Advertisement
ನಮ್ಮ ದೇಶದ ಆಹಾರ ಉತ್ಪಾದನೆಯ ಕ್ಷೇತ್ರವನ್ನು ಗಮನಿಸಿದರೆ ಕೆಲವೊಂದು ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸಿದ್ದೇವೆ. ಈ ಪೈಕಿ ಅಕ್ಕಿಯ ಉತ್ಪಾದನೆ ಕೂಡ ಒಂದು. ಒಟ್ಟಾರೆಯಾಗಿ ಇಲ್ಲಿನ ಆಹಾರ ವೈವಿಧ್ಯತೆ ಗಮನಿಸಿದರೆ ಬೇಳೆಕಾಳುಗಳು, ಅಡುಗೆ ಎಣ್ಣೆ ಕ್ಷೇತ್ರದಲ್ಲಿ ಇನ್ನೂ ಸ್ವಾವಲಂಬನೆ ಸಾಧಿಸಿಲ್ಲ. ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಆ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲಾಗಿದ್ದರೂ, ಗೋಧಿ, ಅಡುಗೆ ಎಣ್ಣೆ ವಲಯದಲ್ಲಿ ಇನ್ನೂ ಇತರ ದೇಶಗಳ ಮೇಲೆ ಅವಲಂಬನೆ ಮುಂದುವರಿದಿದೆ.
Related Articles
Advertisement
ದೇಶದ ಒಟ್ಟಾರೆ ಅಡುಗೆ ಎಣ್ಣೆ ಪೈಕಿ ಹೆಚ್ಚಿನ ಪ್ರಮಾಣವನ್ನು ಇಂಡೋನೇಷ್ಯಾ, ಕೆನಡಾ, ಆಸ್ಟ್ರೇಲಿಯಾ, ಉಕ್ರೇನ್, ಮ್ಯಾನ್ಮಾರ್, ಮೊಜಾಂಬಿಕ್ ಮತ್ತು ಮಲವೈ ದೇಶಗಳಿಂದ ತರಲಾಗುತ್ತದೆ. ಈ ಪೈಕಿ ಶೇ.58 ಅಡುಗೆ ಎಣ್ಣೆ ಮತ್ತು ಶೇ.15 ಬೇಳೆಕಾಳುಗಳು ಸೇರಿವೆ. ಅಡುಗೆ ಎಣ್ಣೆಯ ಪೈಕಿ ತಾಳೆ ಎಣ್ಣೆಯೇ ಹೆಚ್ಚು. ದೇಶದಲ್ಲಿ ವಾರ್ಷಿಕವಾಗಿ 25ರಿಂದ 2.6 ಕೋಟಿ ಟನ್ ಅಡುಗೆ ಎಣ್ಣೆ ಬಳಕೆಯಾಗುತ್ತದೆ.
ಈ ಪೈಕಿ ತಾಳೆ ಎಣ್ಣೆ ಪ್ರಮಾಣವೇ 90 ಲಕ್ಷದಿಂದ 95 ಲಕ್ಷ ಟನ್. ಅಡುಗೆ ಎಣ್ಣೆ ತಯಾಕರರಿಗಾಗಿ ಇರುವ ಸಾಲ್ವೆಂಟ್ ಎಕ್ಸ್‌ಟ್ರಾಕ್ಟರ್ಸ್ ಎಸೋಸಿಯೇಶನ್ ಆಫ್ ಇಂಡಿಯಾ ನೀಡಿದ ಮಾಹಿತಿಯ ಅನ್ವಯ 2024 -25ನೇ ಸಾಲಿನ ತೈಲ ವರ್ಷದ ಮೊದಲ 2 ತಿಂಗಳು ಅಕ್ಟೋಬರ್- ನವೆಂಬರ್ ಅವಧಿಯಲ್ಲಿ 15.90 ಲಕ್ಷ ಟನ್‌ಗಳಷ್ಟು ಅಡುಗೆ ಎಣ್ಣೆ ಆಮದು ಮಾಡಿಕೊಂಡಿದೆ. 2023-24ನೇ ಸಾಲಿನಲ್ಲಿ ಅದರ ಪ್ರಮಾಣ 11.48 ಲಕ್ಷ ಟನ್ ಆಗಿತ್ತು.
ಬ್ರೆಜಿಲ್‌ನತ್ತ ಕೇಂದ್ರ ಸರಕಾರದ ದೃಷ್ಟಿ
ಬ್ರೆಜಿನಿಂದಲೂ ಅಡುಗೆ ಎಣ್ಣೆ ಮತ್ತು ಬೇಳೆ ಕಾಳುಗಳನ್ನು ಆಮದು ಮಾಡಿಕೊಳ್ಳುವತ್ತ ಕೇಂದ್ರ ಸರಕಾರ ಮುಂದಾಗಿದೆ. ಆ ದೇಶದಲ್ಲಿ ಇರುವ ಭಾರತದ ರಾಯಭಾರಿ ಸುರೇಶ್ ಕೆ. ರೆಡ್ಡಿಯವರ ಪ್ರಕಾರ ಬ್ರೆಜಿಲ್‌ನಿಂದ ಆಮದು ಮಾಡಿಕೊಂಡರೆ ಸ್ಪರ್ಧಾತ್ಮಕ ಬೆಲೆಯಲ್ಲಿ ವಸ್ತುಗಳು ದೊರೆಯುತ್ತವೆ. ಜತೆಗೆ ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರೀಕರಣಕ್ಕೂ ನೆರವಾಗುತ್ತದೆ ಎನ್ನುತ್ತಾರೆ. ಸದ್ಯ ಉದ್ದಿನಬೇಳೆಯನ್ನು ಬ್ರೆಜಿಲ್‌ನಿಂದ ತರಲಾಗುತ್ತಿದೆ. 2023ರಲ್ಲಿ 6,000 ಟನ್ ಇದ್ದ ಆಮದು ಪ್ರಮಾಣ ಪ್ರಸಕ್ತ ವರ್ಷ 75,000 ಟನ್‌ಗೆ ಏರಿಕೆಯಾಗಿದೆ.
ಕುತೂಹಲಕಾರಿ ಅಂಶವೆಂದರೆ ಆ ದೇಶದ ಒಟ್ಟು ವಾರ್ಷಿಕ ಉತ್ಪನ್ನದ ಪೈಕಿ ಹೆಚ್ಚಿನ ಪ್ರಮಾಣವನ್ನು ಭಾರತಕ್ಕೇ ಕಳುಹಿಸಿ ಕೊಡಲಾಗಿದೆ. ದೇಶದಲ್ಲಿ ಇರುವ ರಾಜ್ಮಾದಂತೆ ಬ್ರೆಜಿಲ್‌ನಲ್ಲಿ ಕಾರಿಯೋಕಾ ಬೀನ್ಸ್ ಎಂಬ ಬೀಜವಿದೆ. ಪ್ರೊಟೀನ್ ಹೆಚ್ಚಿನ ಪ್ರಮಾಣ ಇರುವ ಅದನ್ನು ಭಾರತಕ್ಕೆ ಆಮದು ಮಾಡುವ ಇರಾದೆ ಹೊಂದಿದೆ. ಜತೆಗೆ ಸೂರ್ಯಕಾಂತಿ ಎಣ್ಣೆಯನ್ನೂ ಆಮದು ಮಾಡುವ ಬಗ್ಗೆ ಮಾತುಕತೆಗಳು ನಡೆದಿವೆ.
ಮಾರುಕಟ್ಟೆಯಲ್ಲಿ ಲೆಕ್ಕಾಚಾರ ಹೇಗಿದೆ?
ದಿಲ್ಲಿಯ ನಜಾಫ್ಗಢ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆಯ ಲ್ಲಿಯೂ ಭಾರೀ ಏರಿಕೆಯಾಗಿದೆ. ಪ್ಯಾಕ್ ಮಾಡಿರುವ 1 ಕೆ.ಜಿ. ತಾಳೆ ಎಣ್ಣೆಗೆ ಕಳೆದ ವರ್ಷ 95 ರೂ. ಇದ್ದದ್ದು ಈ ವರ್ಷ 143 ರೂ. ಆಗಿದೆ. ಸೋಯಾಬೀನ್ ಎಣ್ಣೆಗೆ 110 ರೂ. ಇದ್ದದ್ದು 154 ರೂ., ಸೂರ್ಯಕಾಂತಿ ಎಣ್ಣೆಗೆ 115 ರೂ. ಇದ್ದದ್ದು 159 ರೂ., ಸಾಸಿವೆ ಎಣ್ಣೆಗೆ 135 ರೂ. ಇದ್ದದ್ದು 176 ರೂ.ಗೆ ಏರಿಕೆಯಾ ಗಿದೆ. ಅದೇ ರೀತಿ ಪ್ರತೀ ಕ್ವಿಂಟಾಲ್ ಗೋಧಿಗೆ 2,900 ರಿಂದ 2,950 ರೂ. ಇದೆ. ಕಳೆದ ವರ್ಷದ ಇದೇ ಇವಧಿಯಲ್ಲಿ 2,450 ರೂ. ಗಳಿಂದ 2,500 ರೂ. ವರೆಗೆ ಬೆಲೆ ಇತ್ತು.
ತಾಳೆ ಎಣ್ಣೆ ಸ್ವಾವಲಂಬನೆಗೆ ಕೇಂದ್ರ ಸರಕಾರ ಯೋಜನೆ
ಇದುವರೆಗೆ ಇಂಡೋನೇಷ್ಯಾದಿಂದ ತಾಳೆ ಎಣ್ಣೆಯನ್ನು ನಮ್ಮ ದೇಶ ಖರೀದಿಸುತ್ತಾ ಬಂದಿದೆ. ಆ ದೇಶದಲ್ಲಿ ಜೈವಿಕ ಇಂಧನ ಉತ್ಪಾದನೆ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಹೀಗಾಗಿ, ಅಲ್ಲಿಂದ ನಮ್ಮ ದೇಶಕ್ಕೆ ಹೆಚ್ಚಿನ ಪ್ರಮಾಣದಲ್ಲಿ ತಾಳೆ ಎಣ್ಣೆ ಬರುತ್ತಿಲ್ಲ. ಅದಕ್ಕಾಗಿ ಕೇಂದ್ರ ಸರಕಾರ ಜುಲೈಯಲ್ಲಿ ತಾಳೆ ಬೆಳೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ರಾಷ್ಟ್ರೀಯ ಅಡುಗೆ ಎಣ್ಣೆ ಯೋಜನೆ- ತಾಳೆ ಎಣ್ಣೆ (ಎನ್‌ಎಂಇಒ-ಒಪಿ)ಯನ್ನು ಘೋಷಣೆ ಮಾಡಿತ್ತು. ಅದರ ಅನ್ವಯ ತಾಳೆ ಬೆಳೆಗೆ ಹೆಚ್ಚಿನ ಪ್ರೋತ್ಸಾಹ ನೀಡಿ 2030ರ ಒಳಗಾಗಿ 3 ಮಿಲಿಯ ಮೆಟ್ರಿಕ್ ಟನ್ ಗಳಷ್ಟು ತಾಳೆ ಎಣ್ಣೆಯನ್ನು ದೇಶದಲ್ಲಿಯೇ ಉತ್ಪಾದನೆ ಮಾಡುವ ಬಗ್ಗೆ ಯೋಜನೆ ಹೊಂದಿದೆ. ತಾಳೆ ಎಣ್ಣೆ ಬೆಳೆಯುವ ರೈತರಿಗೆ ವಿಶೇಷ ಪ್ರೋತ್ಸಾಹ, ಸಬ್ಸಿಡಿಯನ್ನೂ ಸರಕಾರದ ವತಿಯಿಂದ ನೀಡಲಾಗುತ್ತದೆ.
ಅಡುಗೆ ಎಣ್ಣೆ ಮಾತ್ರವಲ ಗೋಧಿಗೂ ಕೊರತೆ
ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸರಕಾರ ಸೇರಿದಂತೆ ದೇಶದ ಎಲ್ಲ ರಾಜ್ಯಗಳು ಸಾಕಷ್ಟು ಪ್ರಯತ್ನಗಳನ್ನು ಕೈಗೊಳ್ಳುತ್ತಿವೆ. ಹೀಗಿದ್ದಾಗ್ಯೂ, ನಿರೀಕ್ಷಿತ ಮಟ್ಟದಲ್ಲಿ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ. ಗೋಧಿ ಉತ್ಪಾದನೆಯು ಈ ಮಾತನ್ನು ಪುಷ್ಟಿಕರಿಸುತ್ತದೆ. ಕಳೆದ ಮೂರು ವರ್ಷಗಳಿಂದ ಈಚೆಗೆ ದೇಶದಲ್ಲಿನ ಗೋಧಿ ಬೆಳೆ ತೃಪ್ತಿಕರವಾಗಿಲ್ಲ. ಹೀಗಾಗಿ, ದೇಶದ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರೀಕರಿಸುವ ನಿಟ್ಟಿನಲ್ಲಿ ವಿದೇಶಗಳಿಗೆ ಗೋಧಿ ರಫ್ತು ನಿಷೇಧ ಮಾಡಿದ್ದರೂ ಬೆಲೆ ಸ್ಥಿರೀಕರಿಸಲು ಸಾಧ್ಯವಾಗುತ್ತಿಲ್ಲ.
2022 ಮೇಯಿಂದ ಗೋಧಿ ರಫ್ತು ಮೇಲೆ ಕೇಂದ್ರ ಸರಕಾರವು ನಿಷೇಧ ಹೇರಿದೆ. ಪ್ರಸಕ್ತ ವರ್ಷ ಹೆಚ್ಚಿನ ಪ್ರದೇಶದಲ್ಲಿ ಗೋಧಿ ಬಿತ್ತನೆ ಮಾಡಿದ್ದರೂ, ಅದು ಇನ್ನೂ ಕೈಸೇರಲು ಸಮಯ ಬೇಕಾಗುತ್ತದೆ. 2022ರಲ್ಲಿ ಕೇಂದ್ರ ಸರಕಾರದ ಗೋದಾಮಿನಲ್ಲಿ ಸಂಗ್ರಹವಾಗಿದ್ದ ಗೋಧಿ 19.27 ಕೋಟಿ ಟನ್, 2023ರಲ್ಲಿ 19.19 ಕೋಟಿ ಟನ್, 2024ರಲ್ಲಿ 20.6 ಕೋಟಿ ಟನ್. ಆದರೆ, ನಮ್ಮ ದೇಶದಲ್ಲಿ ಪ್ರತೀ ತಿಂಗಳು 15 ದಶಲಕ್ಷ ಟನ್ ಗೋಧಿ ಅಗತ್ಯಕ್ಕೇ ಬೇಕಾಗುತ್ತದೆ. ಜತೆಗೆ ಬೆಲೆ ಸ್ಥಿರೀಕರಣಕ್ಕಾಗಿ ಗೋದಾಮಿನಲ್ಲಿ ಒಂದಷ್ಟು ಪ್ರಮಾಣದಲ್ಲಿ ಗೋಧಿ ಸಂಗ್ರಹಿಸಲೇಬೇಕಾಗಿದೆ.
ಸಮಾಧಾನಕರಸಂಗತಿ ಎಂದರೆ, ಮಧ್ಯ ಪ್ರಾಚ್ಯ ಬಿಕ್ಕಟ್ಟು, ರಷ್ಯಾ- ಉಕ್ರೇನ್ ಕಾಳಗದ ಹೊರತಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗೋಧಿಯ ಬೆಲೆ ಏರಿಕೆ ಯಾಗಿಲ್ಲ. ಹೀಗಾಗಿ, ಕೇಂದ್ರ ಸರಕಾರ ಆಮದು ಮಾಡಿಕೊಳ್ಳುವತ್ತ ಚಿಂತನೆಯನ್ನೂ ನಡೆಸಿದೆ. ರಷ್ಯಾ ಪ್ರತೀ ಟನ್‌ಗೆ 230 ಡಾಲರ್, ಆಸ್ಟ್ರೇಲಿಯಾ 270 ಡಾಲರ್ ಬೆಲೆ ಹೇಳುತ್ತಿವೆ. 30ರಿಂದ 40 ಲಕ್ಷ ಟನ್ ಗೋಧಿ ಆಮದು ಮಾಡಿಕೊಂಡರೆ ಪರಿಸ್ಥಿತಿ ಕೊಂಚ ಚೇತೋಹಾರಿಯಾಗಬಹುದು ಎಂಬ ನಿರೀಕ್ಷೆ ಇದೆ. ಆದರೆ ಆಮದು ಮಾಡಿಕೊಳ್ಳುವುದಕ್ಕೆ ಇರುವ ಸಮಸ್ಯೆಯೆಂದರೆ ಶೇ.40 ಕಸ್ಟಮ್ಸ್ ಶುಲ್ಕವಿದೆ. ಸದ್ಯ ಬಿತ್ತನೆಯಾಗಿರುವ ಗೋಧಿ ಕೈ ಸೇರಲು ಎಪ್ರಿಲ್ ತಿಂಗಳವರೆಗೂ ಕಾಯಬೇಕು. ಅಲ್ಲಿಯವರೆಗೆ ದೇಶದ ಅಗತ್ಯಕ್ಕೆ ತಕ್ಕಂತೆ ಗೋಧಿಯನ್ನು ಆಮದು ಮಾಡಿಕೊಳ್ಳುವುದು ಅನಿವಾರ್ಯವಾಗಲಿದೆ.
2.84 ಲಕ್ಷ ಟನ್ – ಈ ವರ್ಷದ ನವೆಂಬರ್ ನಲ್ಲಿ ಭಾರತ ಆಮದು ಮಾಡಿಕೊಂಡ ಶುದ್ಧೀಕರಿಸಿದ ತಾಳೆ ಎಣ್ಣೆ
5.47 ಲಕ್ಷ ಟನ್ – ಈ ವರ್ಷದ ನವೆಂಬರ್ ನಲ್ಲಿ ಭಾರತ ಆಮದು ಮಾಡಿಕೊಂಡ ಕಚ್ಚಾ ತಾಳೆ ಎಣ್ಣೆ
3.40 ಲಕ್ಷ ಟನ್ – ಈ ವರ್ಷದ ನವೆಂಬರ್ ನಲ್ಲಿ ಆಮದಾದ ಕಚ್ಚಾ ಸೂರ್ಯಕಾಂತಿ ಎಣ್ಣೆ
03 ಲಕ್ಷ ಮೆಟ್ರಿಕ್ ಟನ್ – 2030ರೊಳಗಾಗಿ ದೇಶದಲ್ಲಿ ತಾಳೆ ಎಣ್ಣೆ ಉತ್ಪಾದನೆ ಗುರಿ
■ ಸದಾಶಿವ ಕೆ.