ಬೆಂಗಳೂರು: ಈಶ್ವರಪ್ಪ ಬಂಡಾಯ ವಿಚಾರವನ್ನು ನಿರ್ಲಕ್ಷಿಸಲು ಬಿಜೆಪಿಯ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ನಿರ್ಧರಿಸಿದ್ದು ಸಂಧಾನ ಸಾಧ್ಯತೆ ಕ್ಷೀಣವಾಗಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಜತೆಗೆ ಸಭೆ ನಡೆಸಿದ ಬಳಿಕ ದಿಲ್ಲಿಯಲ್ಲಿ ಈಶ್ವರಪ್ಪ ವಿರುದ್ಧ ನೇರವಾಗಿಯೇ ಅಸಮಾಧಾನ ಹೊರ ಹಾಕಿರುವ ಯಡಿಯೂರಪ್ಪ, ಈಶ್ವರಪ್ಪನವರ ಬೇಜವಾಬ್ದಾರಿ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಟಿಕೆಟ್ ನಿರ್ಧಾರ ಮಾಡುವುದು ಯಡಿಯೂರಪ್ಪನ ವೈಯಕ್ತಿಕ ವಿಚಾರವಲ್ಲ. ಚುನಾವಣಾ ಸಮಿತಿಯಲ್ಲಿ ಎಲ್ಲವೂ ನಿರ್ಧಾರವಾಗುತ್ತದೆ. ಇನ್ನು 2-3 ದಿನದಲ್ಲಿ ಅವರಿಗೆ ಎಲ್ಲ ಅರ್ಥವಾಗುತ್ತದೆ. ಆಮೇಲೆ ಅವರೇ ಬರುತ್ತಾರೆ. ಈಶ್ವರಪ್ಪನವರ ಬೇಜವಾಬ್ದಾರಿ ಹೇಳಿಕೆಗೆ ನಾನು ಪ್ರತಿಕ್ರಿಯಿ ಸುವುದಿಲ್ಲ. ಅವರನ್ನು ಸಮಾಧಾ ನಪಡಿಸುವ ಎಲ್ಲ ಪ್ರಯತ್ನ ನಡೆದಿದೆ. ಅವರ ಬಂಡಾಯದ ಬಗ್ಗೆ ಮಾತನಾಡುವುದಿಲ್ಲ. ಮಾಧುಸ್ವಾಮಿ ಹಾಗೂ ಕರಡಿ ಸಂಗಣ್ಣ ಜತೆಗೆ ನಾನು ಚರ್ಚೆ ಮಾಡುತ್ತೇನೆ ಎನ್ನುವ ಮೂಲಕ ಈಶ್ವರಪ್ಪ ಬಂಡಾಯವನ್ನು ನಿರ್ಲಕ್ಷಿಸುವ ಪ್ರಯತ್ನ ಮಾಡಿದ್ದಾರೆ.
ಸಭೆಯಲ್ಲೂ ಕೋಪ
ದೆಹಲಿಯಲ್ಲಿ ನಡೆದ ಸಭೆಯಲ್ಲೂ ಈ ವಿಚಾರ ಪ್ರಸ್ತಾಪವಾಗಿದ್ದು, ನನ್ನ ಹಾಗೂ ಕುಟುಂಬದ ವಿರುದ್ಧವೇ ಈಶ್ವರಪ್ಪ ಮಾತನಾಡಿದ್ದಾರೆ. ನಾನು ಮಾತನಾಡುವ ಸ್ಥಿತಿಯನ್ನು ಮೀರಿ ಬಹುದೂರ ಸಾಗಿದ್ದಾರೆ. ಹೀಗಾಗಿ ನನ್ನನ್ನು ಸಂಧಾನಕ್ಕೆ ಕಳುಹಿಸಬೇಡಿ. ಬೇಕಿದ್ದರೆ ಸಂಘದ ಪ್ರಮುಖರು ಮಾತನಾಡಲಿ ಎಂದು ಯಡಿಯೂರಪ್ಪ ಕಡ್ಡಿ ತುಂಡಾಗುವಂತೆ ಜೆ.ಪಿ.ನಡ್ಡಾ ಎದುರು ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಇದೆಲ್ಲದರ ಜತೆಗೆ ಬಿಜೆಪಿ ರಾಜ್ಯ ಘಟಕವೂ ಈಶ್ವರಪ್ಪ ವಿಚಾರದಲ್ಲಿ ಮೌನಕ್ಕೆ ಜಾರಿದೆ. ಯಾರೂ ಕೂಡ ಅವರ ಜತೆಗೆ ಮಾತುಕತೆ ನಡೆಸಿಲ್ಲ. ಅಸಮಾಧಾನಗೊಂಡವರನ್ನೆಲ್ಲ ಪ್ರಮುಖರು ದೂರವಾಣಿ ಮೂಲಕ ಸಂಪರ್ಕಿಸಿ ಚರ್ಚಿಸುತ್ತಿದ್ದರೂ ಈಶ್ವರಪ್ಪ ವಿಚಾರದಲ್ಲಿ ತಟಸ್ಥವಾಗಿದ್ದಾರೆ. ಹೀಗಾಗಿ ಈಶ್ವರಪ್ಪ ಈಗ ಏಕಾಂಗಿಯಾಗಿದ್ದಾರೆ.