Advertisement

Bantwal: ಪುರಸಭೆ ಆಸ್ತಿ ರಕ್ಷಣೆಗೆ ಸದಸ್ಯರ ಆಗ್ರಹ

12:32 PM Dec 20, 2024 | Team Udayavani |

ಬಂಟ್ವಾಳ: ಪುರಸಭೆ ಅಧೀನದಲ್ಲಿರುವ ಒಂದಷ್ಟು ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ಕೆಲವೊಂದು ಕಟ್ಟಡಗಳು ಇತರರ ಪಾಲಾಗುವ ಅಪಾಯದಲ್ಲಿದೆ. ಹೀಗಾಗಿ ಅದಕ್ಕೆ ಯಾವುದೇ ರೀತಿಯ ಅವಕಾಶ ನೀಡದೆ ಪುರಸಭೆಯ ಸ್ಥಿರ, ಚರಾಸ್ತಿಗಳನ್ನು ಕಾಪಾಡುವ ನಿಟ್ಟಿನಲ್ಲಿ ಪುರಸಭೆಯು ಗಂಭೀರ ಚಿಂತನೆ ನಡೆಸಬೇಕು ಎಂದು ಸದಸ್ಯರು ಆಗ್ರಹಿಸಿದರು.

Advertisement

ಪುರಸಭೆ ಸಾಮಾನ್ಯ ಸಭೆಯು ಪುರಸಭಾಧ್ಯಕ್ಷ ಬಿ. ವಾಸು ಪೂಜಾರಿ ಲೊರೆಟ್ಟೊ ಅಧ್ಯಕ್ಷತೆಯಲ್ಲಿ ಕೌನ್ಸಿಲ್‌ ಹಾಲ್‌ನಲ್ಲಿ ನಡೆಯಿತು.

ಸದಸ್ಯ ಅಬೂಬಕ್ಕರ್‌ ಸಿದ್ದಿಕ್‌ ವಿಷಯ ಪ್ರಸ್ತಾಪಿಸಿ, ಪಾಣೆಮಂಗಳೂರು ಬಂಗ್ಲೆಗುಡ್ಡೆಯಲ್ಲಿರುವ ನಾಡಕಚೇರಿ ಕಟ್ಟಡವು ಬಂಟ್ವಾಳ ಪುರಸಭೆಯ ಸೊತ್ತಾಗಿದೆ. ಆದರೆ ಪ್ರಸ್ತುತ ಅದರ ಸ್ಥಿತಿ ಶೋಚನೀಯವಾಗಿದ್ದು, ಇದೀಗ ಅದು ಕಂದಾಯ ಇಲಾಖೆಯ ಹೆಸರಿನಲ್ಲಿದೆಯೇ ಅಥವಾ ಪುರಸಭೆಯ ಆಧೀನದಲ್ಲೇ ಇದೆಯೇ ಎಂದು ಪ್ರಶ್ನಿಸಿದರು.

ಪುರಸಭೆಯ ಸೊತ್ತುಗಳು ಯಾವುದು, ಅನ್ಯ ಇಲಾಖೆಯ ಕೈಯಲ್ಲಿರುವ ಪುರಸಭೆಯ ಕಟ್ಟಡ ಯಾವುದು ಎಂಬುದರ ವಿವರ ನಮ್ಮಲ್ಲಿರಬೇಕು. ಅದನ್ನು ಬೇರೆಯವರು ಉಪಯೋಗಿಸುತ್ತಿದ್ದಾರೆ ಎಂದಾಕ್ಷಣ ಅದು ಅವರ ಸೊತ್ತಾಗುವುದಿಲ್ಲ. ಕೆಲವೆಡೆ ಪುರಸಭೆಯ ಕಟ್ಟಡವನ್ನು ತೆರವು ಮಾಡಿ ಇತರ ಇಲಾಖೆಯ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು, ಅದಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.

ಸದಸ್ಯ ಗೋವಿಂದ ಪ್ರಭು ಅವರು ಅದಕ್ಕೆ ಧ್ವನಿಗೂಡಿಸಿ, ಪುರಸಭೆಯ ಕುರಿತು ಯಾವ ದಾಖಲೆಗಳನ್ನು ಕೇಳಿದರೂ ಪುರಸಭೆಯಲ್ಲಿ ಸಿಗುತ್ತಿಲ್ಲ. ಪುರಸಭೆ ದಾಖಲೆ ಎಲ್ಲಿವೆ, ಹಲವೆಡೆ ಪುರಸಭೆ ಜಾಗ ಅನ್ಯರ ಪಾಲಾಗುತ್ತಿದೆ ಎಂದು ಹೇಳಿದರು. ಪುರಸಭೆಯ ಸೊತ್ತುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಅಧ್ಯಕ್ಷರು ದಿಟ್ಟತನ ತೋರ ಬೇಕು ಎಂದು ಸದಸ್ಯ ಮಹಮ್ಮದ್‌ ಶರೀಫ್‌ ಇದೇ ವೇಳೆ ಆಗ್ರಹಿಸಿದರು.

Advertisement

ವಿಶೇಷ ಸಭೆಯ ನಿರ್ಣಯ ಏನಾಯಿತು ?
ಪುರಸಭೆ ವ್ಯಾಪ್ತಿಯ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿ ವಿಶೇಷ ಸಭೆ ನಡೆದಿದೆ. ಆದರೆ ಅದರ ಕುರಿತು ವಾರ ಕಳೆದರೂ ಇನ್ನೂ ಯಾಕೆ ಯಾವುದೇ ನಿರ್ಣಯ ಕೈಗೊಂಡಿಲ್ಲ ಎಂದು ಸದಸ್ಯ ಹರಿಪ್ರಸಾದ್‌ ಪ್ರಶ್ನಿಸಿದರು. ಸಭೆಯಲ್ಲಿ ಕೊಟ್ಟ ಭರವಸೆಯಂತೆ ಯಾರೂ ಕೂಡ ಯಾವ ವಾರ್ಡಿಗೂ ಬಂದಿಲ್ಲ ಎಂದು ಸದಸ್ಯರಾದ ರಾಮಕೃಷ್ಣ ಆಳ್ವ, ಸಿದ್ದೀಕ್‌ ಗುಡ್ಡೆಯಂಗಡಿ, ಉಪಾಧ್ಯಕ್ಷ ಮೊನೀಶ್‌ ಆಲಿ ತಿಳಿಸಿದರು. ನೀರಿನ ಸಮಸ್ಯೆ ಬಗೆಹರಿಯಬೇಕಾದರೆ ನಾವು ಗುತ್ತಿಗೆದಾರರನ್ನು ಕರೆದು ಸಭೆ ಮಾಡಬೇಕು. ಈವರೆಗೂ ಎಂಜಿನಿಯರ್‌ ಜತೆಯೇ ಸಭೆ ನಡೆದಿದ್ದು, ಗುತ್ತಿಗೆದಾರರು ಯಾರು, ಅವರು ಎಲ್ಲಿದ್ದಾರೆ. ಇದು ಸಣ್ಣ ಮೊತ್ತದ ಯೋಜನೆಯಲ್ಲ, ಬರೋಬ್ಬರಿ 96 ಕೋ.ರೂ.ಇದಕ್ಕೆ ಸುರಿಯಲಾಗಿದೆ. ಪೈಪುಲೈನ್‌ ಕಾಮಗಾರಿ ನಡೆದಿದೆ ಎಂಬುದರ ನೀಲನಕಾಶೆ ಬೇಕು ಎಂದು ಎಂದು ಸದಸ್ಯ ಜನಾರ್ದನ ಚಂಡ್ತಿಮಾರ್‌ ಆಗ್ರಹಿಸಿದರು.

-ಬೀದಿನಾಯಿ ಹಾವಳಿ ತಡೆಯಲು ಮಹಮ್ಮದ್‌ ನಂದರಬೆಟ್ಟು, ಸಿದ್ದಿಕ್‌ , ವಿದ್ಯಾವತಿ ಪ್ರಮೋದ್‌ ಆಗ್ರಹ
-ಗಡಿ ಭಾಗದಲ್ಲಿ ತ್ಯಾಜ್ಯ ಸುರಿಯುವುದಕ್ಕೆ ಏನು ಕ್ರಮ- ಇದ್ರೀಸ್‌
-ಗುತ್ತಿಗೆದಾರರಿಗೆ ಸರಿಯಾದ ಮಾನದಂಡ ತಿಳಿಸಿ-ಶರೀಫ್‌

ಪುರಸಭಾ ಚರ್ಚೆಗಳಿಗೆ ಬೆಲೆ ಇಲ್ಲವೇ?
ಪುರಸಭಾ ವ್ಯಾಪ್ತಿಯ ಕೈಕಂಬ ತಂಗುದಾಣಕ್ಕೆ ಸಂಬಂಧಿಸಿ ಸಭೆಯಲ್ಲಿ ಚರ್ಚೆಯಾದದ್ದೇ ಬೇರೆ, ಅಲ್ಲಿ ಅನುಷ್ಠಾನಗೊಂಡದ್ದೇ ಬೇರೆ. ಹಾಗಾದರೆ ಪುರಸಭೆಯ ಚರ್ಚೆಗಳಿಗೆ ಬೆಲೆ ಇಲ್ಲವೇ ಎಂದು ಉಪಾಧ್ಯಕ್ಷ ಮೊನೀಶ್‌ ಅವರು ಪ್ರಶ್ನಿಸಿದರು.

ಉದಯವಾಣಿ ವರದಿ ಪ್ರಸ್ತಾವ
ಬಂಟ್ವಾಳ ಪುರಸಭೆಯ ಹಿಟಾಚಿ ಹಾಗೂ ಸಕ್ಕಿಂಗ್‌ ಯಂತ್ರ ಕಾರ್ಯಾಚರಿಸದೇ ಇರುವ ಕುರಿತು ಉದಯವಾಣಿ ಸುದಿನದಲ್ಲಿ ಡಿ. 10ರಂದು ಪ್ರಕಟಗೊಂಡ ವಿಶೇಷ ವರದಿ ಸಭೆಯಲ್ಲಿ ಪ್ರಸ್ತಾವಗೊಂಡು, ಸಕ್ಕಿಂಗ್‌ ಯಂತ್ರ ಹಾಗೂ ಹಿಟಾಚಿಯನ್ನು ಪೂಜೆ ಮಾಡಲು ಇಡಲಾಗಿದೆಯೇ ಎಂದು ಸದಸ್ಯ ಗೋವಿಂದ ಪ್ರಭು ಕೇಳಿದ ವೇಳೆ ಇತರ ಸದಸ್ಯರು ಕೂಡ ಅದಕ್ಕೆ ಧ್ವನಿಗೂಡಿಸಿದರು.

ಸಮರ್ಪಕ ತ್ಯಾಜ್ಯ ವಿಲೇವಾರಿಗೆ ಸಲಹೆ
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅವರು ಕಂಚಿನಡ್ಕಪದವು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಏನು ಹೇಳಿದ್ದಾರೆ ಎಂದು ಸದಸ್ಯರ ಪ್ರಶ್ನೆಗೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಉತ್ತರಿಸಿ, ತ್ಯಾಜ್ಯ ವಿಲೇವಾರಿ ಪ್ರಕ್ರಿಯೆಯು ಸಮರ್ಪಕವಾಗಿ ನಡೆಯಬೇಕು ಎಂದಿದ್ದಾರೆ. ಘಟಕದಲ್ಲಿ ಹಸಿ ಮತ್ತು ಒಣ ಕಸಗಳೆರಡನ್ನೂ ವಿಲೇವಾರಿ ಮಾಡಲು ಅವಕಾಶವಿರುವುದಾಗಿ ಸ್ಪಷ್ಟಪಡಿಸಿದ್ದಾರೆ ಎಂದರು.

ಸಹಕಾರವಿದ್ದರೆ ಒತ್ತುವರಿ ತೆರವು
ಬಿ.ಸಿ.ರೋಡಿನ ಫ್ಲೈಓವರ್‌ ತಳ ಭಾಗ ಅನಧಿಕೃತ ಮಾರುಕಟ್ಟೆಯಾಗಿದ್ದು, ದೂರು ಬಂದರೂ ಕ್ರಮಕೈಗೊಳ್ಳದೇ ಇರುವ ಕುರಿತು ಸದಸ್ಯ ಹರಿಪ್ರಸಾದ್‌ ಆಕ್ರೋಶ ವ್ಯಕ್ತಪಡಿಸಿದರು. ಸದಸ್ಯ ಶರೀಫ್‌ ಮಾತನಾಡಿ, ಫ‌ುಟ್‌ಪಾತ್‌ ಅತಿಕ್ರಮಣವಾಗಿದ್ದು, ತೆರವು ಮಾಡಬೇಕು ಎಂದರು. ಅಧಿಕಾರಿ ರತ್ನಪ್ರಸಾದ್‌ ಉತ್ತರಿಸಿ, ಸದಸ್ಯರು ಸಹಕರಿಸಿದರೆ ಒತ್ತುವರಿಗಳನ್ನು ತೆರವು ಮಾಡುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next