Advertisement

ಲಾಹೋರ್‌ ದಾಳಿಗೊಳಗಾದವರಿಂದಲೇ ಪಾಕಿಸ್ಥಾನದಲ್ಲಿ ಕ್ರಿಕೆಟ್‌ ಪುನರಾರಂಭ

07:25 AM Oct 28, 2017 | Team Udayavani |

ಲಾಹೋರ್‌: ಸರಿಯಾಗಿ 8 ವರ್ಷಗಳ ಹಿಂದೆ, 2009ರ ಮಾ. 3ರಂದು ಲಾಹೋರ್‌ನ ಗದ್ದಾಫಿ ಸ್ಟೇಡಿಯಂ ಬಳಿ ಪ್ರವಾಸಿ ಶ್ರೀಲಂಕಾ ಕ್ರಿಕೆಟಿಗರಿದ್ದ ಬಸ್ಸಿನ ಮೇಲೆ ನಡೆದ ಉಗ್ರರ ದಾಳಿ ಕ್ರೀಡಾ ಇತಿಹಾಸದ ಒಂದು ಕಪ್ಪು ಚುಕ್ಕಿ. ಅಂದಿನಿಂದ ಪಾಕಿಸ್ಥಾನದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳಿಗೆ ಬಾಗಿಲು ಮುಚ್ಚಿತು. ಐಸಿಸಿಯಿಂದಲೂ ಇದಕ್ಕೆ ನಿಷೇಧ ಮುದ್ರೆ ಬಿತ್ತು. ಯಾವ ತಂಡ ಕೂಡ ಪಾಕಿಸ್ಥಾನದತ್ತ ಮುಖ ಮಾಡಲಿಲ್ಲ.

Advertisement

ಕ್ರಿಕೆಟ್‌ ಚಕ್ರ ಉರುಳಿದೆ. 8 ವರ್ಷಗಳ ಬಳಿಕ ಪಾಕಿಸ್ಥಾನದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಸೂಕ್ತವಾದ ವಾತಾವರಣವೊಂದು ಕಂಡುಬಂದಂತಿದೆ. ಅಂದು ದಾಳಿಗೊಳಗಾದ ಶ್ರೀಲಂಕಾ ತಂಡವೇ ಮತ್ತೆ ಪಾಕಿಸ್ಥಾನದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಚಾಲನೆ ನೀಡುತ್ತಿರುವುದೊಂದು ವಿಶೇಷ. ರವಿವಾರ ಲಾಹೋರ್‌ನಲ್ಲೇ ಟಿ-20 ಪಂದ್ಯವೊಂದರಲ್ಲಿ ಪಾಕಿಸ್ಥಾನವನ್ನು ಎದುರಿಸುವ ಮೂಲಕ ಈ ಭಯಪೀಡಿತ ನಾಡಿನಲ್ಲಿ ಮತ್ತೆ ಕ್ರಿಕೆಟ್‌ ಹವಾ ಎಬ್ಬಿಸಲಿದೆ.

ಶ್ರೀಲಂಕಾದ ಅನೇಕ ಹಿರಿಯ ಆಟಗಾರರು ಪಾಕ್‌ ಪ್ರವಾಸದಿಂದ ದೂರ ಸರಿಯಲು ನಿರ್ಧರಿಸಿದ್ದರಿಂದ ಯುವ ಪಡೆಯೊಂದು ಲಾಹೋರ್‌ನಲ್ಲಿ ಆಡಲು ಅಣಿಯಾಗಿದೆ. ತಿಸರ ಪೆರೆರ ಮೊದಲ ಸಲ ಶ್ರೀಲಂಕಾ ತಂಡವನ್ನು ಮುನ್ನಡೆಸಲಿದ್ದಾರೆ. ಆಟಗಾರರಿಗೆ ಆತ್ಮವಿಸ್ವಾಸ, ಸ್ಫೂರ್ತಿ ತುಂಬಲು ಲಂಕಾ ಕ್ರೀಡಾ ಸಚಿವ ದಯಾಸಿರಿ ಜಯಶೇಖರ ಕೂಡ ತಂಡದೊಂದಿಗೆ ಪಯಣಿಸಲಿದ್ದಾರೆ. ಶನಿವಾರ ಸಂಜೆಯ ಹೊತ್ತಿಗೆ ಶ್ರೀಲಂಕಾ ತಂಡ ಲಾಹೋರ್‌ನಲ್ಲಿರುತ್ತದೆ.

ಅಹಸಾಜ್‌ ರಾಜ ಅಂಪಾಯರ್‌!
2009ರ ದಾಳಿ ವೇಳೆ ಶ್ರೀಲಂಕಾ ತಂಡದ ಬಸ್ಸಿನಲ್ಲಿದ್ದ ಅನೇಕರು ಈ ಪ್ರವಾಸದ ವೇಳೆ ಜತೆಗಿರುವುದು ವಿಶೇಷ. ಇವರಲ್ಲಿ ಅಸಂಕ ಗುರುಸಿನ್ಹ, ಹಶಾನ್‌ ತಿಲಕರತ್ನ ಪ್ರಮುಖರು. ಇಂದು ಗುರುಸಿನ್ಹ ಲಂಕಾ ತಂಡದ ಮ್ಯಾನೇಜರ್‌ ಆಗಿದ್ದಾರೆ, ತಿಲಕರತ್ನ ಬ್ಯಾಟಿಂಗ್‌ ಕೋಚ್‌ ಆಗಿದ್ದಾರೆ.

ಈ ದಾಳಿಯ ವೇಳೆ ಪಾಕಿಸ್ಥಾನಿ ಅಂಪಾಯರ್‌ ಅಹಸಾನ್‌ ರಾಜ ಗಂಭೀರವಾಗಿ ಗಾಯಗೊಂಡು ಜೀವನ್ಮರಣದ ನಡುವೆ ಹೋರಾಡಿದ್ದರು. ಅವರ ಶ್ವಾಸಕೋಶ ಹಾಗೂ ಜಠರಕ್ಕೆ ಗಂಭೀರ ಹಾನಿಯಾಗಿತ್ತು. ರಾಜ ಬದುಕಿ ಉಳಿದದ್ದೇ ಒಂದು ಪವಾಡವಾಗಿತ್ತು. ರವಿವಾರದ ಟಿ20 ಪಂದ್ಯದ ವೇಳೆ ಅಹಸಾನ್‌ ರಾಜ್‌ ಫೀಲ್ಡ್‌ ಅಂಪಾಯರ್‌ ಆಗಿ ಕಾರ್ಯ ನಿಭಾಯಿಸಲಿದ್ದಾರೆ!

Advertisement

“ಶ್ರೀಲಂಕಾ ತಂಡ ಮರಳಿ ಲಾಹೋರ್‌ಗೆ ಆಗಮಿಸಲಿದೆ. ಈ ಪಂದ್ಯದಲ್ಲಿ ತೀರ್ಪುಗಾರನಾಗಿ ಕಾಣಿಸಿಕೊಳ್ಳುವುದು ನನಗೆ ಒದಗಿದ ಮಹಾನ್‌ ಗೌರವ. ಶ್ರೀಲಂಕಾ ತಂಡದ ಆಗಮನದಿಂದ ಪಾಕಿಸ್ಥಾನದಲ್ಲಿ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಗರಿಗೆದರಲಿದೆ ಎಂಬ ಆಶಾವಾದ ನಮ್ಮೆಲ್ಲರದು’ ಎಂದು ಅಹಸಾನ್‌ ರಾಜ್‌ ಹೇಳಿದ್ದಾರೆ.

“ನಮಗೇನೂ ಭದ್ರತಾ ಭೀತಿಯ ಚಿಂತೆ ಇಲ್ಲ. ಪಾಕಿಸ್ಥಾನಕ್ಕೆ ತೆರಳಲು ಸಂತೋಷವಾಗುತ್ತಿದೆ’ ಎಂಬುದು ಲಂಕಾ ನಾಯಕ ತಿಸರ ಪೆರೆರ ಹೇಳಿಕೆ.

Advertisement

Udayavani is now on Telegram. Click here to join our channel and stay updated with the latest news.

Next