Advertisement
ಬೀಡಿನಗುಡ್ಡೆ ರಂಗಮಂದಿರವು ಸೌಲಭ್ಯ ಮತ್ತು ನಿರ್ವಹಣೆ ಕೊರತೆಯಿಂದ ಮಹತ್ವ ಕಳೆದುಕೊಳ್ಳುತ್ತಿದೆ. ಕ್ರೀಡೆ, ಉತ್ಸವ, ಸಾರ್ವಜನಿಕ ಸಭೆ, ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೊಸ ಪರಿಕಲ್ಪನೆಯಡಿ, ರಿಯಾಯತಿ ದರದಲ್ಲಿ ಸಭಾಂಗಣ ಒದಗಿಸುವ ಉದ್ದೇಶದಿಂದ ಬಯಲು ರಂಗಮಂದಿರ ನಿರ್ಮಿಸಲಾಗಿತ್ತು. ಸರಿಯಾಗಿ ನಿರ್ವಹಣೆ ಮಾಡದೆ, ಅಗತ್ಯ ಸೌಲಭ್ಯಗಳನ್ನೂ ಕಲ್ಪಿಸದೆ ನಿರ್ಲಕ್ಷ್ಯ ವಹಿಸಿದ ಪರಿಣಾಮ ರಂಗಮಂದಿರ ಈಗ ದುಃಸ್ಥಿತಿಗೆ ತಲುಪಿದೆ. ಪ್ರತೀ ವರ್ಷ ಜಿಲ್ಲಾಡಳಿತ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆಯ ಜತೆಗೆ ಕ್ರಿಕೆಟ್, ಕಲಾ ಚಟುವಟಿಕೆಗಳು, ಉತ್ಸವ, ಮೇಳಗಳನ್ನು ಇಲ್ಲಿ ಆಯೋಜಿಸಲಾಗುತ್ತಿತ್ತು. ಕೋವಿಡ್‌ಲಾಕ್‌ಡೌನ್ ಬಳಿಕ ಇಲ್ಲಿ ನಡೆಯುತ್ತಿದ್ದ ಚಟುವಟಿಕೆಗಳಿಗೆ ಸಂಪೂರ್ಣ ಬ್ರೇಕ್‌ಬಿದ್ದಿದೆ. ಕೋವಿಡ್ ಲಾಕ್‌ಡೌನ್ ಸಂದರ್ಭ ಇಲ್ಲಿ ತರಕಾರಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಲಾರಿ, ಟೆಂಪೋ ಓಡಾಟದ ವೇಳೆ ಆವರಣ ಗೋಡೆಗೆ ಢಿಕ್ಕಿಯಾಗಿ ಹಾನಿ ಸಂಭವಿಸಿದೆ. ಬಳಿಕ ಮರು ನಿರ್ಮಾಣವಾಗಿಲ್ಲ.
Related Articles
Advertisement
ನಗರಸಭೆಗೆ ಹಸ್ತಾಂತರಿಸಲು ಕೋರಿಕೆ
ಬಯಲು ರಂಗಮಂದಿರ ಜಿಲ್ಲಾಡಳಿತಕ್ಕೆ ಒಳಪಟ್ಟಿದ್ದು, ನಿರ್ವಹಣೆ ನಗರಸಭೆಗೆ ವಹಿಸಲಾಗಿದೆ. ಇಲ್ಲಿನ ಕಾವಲು ಸಿಬಂದಿಗೆ ವೇತನವನ್ನು ನಗರಸಭೆ ಪಾವತಿಸಬೇಕು. ಅಲ್ಲದೆ ಈ ಹಿಂದೆ ಕ್ರೀಡೆ, ಕಲಾ ಚಟುವಟಿಕೆ, ಉತ್ಸವಕ್ಕೆ ಹೆಚ್ಚು ದರವನ್ನು ವಿಧಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಬೇಸರಕ್ಕೆ ಕಾರಣವಾಗಿದೆ. ಬಯಲು ರಂಗಮಂದಿರ ಸಂಪೂರ್ಣವಾಗಿ ನಗರಸಭೆಗೆ ಬಿಟ್ಟುಕೊಡಬೇಕು ಎಂಬ ಆಗ್ರಹವಿದೆ. ಮುಂದಿನ ದಿನಗಳಲ್ಲಿ ರಂಗಮಂದಿರಕ್ಕೆ ಕಾಯಕಲ್ಪ ನೀಡುವುದಿದ್ದರೆ ಸೂಕ್ತ ಬಸ್ ಸೌಕರ್ಯ ಮತ್ತು ಪಾರ್ಕಿಂಗ್ ವ್ಯವಸ್ಥೆಯನ್ನು ಅನುಕೂಲವಾಗಿಸಬೇಕಿದೆ.
ಡಿಸಿಗೆ ಮನವಿ
ಬೀಡಿನಗುಡ್ಡೆ ರಂಗಮಂದಿರ ಸಂಪೂರ್ಣ ನಗರಸಭೆಗೆ ವಹಿಸಿಕೊಡಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ನಗರಸಭೆಗೆ ಹಸ್ತಾಂತರವಾದ ಬಳಿಕ ವ್ಯವಸ್ಥಿತ ಅಭಿವೃದ್ಧಿ ಮತ್ತು ನಿರ್ವಹಣೆ ನಗರಸಭೆಯಿಂದ ಮಾಡಲಾಗುತ್ತದೆ. ನಗರದ ಮಾದರಿ ಬಯಲು ರಂಗಮಂದಿರವಾಗಿ ರೂಪಿಸುತ್ತೇವೆ. -ಸುಮಿತ್ರಾ ನಾಯಕ್, ಅಧ್ಯಕ್ಷೆ, ಉಡುಪಿ ನಗರಸಭೆ
ಶೀಘ್ರ ಕ್ರಮ
ಬಯಲು ರಂಗ ಮಂದಿರವನ್ನು ಯಾವ ಮಾದರಿಯಲ್ಲಿ ಅಭಿವೃದ್ಧಿ ಮತ್ತು ನಿರ್ವಹಣೆ ಮಾಡಬೇಕು ಎಂಬುದನ್ನು ಸ್ಥಳ ಪರಿಶೀಲನೆಯ ಅನಂತರ ನಿರ್ಧರಿಸಲಾಗುವುದು. ನಗರಸಭೆಯ ಬೇಡಿಕೆಯನ್ನು ಪರಿಶೀಲಿಸಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು. –ಕೂರ್ಮಾ ರಾವ್, ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ