟ್ರೋದಲ್ಲಿ ಎಲ್ಲಿಗೆ ಪ್ರಯಾಣಿಸಿದರೂ 30 ರೂ. ನಿಗದಿಪಡಿಸಲಾಗಿದೆ. ಕೊನೆಯ ದಿನವಾದ ಪ್ರದರ್ಶನಕ್ಕೆ ಜನಸಾಗರವೇ ಹರಿದುಬಂದಿತು. ಅದರಲ್ಲಿ ಬಹುತೇಕರು ಮೆಟ್ರೋದಲ್ಲೇ ಬಂದಿಳಿದರು. ಇದರಿಂದ ನಿಲ್ದಾಣವು ಜನಸಂದಣಿಯಿಂದ ಗಿಜಗುಡುತ್ತಿತ್ತು.
ಸಾರ್ವತ್ರಿಕ ರಜೆ ಮತ್ತು ಕೊನೆಯ ದಿನವಾದ್ದರಿಂದ ಉದ್ಯಾನದ ಸುತ್ತ ವಾಹನದಟ್ಟಣೆ ಎಂದಿಗಿಂತ ಹೆಚ್ಚಿತ್ತು. ಈ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಬಹುತೇಕರು ಮೆಟ್ರೋ ಮೊರೆಹೋದರು. ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗಿದ್ದರಿಂದ ರೈಲುಗಳು ತುಂಬಿ ತುಳುಕುತ್ತಿದ್ದವು. ಇದರಿಂದ ಉಂಟಾದ ನೂಕುನುಗ್ಗಲು ನಿಭಾಯಿಸಲು ಮೆಟ್ರೋ ಸಿಬ್ಬಂದಿ ಹರಸಾಹಸ ಪಡಬೇಕಾಯಿತು.
ಪ್ರಯಾಣಿಕರ ದಟ್ಟಣೆ ನಿಭಾಯಿಸಲು ಕೊನೆಗೆ ಆಟೋಮೆಟಿಕ್ ಗೇಟ್‌ಗಳಲ್ಲದೆ, ಜನ ಮ್ಯಾನ್ಯುವಲ್ ಗೇಟುಗಳ ಮೂಲಕ ಪೇಪರ್ ಟಿಕೆಟ್ ಹೊಂದಿದವರಿಗೆ ಅವಕಾಶ ಕಲ್ಪಿಸಲಾಯಿತು. ಹಾಗಾಗಿ, ಇಡೀ ದಿನ ಈ ನಿಲ್ದಾಣದಲ್ಲಿ ಓಡಾಡಿದ ಪ್ರಯಾಣಿಕರ ಸಂಖ್ಯೆ ಕೂಡ ನಿಖರವಾಗಿ ಲೆಕ್ಕಕ್ಕೆ ಸಿಕ್ಕಿಲ್ಲ ಎಂದು ಬಿಎಂಆರ್‌ಸಿ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯು.ಎ. ವಸಂತರಾವ್ ತಿಳಿಸಿದರು.
ಆದರೆ, ಈವರೆಗಿನ ಅಂದಾಜು ಪ್ರಕಾರ ರಾತ್ರಿ 8ರವರೆಗೆ ಇಡೀ ದಿನ ಒಟ್ಟಾರೆ ಎರಡೂ ಮಾರ್ಗಗಳ ಮೆಟ್ರೋದಲ್ಲಿ ಪ್ರಯಾಣಿಸಿದವರ ಸಂಖ್ಯೆ 3.33 ಲಕ್ಷ ಇದ್ದು, ಇದರಲ್ಲಿ 33 ಸಾವಿರ ಜನ ಲಾಲ್‌ಬಾಗ್ ನಿಲ್ದಾಣದಿಂದಲೇ ಪ್ರಯಾಣಿಸಿದ್ದಾರೆ ಎಂದರು.
-3.33 ಲಕ್ಷ ಇಡೀ ದಿನ ಮೆಟ್ರೋದಲ್ಲಿ ಪ್ರಯಾಣಿಸಿದವರು
-1.88 ಲಕ್ಷ ಹಸಿರು ಮಾರ್ಗದಲ್ಲಿ ಸಂಚಾರ
-1.45 ಲಕ್ಷ ನೇರಳೆ ಮಾರ್ಗದಲ್ಲಿ ಸಂಚರಿಸಿದವರು
-33,204 ಲಾಲ್‌ಬಾಗ್ ನಿಲ್ದಾಣದಿಂದ ಪ್ರಯಾಣಿಸಿದವರು
-15,000 ಸಾಮಾನ್ಯ ದಿನಗಳಲ್ಲಿ ಲಾಲ್‌ಬಾಗ್ ನಿಲ್ದಾಣದಿಂದ ಪ್ರಯಾಣ