Advertisement

National Emblem: ರಾಷ್ಟ್ರ ಲಾಂಛನ ದುರ್ಬಳಕೆಯ ದುಸ್ಸಾಹಸಕ್ಕೆ ಬೀಳಲಿ ಕಡಿವಾಣ

11:19 AM Dec 28, 2024 | Team Udayavani |

ರಾಷ್ಟ್ರ ಲಾಂಛನ (National Emblem), ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಗಳ ಫೋಟೋಗಳ ದುರ್ಬಳಕೆಯನ್ನು ತಡೆಗಟ್ಟುವ ಕುರಿತಾಗಿನ ಹಾಲಿ ಕಾನೂನುಗಳನ್ನು ಮತ್ತಷ್ಟು ಬಿಗಿಗೊಳಿಸಲು ಮುಂದಾಗಿರುವ ಕೇಂದ್ರ ಸರಕಾರ ಈ ಕಾನೂನುಗಳಿಗೆ ಮಹತ್ವದ ತಿದ್ದುಪಡಿಗಳನ್ನು ತರಲು ಗಂಭೀರ ಚಿಂತನೆ ನಡೆಸಿದೆ. ದೇಶದ ಭದ್ರತೆ, ರಾಷ್ಟ್ರೀಯ ಹಿತಾಸಕ್ತಿ ರಕ್ಷಣೆಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುವ ಈ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದಿರಲು ತೀರ್ಮಾನಿಸಿದೆ.

Advertisement

ದೇಶದಲ್ಲಿ ಈಗಾಗಲೇ ರಾಷ್ಟ್ರ ಲಾಂಛನ, ರಾಷ್ಟ್ರಧ್ವಜ, ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಗಳ ಫೋಟೋಗಳ ಬಳಕೆಗೆ ಕಟ್ಟುನಿಟ್ಟಿನ ಮಾರ್ಗಸೂಚಿ ಜಾರಿಯಲ್ಲಿದ್ದು, ಇದನ್ನು ಉಲ್ಲಂ ಸಿದರೆ ಅಥವಾ ಇವುಗಳನ್ನು ದುರ್ಬಳಕೆ ಮಾಡಿಕೊಂಡಲ್ಲಿ ದಂಡ ಮತ್ತು ಜೈಲು ಶಿಕ್ಷೆಯನ್ನು ವಿಧಿಸುವ ಕಾನೂನು ಜಾರಿಯಲ್ಲಿದೆ. ಆದರೆ ದಂಡ ಮತ್ತು ಜೈಲು ಶಿಕ್ಷೆಯ ಪ್ರಮಾಣ ತೀರಾ ಅತ್ಯಲ್ಪವಾಗಿರುವುದರಿಂದ ದೇಶದ ಘನತೆ, ಗೌರವದ ಸಂಕೇತವಾಗಿರುವ ಇವುಗಳ ದುರ್ಬಳಕೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇಷ್ಟು ಮಾತ್ರವಲ್ಲದೆ ಈ ಎರಡು ಕಾನೂನುಗಳು ಗೃಹ ಹಾಗೂ ಗ್ರಾಹಕ ವ್ಯವಹಾರಗಳ ಸಚಿವಾಲಯ ಹೀಗೆ ಎರಡು ಪ್ರತ್ಯೇಕ ಸಚಿವಾಲಯಗಳ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಇವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ತಾಂತ್ರಿಕ ಅಡಚಣೆಗಳು ಎದುರಾಗುತ್ತಿವೆ. 5 ವರ್ಷಗಳ ಹಿಂದೆಯೇ ಹಾಲಿ ಜಾರಿಯಲ್ಲಿರುವ ಕಾನೂನಿಗೆ ತಿದ್ದುಪಡಿ ತಂದು ತಪ್ಪಿತಸ್ಥರಿಗೆ 5 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 5 ಲಕ್ಷ ರೂ.ಗಳವರೆಗೆ ದಂಡ ವಿಧಿಸುವ ಪ್ರಸ್ತಾವವನ್ನು ಗ್ರಾಹಕ ವ್ಯವಹಾರಗಳ ಇಲಾಖೆ ಸರಕಾರದ ಮುಂದಿಟ್ಟಿತ್ತು. ಇವೆಲ್ಲದರ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಈ ಎರಡೂ ಕಾನೂನುಗಳನ್ನು ವಿಲೀನಗೊಳಿಸಿ ಒಂದೇ ಇಲಾಖೆಯ ವ್ಯಾಪ್ತಿಗೆ ತರಲು ಮುಂದಾಗಿದೆ.

ಖಾಸಗಿ ವ್ಯಕ್ತಿಗಳು, ಸರಕಾರೇತರ ಸಂಘಸಂಸ್ಥೆಗಳು, ವಾಣಿಜ್ಯ ಮತ್ತು ವ್ಯಾಪಾರಿ ಸಂಸ್ಥೆಗಳು, ಕಂಪೆನಿಗಳು ರಾಷ್ಟ್ರೀಯ ಲಾಂಛನ, ರಾಷ್ಟ್ರಪತಿ ಮತ್ತು ಪ್ರಧಾನಿ ಅವರ ಹೆಸರು ಮತ್ತು ಭಾವಚಿತ್ರಗಳನ್ನು ದುರ್ಬಳಕೆ ಮಾಡಿಕೊಂಡು ದುರ್ಲಾಭ ಪಡೆದುಕೊಳ್ಳುತ್ತಿವೆ. ಇಂತಹ ದುಷ್ಕೃತ್ಯದಲ್ಲಿ ತೊಡಗಿಕೊಂಡವರ ವಿರುದ್ಧ ಪ್ರಕರಣ ದಾಖಲಾದರೂ ದುರ್ಬಲ ಕಾನೂನಿನ ಲಾಭ ಪಡೆದು ಮತ್ತದೇ ಚಾಳಿಯನ್ನು ಮುಂದುವರಿಸುತ್ತಿವೆ. ಇದರಿಂದ ಸರಕಾರದ ಹೆಸರಿಗೆ ಕಳಂಕ ಬರುವುದರ ಜತೆಯಲ್ಲಿ ವ್ಯಕ್ತಿಗತವಾಗಿಯೂ ಚಾರಿತ್ರ್ಯಹನನಕ್ಕೆ ಕಾರಣವಾಗುತ್ತಿದೆ. ಇದಕ್ಕಿಂತಲೂ ಮುಖ್ಯವಾಗಿ ವಂಚಕರ ಇಂತಹ ಕಿಡಿಗೇಡಿ ವರ್ತನೆ ದೇಶದ ಭದ್ರತೆಗೂ ಅಪಾಯಕಾರಿಯಾಗಿದ್ದು ಆರ್ಥಿಕ ಅಪರಾಧಿಗಳು, ಉಗ್ರರು, ಮಾದಕವಸ್ತು ಸಹಿತ ವಿವಿಧ ಅಂತಾರಾಷ್ಟ್ರೀಯ ಕಳ್ಳಸಾಗಣೆದಾರರು ಇದರ ದುರ್ಲಾಭ ಪಡೆಯುವ ಸಾಧ್ಯತೆ ಇದೆ. ಈಗಾಗಲೇ ಭಯೋತ್ಪಾದನೆ, ಮಾದಕವಸ್ತು ಸಾಗಾಟದ ವಿರುದ್ಧ ಸಮರ ಸಾರಿರುವ ಕೇಂದ್ರ ಸರಕಾರ ಈಗ ರಾಷ್ಟ್ರ ಲಾಂಛನ ಸಹಿತ ರಾಷ್ಟ್ರೀಯ ಘನತೆ, ಗೌರವದ ಸಂಕೇತ, ಲಾಂಛನಗಳ ದುರ್ಬಳಕೆಯನ್ನು ತಡೆಯುವ ನಿಟ್ಟಿನಲ್ಲಿ ಕಾನೂನನ್ನು ಬಿಗಿಗೊಳಿಸಲು ಚಿಂತನೆ ನಡೆಸಿರುವುದು ಸಮಯೋಚಿತ ಮತ್ತು ದೂರದೃಷ್ಟಿಯಿಂದ ಕೂಡಿದ್ದಾಗಿದೆ.

ಕಾನೂನು ತಿದ್ದುಪಡಿ ವೇಳೆ ಕೇಂದ್ರ ಸರಕಾರ ಹೊಸ ಕಾನೂನು ರೂಪಣೆಯ ಸಂದರ್ಭದಲ್ಲಿಯೇ ಈ ಕಾನೂನನ್ನು ತಮ್ಮ ರಾಜಕೀಯ ಮತ್ತು ವಾಣಿಜ್ಯಿಕ ಪ್ರತಿಸ್ಪರ್ಧಿಗಳ ವಿರುದ್ಧ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಸಾಧ್ಯವಾಗದಂತೆ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ರೂಪಿಸಬೇಕು. ಇಂತಹ ಕೃತ್ಯಗಳಲ್ಲಿ ತೊಡಗಿಕೊಳ್ಳುವವರ ವಿರುದ್ಧವೂ ಬಿಗಿ ಕಾನೂನು ಕ್ರಮ ಕೈಗೊಳ್ಳಲು ಸೂಕ್ತ ನಿಯಮಾವಳಿಗಳನ್ನು ರೂಪಿಸಬೇಕು. ಇಲ್ಲವಾದಲ್ಲಿ ತಿದ್ದುಪಡಿ ಮಾಡಲ್ಪಟ್ಟ ಕಾನೂನು ಕೂಡ ಕಾನೂನು ಭಂಜಕರ ಪಾಲಿಗೆ ಹೊಸ ಅಸ್ತ್ರ ನೀಡಿದಂತಾ ಗಲಿದೆಯಲ್ಲದೆ ಹೊಸ ಕಾನೂನಿನ ನೈಜ ಉದ್ದೇಶವೇ ನಿರರ್ಥಕವಾಗಲಿದೆ ಎಂಬುದನ್ನು ಸರಕಾರ ಮರೆಯಬಾರದು.

Advertisement

Udayavani is now on Telegram. Click here to join our channel and stay updated with the latest news.

Next