Advertisement

ವೈಚಾರಿಕ ಬರಹಗಳಿಂದ ನಾಡು ಕಟ್ಟಿದ ಕುವೆಂಪು

06:41 AM Feb 06, 2019 | |

ಬೆಂಗಳೂರು: ಆಧ್ಯಾತ್ಮಿಕವಾಗಿದ್ದುಕೊಂಡೇ ವೈಚಾರಿಕ ಬರಹಗಳ ಮೂಲಕ ನಾಡು ಕಟ್ಟಿದ ಶ್ರೇಯಸ್ಸು ರಾಷ್ಟ್ರಕವಿ ಕುವೆಂಪು ಅವರಿಗೆ ಸಲ್ಲುತ್ತದೆ ಎಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಡಾ.ಬಿ.ಎಲ್.ಶಂಕರ್‌ ಬಣ್ಣಿಸಿದರು.

Advertisement

ಕನ್ನಡ ಸಾಹಿತ್ಯ ಪರಿಷತ್ತು ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಡಾ.ವಿ.ಚಂದ್ರಶೇಖರ ನಂಗಲಿ ಅವರಿಗೆ ‘ಕುವೆಂಪು ಸಿರಿಗನ್ನಡ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿದ ಅವರು, ಕೃಷಿ, ಆರೋಗ್ಯ, ಶಿಕ್ಷಣ ಮತ್ತು ಧರ್ಮ ಅಳಿವಿನಂಚಿತ್ತ ಸಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಕುವೆಂಪು ಅವರ ಬರಹಗಳು ಪ್ರಸ್ತುತವಾಗಿ ನಿಲ್ಲುತ್ತವೆ ಎಂದು ಹೇಳಿದರು.

ಮೂಲ ವಿಜ್ಞಾನ ಓದುವವರ ಸಂಖ್ಯೆ ಕಡಿಮೆಯಾಗುತ್ತಿದ್ದು ಹಣ ಸಂಪಾದಿಸುವ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗುತ್ತಿದೆ. ಎಲ್ಲ ಪದವಿಗಳು ಆರ್ಥಿಕ ಕ್ಷೇತ್ರದ ತುಂಬಾ ಗಿರಕಿ ಹೊಡೆಯುತ್ತಿದ್ದು, ಭವಿಷ್ಯತ್ತಿನ ದೃಷ್ಟಿಯಿಂದ ಇದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.

ಕುವೆಂಪು ಅವರು ನಿಷ್ಠುರಕ್ಕೆ ಹೆಸರಾದವರು.ರಾಜಕಾರಣಿಗಳು ಮತ್ತು ಮಠಾಧೀಶರು ಎಂದರೆ ಅವರು ದೂರ ನಿಲ್ಲುತ್ತಿದ್ದರು. ಎಂದೂ ಅವರು ಪ್ರಶಸ್ತಿಗಳನ್ನು ಬೆನ್ನುಹತ್ತಿ ಹೋದವರಲ್ಲ.ಮೈಸೂರು ಮಹಾರಾಜರು ತಮ್ಮ ಮಕ್ಕಳಿಗೆ ಮನೆಗೆ ಬಂದು ಪಾಠ ಹೇಳಿಕೊಂಡಿ ಎಂದು ನೀಡಿದ್ದ ಆಹ್ವಾನವನ್ನು ಕೂಡ ತಿಸ್ಕರಿಸಿದ ವ್ಯಕ್ತಿ ಕುವೆಂಪು ಎಂದು ಹೇಳಿದರು.

ಜೀವಕೇಂದ್ರೀಕೃತ ಸಾಹಿತಿ: ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಾಹಿತಿ ಡಾ.ವಿ.ಚಂದ್ರಶೇಖರ ನಂಗಲಿ, ಸಾಹಿತ್ಯ ಲೋಕದಲ್ಲಿ ಇತ್ತೀಚಿನ ದಿನಗಳಲ್ಲಿ ಮನುಷ್ಯ ಕೇಂದ್ರಿಕೃತ ಸಾಹಿತಿಗಳ ಸಂಖ್ಯೆ ಹೆಚ್ಚಾಗಿದೆ. ಆದರೆ ರಾಷ್ಟ್ರಕವಿ ಕುವೆಂಪು ಅವರು ಎಂದೂ ಮನುಷ್ಯ ಕೇಂದ್ರೀಕೃತ ಸಾಹಿತಿಗಳಾಗಿರಲಿಲ್ಲ. ಬದಲಾಗಿ ಅವರು ಜೀವಕೇಂದ್ರೀಕೃತ ಸಾಹಿತಿಗಳಾಗಿದ್ದರು ಎಂದರು.

Advertisement

ಪರ್ವತಗಳನ್ನು ಕೇಂದ್ರಿಕರಿಸಿ ಕುವೆಂಪು ಸಾಹಿತ್ಯ ರಚನೆ ಮಾಡಿದರು. ಹೀಗಾಗಿ ಅವರು ಕಾಡು ಸಾಹಿತಿ ಎಂದು ಹೆಸರು ವಾಸಿಯಾಗಿದ್ದಾರೆ. ಜಾತಿ ಪದ್ಧತಿ ವಿರುದ್ಧ ಬರಹಗಳಲ್ಲಿ ಜಾಗೃತಿ ಮೂಡಿಸಿದ್ದಾರೆ.ಆ ಹಿನ್ನೆಲೆಯಲ್ಲಿ ಕುವೆಂಪು ಬರಹಗಳು ಮುಂದಿನ ಪೀಳಿಗೆಗೆ ಸ್ಫೂರ್ತಿ ಸೆಲೆಯಾಗಿವೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನುಬಳಿಗಾರ್‌ ಮಾತನಾಡಿ, ಕುವೆಂಪು ಅವರ ಸಿರಿಗನ್ನಡ ಪ್ರಶಸ್ತಿಗೆ ಪಾರದರ್ಶಕವಾಗಿ ಸಾಹಿತಿ ಡಾ.ಚಂದ್ರಶೇಖರ ನಂಗಲಿ ಅವರನ್ನು ಆಯ್ಕೆ ಮಾಡಲಾಗಿದೆ. ಕನ್ನಡ ಸಾಹಿತ್ಯದ ಕೃಷಿ ಜತಗೆ ಕುವೆಂಪು ಸಾಹಿತ್ಯವನ್ನು ನಂಗಲಿ ಅವರು ಅಭ್ಯಾಸಿಸಿದ್ದಾರೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ, ಕೋಶಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next