ನೀವು “ಕೋಟಿಗೊಬ್ಬ-2′ ಸಿನಿಮಾ ನೋಡಿದ್ದರೆ ಅಲ್ಲಿ ಬರುವ ಸತ್ಯ ಹಾಗೂ ಶಿವ ಈ ಎರಡು ಪಾತ್ರಗಳು ನೆನಪಲ್ಲಿರುತ್ತವೆ. ಕೊನೆಗೆ ಶಿವ ಸತ್ತ, ಸತ್ಯ ಬದುಕಿದ ಎಂಬ ಅಂಶದೊಂದಿಗೆ ಸಿನಿಮಾ ಮುಗಿಯುತ್ತದೆ. ಶಿವನನ್ನು ಎಸಿಪಿ ಸಾಯಿಸಿದ ಎಂಬ ಸತ್ಯನ ಆರೋಪದೊಂದಿಗೆ ಎಸಿಪಿ ಕಿಶೋರ್ ಜೈಲಿಗೆ ಹೋಗಿರೋದು ನಿಮಗೆ ನೆನಪಿರಬಹುದು. ಈಗ “ಕೋಟಿಗೊಬ್ಬ-3′ ಸಿನಿಮಾದಲ್ಲಿ ಮತ್ತೆ ಸತ್ಯ- ಶಿವ ಪಾತ್ರಗಳು ಕಾಣಸಿಗುತ್ತವೆ. ಜೊತೆಗೆ ಅಚ್ಚರಿ ಎಂಬಂತೆ “ಗೋಸ್ಟ್ ಮ್ಯಾನ್’ಇಡೀ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. ಹಾಗಾದರೆ, ಆತ ಯಾರು, ಎಲ್ಲಿಂದ ಬಂದ… ಇದೇ ಇಡೀ “ಕೋಟಿಗೊಬ್ಬ-3′ ಚಿತ್ರದ ಹೈಲೈಟ್.
“ಕೋಟಿಗೊಬ್ಬ-3′ ಚಿತ್ರವನ್ನು “ಕೋಟಿಗೊಬ್ಬ -2′ ಚಿತ್ರದ ಮುಂದುವರೆದ ಭಾಗ ಎನ್ನುವುದಕ್ಕಿಂತ ಆ ಚಿತ್ರದ ಎರಡು ಪ್ರಮುಖ ಪಾತ್ರಗಳ ಮುಂದುವರೆದ ಭಾಗ ಎನ್ನಬಹುದು. ಮುಖ್ಯವಾಗಿ ಇಲ್ಲಿ ಸತ್ಯ ಹಾಗೂ ಎಸಿಪಿ ಕಿಶೋರ್ ಪಾತ್ರಗಳು ಮುಂದುವರೆದಿದೆ. ಉಳಿದಂತೆ ಹೊಸ ಪಾತ್ರಗಳು ಸೇರಿಕೊಳ್ಳುತ್ತಾ ಹೋಗಿವೆ. ಜೊತೆಗೆ ಹೊಸ ಸನ್ನಿವೇಶಗಳು, ಟ್ವಿಸ್ಟ್‌ಗಳು ಪ್ರೇಕ್ಷಕರಿಗೆ ಮಜಾ ಕೊಡುವಲ್ಲಿ ಹಿಂದೆ ಬಿದ್ದಿಲ್ಲ. “ಕೋಟಿಗೊಬ್ಬ-3′ ಒಂದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್. ಒಂದು ಸಣ್ಣಲೈನ್ ನೊಂದಿಗೆ ಕಥೆಯನ್ನು ಬೆಳೆಸಿಕೊಂಡು ಹೋಗಲಾಗಿದೆ. ಹಾಗಾದರೆ ಅದೇನು ಎಂಬ ಕುತೂಹಲವಿದ್ದರೆ ನೀವು ಸಿನಿಮಾ ನೋಡಲಡ್ಡಿಯಿಲ್ಲ. ಶಿವ ಕಾರ್ತಿಕ್ ಎಂಬ ನವನಿರ್ದೇಶಕ ಇಡೀ ಸಿನಿಮಾವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಸುದೀಪ್ ಸಿನಿಮಾದಲ್ಲಿರಬೇಕಾದ ಕೆಲವು ಮೂಲ ಅಂಶಗಳು ಹಾಗೂ ಅವರ ಅಭಿಮಾನಿಗಳನ್ನು ರಂಜಿಸುವ ಅವಕಾಶವನ್ನು ಅವರು ಮಿಸ್ ಮಾಡಿಲ್ಲ. ಈ ಸಿನಿಮಾದಲ್ಲಿ ಶಿವ ಹಾಗೂ ಸತ್ಯ ಪಾತ್ರಗಳ ಮೂಲವನ್ನು ತೆರೆದಿಟ್ಟಿದ್ದಾರೆ. ಜೊತೆಗೆ ಮಾಫಿಯಾ, ಅದರ ಹಿಂದಿನ ದ್ವೇಷ, ಸೇಡಿನ ಕಥೆಯನ್ನು ಸೇರಿಸಿ, ಕಮರ್ಷಿಯಲ್ ಎಂಟರ್‌ಟೈನರ್ ಆಗಿ ಕಟ್ಟಿಕೊಡಲಾಗಿದೆ.
ಇದನ್ನೂ ಓದಿ:ಕೊನೆಗೂ ಫಲ ನೀಡಿತು ಗಂಗೂಲಿ ಪ್ರಯತ್ನ: ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ದ್ರಾವಿಡ್ ನೇಮಕ
ಚಿತ್ರದ ಒಂದಷ್ಟು ಭಾಗ ವಿದೇಶದಲ್ಲಿ ನಡೆಯುತ್ತದೆ. ಅದಕ್ಕೊಂದು ಕಾರಣವೂ ಇದೆ. ಚಿತ್ರ ದಲ್ಲಿ ಮೈ ನವಿರೇಳಿಸುವ ವಿದೇಶದಲ್ಲಿನ ಚೇಸಿಂಗ್ ದೃಶ್ಯಗಳಿವೆ. ಸಣ್ಣದೊಂದು ಲವ್ ಸ್ಟೋರಿಯೂ ಪಾಸಿಂಗ್ ಶಾಟ್‌ನಲ್ಲಿ ಬಂದು ಹೋಗುತ್ತದೆ. ಅದರ ಇಲ್ಲಿ ಮೂಲ ಅಂಶ “ಗೋಸ್ಟ್‌ಮ್ಯಾನ್’ ರಿವೆಂಜ್. “ಗೋಸ್ಟ್‌ಮ್ಯಾನ್’ ಹಿನ್ನೆಲೆಯೊಂದಿಗೆ ಸಿನಿಮಾ ಸಾಗುತ್ತದೆ. ಸುದೀಪ್ ಎಂಟ್ರಿಯೇ ಇಲ್ಲಿ ಮಜಾ ಕೊಡುತ್ತದೆ. ವಿಭಿನ್ನ ಗೆಟಪ್‌ನೊಂದಿಗೆ ಎಂಟ್ರಿಕೊಟ್ಟು ಅವರ ಮುಖದರ್ಶನ ನೀಡಿದ್ದಾರೆ. ಅದರಾಚೆ ಅವರ ಪಾತ್ರ, ನಟನೆಯ ಬಗ್ಗೆ ಒಂದೇ ಮಾತಲ್ಲಿ ಹೇಳುವುದಾದರೆ “ಸತ್ಯಂ ಶಿವಂ ಸುಂದರಂ’.
ನಾಯಕಿ ಮಡೊನಾ ಬಂದಿದ್ದು ಹೋಗಿದ್ದು ಗೊತ್ತೇ ಆಗುವುದಿಲ್ಲ. ರವಿಶಂಕರ್ ಅವರಿಗೆ ಈ ಬಾರಿ ನಟನೆಗಿಂತ ಹೆಚ್ಚು ಡೈಲಾಗ್ ಸಿಕ್ಕಿದೆ. ಅದರಲ್ಲಿ ಬಹುತೇಕ ಡೈಲಾಗ್ ಕಿಚ್ಚ ಸುದೀಪ್ ಅವರ ಪರ್ಫಾರ್ಮೆನ್ಸ್ ಸುತ್ತವೇ ಸುತ್ತುತ್ತದೆ. ಉಳಿದಂತೆ ಅಫ್ತಾಬ್ ಶಿವದಾಸನಿ, ಶ್ರದ್ಧಾ, ನವಾನ್, ಅಭಿರಾಮಿ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ
ರವಿಪ್ರಕಾಶ್ ರೈ