Advertisement

ಭಾಷೆಯ ಹೆಸರಲ್ಲಿ ಎಲ್ಲರೂ ಒಗ್ಗೂಡಬೇಕಿದೆ 

04:01 PM Nov 02, 2018 | Team Udayavani |

ಕುಮಟಾ: ಕನ್ನಡ ರಾಜ್ಯೋತ್ಸವ ಸಮಿತಿಯಿಂದ ಮಣಕಿ ಮೈದಾನದಲ್ಲಿ ನುಡಿಹಬ್ಬ ಕಾರ್ಯಕ್ರಮ ವೈವಿಧ್ಯಮಯವಾಗಿ ಮೂಡಿಬಂತು. ಕಾರ್ಯಕ್ರಮವನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು. ಭಾಷೆಯ ಹೆಸರಿನ ನೆರಳಿನಲ್ಲಿ ಎಲ್ಲರೂ ಒಗ್ಗೂಡಬೇಕು. ಕನ್ನಡ ಮನಸ್ಸುಗಳು ಐಕ್ಯತೆಯನ್ನು ಸಾಧಿಸಿ ನಾಡು, ನುಡಿಯ ಅಭಿವೃದ್ಧಿಗೆ ಅಡಿಗಂಬವಾಗಬೇಕು ಎಂಬ ಉದ್ದೇಶದೊಂದಿಗೆ ನುಡಿಹಬ್ಬವನ್ನು ವೈವಿಧ್ಯಮಯವಾಗಿ ಕಳೆದ 8 ವರ್ಷಗಳಿಂದ ಆಯೋಜಿಸಿಕೊಂಡು ಬಂದಿದ್ದೇವೆ ಎಂದು ಸಮಿತಿ ಗೌರವಾಧ್ಯಕ್ಷ ಎಂ.ಜಿ. ಭಟ್ಟ ಹೇಳಿದರು.

Advertisement

ಕನ್ನಡ ನಾಡು ನುಡಿಗೆ ಸಂಬಂಧಪಟ್ಟಂತೆ ಸರಕಾರಿ ನೌಕರರ ಸಂಘದ ಅಧ್ಯಕ್ಷ ರವೀಂದ್ರ ಭಟ್ಟ ಸೂರಿ ಅಭಿಮಾನದ ನುಡಿಗಳನ್ನಾಡಿದರು. ಸಂಘಟನೆಯ ಹರೀಶ ಶೇಟ್‌, ಕಸಾಪ ತಾಲೂಕಾಧ್ಯಕ್ಷ ಶ್ರೀಧರ ಗೌಡ, ಕರವೇಯ ಭಾಸ್ಕರ ಪಟಗಾರ ಮತ್ತಿತರರು ಮಾತನಾಡಿದರು. ಅಂಗವಿಕಲ ವೀಲ್‌ಚೇರ್‌ ರೇಸಿನಲ್ಲಿ ರಾಷ್ಟ್ರಕ್ಕೆ ತೃತೀಯ ಸ್ಥಾನ ಹಾಗೂ ಸಮಾಜಮುಖಿ ಕಾರ್ಯಗಳನ್ನು ಮಾಡಿದ ಪ್ರಕಾಶ ನಾಯ್ಕ, ಯಕ್ಷಗಾನ ಕಲಾವಿದ ಹಾಗೂ ಅನೇಕ ವಿದ್ಯಾರ್ಥಿಗಳನ್ನು ಕಲಾವಿದರುಗಳಾಗಿ ತಯಾರು ಮಾಡಿರುವ ಉಮೇಶ ಭಟ್ಟ ಬಾಡ, ದೇಹದಾಡ್ಯ ಸ್ಪರ್ಧೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕಂಚಿನ ಪದಕ ವಿಜೇತ ಹಾಗೂ ಇನ್ನಿತರ ಹಲವು ಪುರಸ್ಕಾರಗಳನ್ನು ಪಡೆದ ರಾಜೇಶ ಮಡಿವಾಳರಿಗೆ ಸನ್ಮಾನಿಸಲಾಯಿತು. ಅತೀ ತೊಂದರೆಯಲ್ಲಿರುವ ಮೂವರಿಗೆ ಸಮಿತಿ ವತಿಯಿಂದ ನಗದು ನೆರವು ನೀಡಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಶಾಂತಿಕಾಂಬ ಡಾನ್ಸ್‌ ಗ್ರೂಪ್‌ ತಂಡದಿಂದ ನಾಡು ನುಡಿಯ ಕುರಿತಾದ ವಿಶೇಷ ನೃತ್ಯ ಪ್ರದರ್ಶನ, ಸ್ನೇಹಾ ಹೆಗಡೆ ತಂಡದಿಂದ ವಿಶೇಷ ನೃತ್ಯರೂಪಕ, ಶಾಜ್‌ ಮ್ಯೂಸಿಕ ಮಂಗಳೂರು ಇವರಿಂದ ಕನ್ನಡ ನಾಡು ನುಡಿಗೆ ಸಂಬಂಧಪಟ್ಟ ಕನ್ನಡ ಸಿನೆಮಾ ಗೀತೆಗಳು ಹಾಗೂ ವಿಶ್ವೇಶ್ವರ ಪಟಗಾರ ಮತ್ತು ಗಣಪತಿ ಮುಕ್ರಿ ಇವರಿಂದ ಚಿತ್ರಕಲಾ ಪ್ರದರ್ಶನ ಹಾಗೂ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆದವು. ಸಭಾ ಕಾರ್ಯಕ್ರಮಕ್ಕೆ ಮುನ್ನ ಸಂಜೆ ಮಣಕಿ ಮೈದಾನದಿಂದ ತಾಯಿ ಭುವನೇಶ್ವರಿಯ ಭಾವಚಿತ್ರದೊಂದಿಗೆ ಭವ್ಯ ಮೆರವಣಿಗೆ ಹೊರಟು ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

Advertisement

Udayavani is now on Telegram. Click here to join our channel and stay updated with the latest news.

Next