ಕುಷ್ಟಗಿ:ಬಿಜೆಪಿ ಬೆಂಬಲಿಸಿ ಕುಷ್ಟಗಿ ಪುರಸಭೆ ಇಬ್ಬರು ಕಾಂಗ್ರೆಸ್ ಸದಸ್ಯರ ಸದಸ್ಯತ್ವ ಅನೂರ್ಜಿತ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ನಿರಾಳವಾಗಿದೆ.
ಕಳೆದ ಮೆ 11ರಂದು ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ಅವರು, ಪಕ್ಷಾಂತರ ಕಾಯ್ದೆ ಉಲ್ಲಂಘಿಸಿದ ಪ್ರಕರಣದ ಹಿನ್ನೆಲೆಯಲ್ಲಿ 17ನೇ ವಾರ್ಡ್ ಸದಸ್ಯ ವೀರೇಶಗೌಡ ಬೆದವಟ್ಟಿ, 3ನೇ ವಾರ್ಡ್ ಸದಸ್ಯೆ ಗೀತಾ ತುರಕಾಣಿ ಸದಸ್ಯತ್ವ ಅನರ್ಹದ ಆದೇಶ ನೀಡಿದ್ದರು.
ಆದೇಶ ಪ್ರಶ್ನಿಸಿ ಅನರ್ಹ ಸದಸ್ಯರು ಸದಸ್ಯತ್ವ ಅನರ್ಹತೆಯ ತಡೆಯಾಜ್ಞೆ ಕೋರಿ ಧಾರವಾಡ ಹೈಕೋರ್ಟ್ ಸಂಚಾರಿ ಪೀಠಕ್ಕೆ ಮೊರೆ ಹೋಗಿದ್ದರು. ಮಂಗಳವಾರ ಸದರಿ ಅರ್ಜಿಯನ್ನು ರಜಾ ಅವಧಿಯ ಬೆಂಗಳೂರು ವಿಶೇಷ ನ್ಯಾಯಲಯ ಅರ್ಜಿ ಪುರಸ್ಕರಿಸಿ. ಸದಸ್ಯತ್ವ ಅನರ್ಹತೆಯಲ್ಲಿ ನಿಯಾಮಾವಳಿ ಪಾಲಿಸದ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ರವಿ ಹೊಸಮನಿ ಅವರು, ವಿಚಾರಣೆ ನಡೆಸಿ ಪ್ರಕರಣಕ್ಕೆ ತಡೆಯಾಜ್ಞೆ ವಿಧಿಸಿದ್ದಾರೆ. ಅನರ್ಹ ಪುರಸಭೆ ಸದಸ್ಯರ ಪರವಾಗಿ ವಕೀಲರಾದ ಸಾದೀಕ್ ಗೂಡವಾಲ ವಾದ ಮಂಡಿಸಿದರು.
ಪುರಸಭೆ ಸದಸ್ಯರಾದ ವೀರೇಶಗೌಡ ಬೆದವಟ್ಟಿ ಹಾಗೂ ಗೀತಾ ತುರಕಾಣಿ ಸದ್ಯಕ್ಕೆ ಅನರ್ಹತೆಯ ತೂಗುಗತ್ತಿಯಿಂದ ಪಾರಾಗಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಕುಷ್ಟಗಿಯಲ್ಲಿ ಬಿಜೆಪಿ ಅಭಿಮಾನಿಗಳು ಮಳೆಯಲ್ಲೂ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಕುಷ್ಟಗಿ ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಪ್ರತಿಕ್ರಿಯಿಸಿ, ನಾವು ಅಧ್ಯಕ್ಷರಾಗಲು ಕಾಂಗ್ರೆಸ್ ಸದಸ್ಯರಾದ ವೀರೇಶಗೌಡ ಬೆದವಟ್ಟಿ ಹಾಗೂ ಗೀತಾ ತುರಕಾಣಿ ಬೆಂಬಲಿಸಿದ್ದರು. ಪಕ್ಷದ ವಿಪ್ ಉಲ್ಲಂಘಿಸಿದ ಕಾರಣದಿಂದ ಈ ಸದಸ್ಯರ ಸದಸ್ಯತ್ವ ಅನರ್ಹವಾಗಿತ್ತು. ಹೀಗಾಗಿ ಹೈಕೋರ್ಟ್ ಮೊರೆ ಹೋಗಬೇಕಾಯಿತು. ಸದರಿ ಹೈಕೋರ್ಟ್ ಈ ಪ್ರಕರಣಕ್ಕೆ ತಡೆಯಾಜ್ಞೆ ವಿಧಿಸಿರುವುದು ಸಂತಸ ತಂದಿದೆ. ಕಾಂಗ್ರೆಸ್ ಪಕ್ಷದ ಹಿರಿಯರೊಬ್ಬರು (ದೇವೇಂದ್ರಪ್ಪ ಬಳೂಟಗಿ,ಕುಷ್ಟಗಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ )ಕಾಂಗ್ರೆಸ್ ಸದಸ್ಯರ ಅನರ್ಹತೆಗೆ ಉಪ್ಪು ತಿಂದು ನೀರು ಕುಡಿಬೇಕು ಎಂದಿದ್ದರು. ಈ ಪ್ರಕರಣದಲ್ಲಿ ನ್ಯಾಯಾಲಯದ ತಡೆಯಾಜ್ಞೆ ಗೆ ಸಕ್ಕರೆ ತಿಂದು ನೀರು ಕುಡಿದಿದ್ದೇವೆ ಎಂದು ಟಾಂಗ್ ನೀಡಿದರು.