Advertisement

ಕೋಲಾರ: ಸಮಸ್ಯೆ ಗೌಣ, ವ್ಯಕ್ತಿಗತ ಟೀಕೆಯೇ ಪ್ರಧಾನ

01:06 AM Mar 11, 2019 | |

 ಕೋಲಾರ: ರಾಜ್ಯದ ಮೂಡಣ ದಿಕ್ಕಿನ ಮೊದಲ ಲೋಕಸಭಾ ಕ್ಷೇತ್ರ ಕೋಲಾರ. ಬೆಟ್ಟ, ಗುಡ್ಡಗಳನ್ನೊಳಗೊಂಡ ಶಾಶ್ವತ ಬರಗಾಲಪೀಡಿತ ಕ್ಷೇತ್ರ. ದಲಿತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ್ದೇ ಗೆಲುವಿನ ಪ್ರಾಬಲ್ಯ. ಇದುವರೆಗೂ ನಡೆದಿರುವ ಚುನಾವಣೆಗಳಲ್ಲಿ ಒಮ್ಮೆ ಮಾತ್ರ ಜನತಾ ಪಕ್ಷ ಗೆದ್ದಿದೆ. ಉಳಿದಂತೆ ಕಾಂಗ್ರೆಸ್‌ನದೇ ಜಯಭೇರಿ.

Advertisement

1991ರ ಬಳಿಕ ನಡೆದಿರುವ ಏಳು ಚುನಾವಣೆಗಳಲ್ಲಿ ಕಾಂಗ್ರೆಸ್‌ನಿಂದ ಕೆ.ಎಚ್‌.ಮುನಿಯಪ್ಪ ಗೆಲುವಿನ ಪತಾಕೆ ಹಾರಿಸಿದ್ದಾರೆ. ಈ ಬಾರಿ ಅವರು ಎಂಟನೇ ಚುನಾವಣೆ ಎದುರಿಸುತ್ತಿದ್ದು, ಆಡಳಿತ ವಿರೋಧಿ ಅಲೆ ಅವರನ್ನು ಬೃಹದಾಕಾರವಾಗಿ ಕಾಡುತ್ತಿದೆ. ಕಾಂಗ್ರೆಸ್‌ನ ಮುಖಂಡರೇ ಇದರ ಪ್ರಮುಖ ಪೋಷಕರಾಗಿರುವುದು ವಿಶೇಷ.

ಕ್ಷೇತ್ರವನ್ನು ಕಾಡುತ್ತಿರುವ ಎಲ್ಲ ಸಮಸ್ಯೆಗಳನ್ನು ಗೌಣವಾಗಿಸಿ, ಏಳು ಬಾರಿ ಗೆದ್ದಿರುವ ಮುನಿಯಪ್ಪ ಪರ ಮತ್ತು ವಿರೋಧ ಬಣಗಳು ಪರಸ್ಪರ ವೈಯಕ್ತಿಕ ದೋಷಾರೋಪಣೆಗಳನ್ನು ಮಾಡುತ್ತಾ, ಕಚ್ಚಾಡುತ್ತಿದ್ದಾರೆ. ಮುಸುಕಿನ ಗುದ್ದಾಟವಾಗಿದ್ದ ರಾಜಕೀಯ ಕೆಸರೆರಚಾಟ ಇದೀಗ ಬಹಿರಂಗವಾಗಿ ನಡೆಯುತ್ತಿರುವುದು ಸಾರ್ವಜನಿಕರ ಮನರಂಜನೆಗೂ ಕಾರಣವಾಗಿದೆ.

ಬಿಜೆಪಿ ಚುನಾವಣ ಅಸ್ತ್ರ
ಮುನಿಯಪ್ಪನವರು ಸಂಸತ್ತಿನಲ್ಲಿ ಕೋಲಾರ ಕ್ಷೇತ್ರದ ಸಮರ್ಥ ಧ್ವನಿಯಾಗಿಲ್ಲ. ಚಿನ್ನದ ಗಣಿಯನ್ನು ಪುನಶ್ಚೇತನಗೊಳಿಸಿಲ್ಲ. ಗಣಿ ಕಾರ್ಮಿಕರ ಸಮಸ್ಯೆ ಬಗೆಹರಿಸಿಲ್ಲ. ಸುಳ್ಳು ಭರವಸೆಗಳನ್ನು ನೀಡಿ, ರೈಲ್ವೇ ಕೋಚ್‌ ಫ್ಯಾಕ್ಟರಿ ಘೋಷಿಸಿದ್ದಾರೆ. ವೃತ್ತಿ ಕೌಶಲ ತರಬೇತಿ ಕೇಂದ್ರ ಆರಂಭಿಸಿಲ್ಲ. ಕೆ.ಸಿ.ವ್ಯಾಲಿ ಸುಗಮ ಅನುಷ್ಠಾನಕ್ಕೂ ಅಡ್ಡಿಯಾಗಿದ್ದಾರೆ. ಕ್ಷೇತ್ರದಲ್ಲಿ ಹೆಚ್ಚಾಗಿರುವ ದಲಿತರ ಪ್ರತಿನಿಧಿಯಾಗಿ ವರ್ತಿಸುತ್ತಿಲ್ಲ…ಹೀಗೆ ಅವರ ವಿರುದ್ಧದ ಆರೋಪಗಳ ಪಟ್ಟಿ ಬೆಳೆಯುತ್ತದೆ. ಇದು ಬಿಜೆಪಿಗೆ ವರದಾನವಾಗಿದ್ದು, ಬಿಜೆಪಿ ನಾಯಕರು ಪ್ರಚಾರದ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಜತೆಗೆ ಈ ಬಾರಿ ಮತದಾರರು ಬದಲಾವಣೆ ಬಯಸುತ್ತಿದ್ದಾರೆ ಎಂಬುದು ಬಿಜೆಪಿ ನಂಬಿಕೆ.

ಕಾಂಗ್ರೆಸ್‌ ಚುನಾವಣ ಅಸ್ತ್ರ
ಮುನಿಯಪ್ಪ ಮಾತ್ರ ತಮ್ಮ ಪ್ರಯತ್ನದಿಂದಲೇ ಕೋಲಾರ ಜಿಲ್ಲೆಯಲ್ಲಿ ಚತುಷ್ಪಥ ಹೆದ್ದಾರಿ ನಿರ್ಮಾಣವಾಗಿದೆ. ರೈಲ್ವೆ ಬ್ರಾಡ್‌ಗೆàಜ್‌ ಕಾಮಗಾರಿಯಾಗಿದೆ. ರೈಲ್ವೇ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಚಿಕ್ಕಬಳ್ಳಾಪುರ-ಕೋಲಾರ-ಬಂಗಾರ
ಪೇಟೆ ನಡುವೆ ಹಲವಾರು ರೈಲುಗಳು ಸಂಚರಿಸಲು ಶ್ರಮಿಸಿದ್ದೇನೆ. ತಮ್ಮ ಅವಧಿಯಲ್ಲಿ ಸಂಸದರ ನಿಧಿಯಿಂದ ನೂರಾರು ಸಮುದಾಯ ಭವನ, ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ತೀರಾ ಇತ್ತೀಚೆಗೆ ಕೆಜಿಎಫ್ನಲ್ಲಿ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಆರಂಭಿಸಿದ್ದೇನೆ. ಕೋಲಾರ ಮಾರ್ಗವಾಗಿ ದಿಲ್ಲಿಗೆ ರೈಲು ಸಂಚರಿಸುವವರೆಗೂ ಕೋಲಾರ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಸಾಕಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇನೆ ಎನ್ನುತ್ತಾ ಸಾಧನೆಗಳ ಪಟ್ಟಿ ನೀಡುತ್ತಾರೆ. ಇದನ್ನೇ ಸ್ವಂತದ, ಪಕ್ಷದ ಚುನಾವಣ ಪ್ರಚಾರದ ಸರಕನ್ನಾಗಿ ಬಳಸಿಕೊಳ್ಳುತ್ತಿದ್ದಾರೆ.

Advertisement

ಜಿಲ್ಲೆಯ ಬಂಗಾರಪೇಟೆ ತಾಲೂಕಿನ ರಾಮಸಾಗರ ಗ್ರಾಮವನ್ನು ಸಂಸದರ ಆದರ್ಶ ಗ್ರಾಮವನ್ನಾಗಿ ಅವರು ಆಯ್ಕೆ ಮಾಡಿಕೊಂಡಿದ್ದರು. ಗ್ರಾಮ ಪಂಚಾಯತ್‌ ಮಟ್ಟದಲ್ಲಿ ವಾಸ್ತವವಾಗಿ ಅವಲೋಕಿಸಿದರೆ ರಾಮಸಾಗರ, ಇಂದಿಗೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಆದರ್ಶ ಗ್ರಾಮದ ಲಕ್ಷಣಗಳು ಕಾಣಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.

ಕ್ಷೇತ್ರ ವ್ಯಾಪ್ತಿ
ಲೋಕಸಭಾ ಕ್ಷೇತ್ರವು ಕೋಲಾರ ಜಿಲ್ಲೆಯ ಆರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳ ಸಹಿತ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡಿದೆ. ಎಂಟು ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ ಐದು ಶಾಸಕರನ್ನು ಹೊಂದಿದ್ದರೆ, ಜೆಡಿಎಸ್‌ ಎರಡು ಕ್ಷೇತ್ರಗಳಲ್ಲಿ ಗೆದ್ದಿದೆ. ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್‌ ಬೆಂಬಲಿತ ಪಕ್ಷೇತರ ಶಾಸಕರಿದ್ದಾರೆ.

ಸಮಸ್ಯೆಗಳ ಬಗ್ಗೆ ಮೌನ
ಕುಡಿಯುವ ನೀರಿನ ಸಮಸ್ಯೆಯಿಂದ ಹಿಡಿದು ಕೃಷಿ, ತೋಟಗಾರಿಕೆ, ರೇಷ್ಮೆ, ಹೈನುಗಾರಿಕೆ, ಕೃಷಿ  ಮಾರುಕಟ್ಟೆ ವಿಚಾರದಲ್ಲಿ ಸಾಕಷ್ಟು ಆಡಳಿತಾತ್ಮಕ ಸಮಸ್ಯೆಗಳು ಕ್ಷೇತ್ರವನ್ನು ಕಾಡುತ್ತಿವೆ. ಹಾಗೆ ನೋಡಿದರೆ ಎತ್ತಿನಹೊಳೆಯಿಂದ ಜಿಲ್ಲೆಗೆ ಕುಡಿಯುವ ನೀರು ತರುವ ಮತ್ತು ಕೆಸಿ ವ್ಯಾಲಿಯಿಂದ ತ್ಯಾಜ್ಯ ಸಂಸ್ಕರಿತ ನೀರನ್ನು ಜಿಲ್ಲೆಯ ಕೆರೆಗಳಿಗೆ ತುಂಬಿಸುವ ವಿಚಾರಗಳು ಚುನಾವಣ ಪ್ರಚಾರದ ಪ್ರಮುಖ ಅಸ್ತ್ರಗಳಾಗಬೇಕಿತ್ತು. ಆದರೆ ಲೋಕಸಭಾ ಚುನಾವಣೆಗೆ ಮುಖಂಡರು ಈ ಸಮಸ್ಯೆಗಳನ್ನು ಮುಂದಿಡದೆ, ಸ್ವ-ಹಿತಾಸಕ್ತಿಯ ನೆಲೆಗಟ್ಟಿನಲ್ಲಿ ಪ್ರಚಾರಕ್ಕೆ ಸಜ್ಜಾಗುತ್ತಿದ್ದಾರೆ. 

ಕಳೆದ 4 ವರ್ಷಗಳ ಅವಧಿಯಲ್ಲಿ ಕ್ಷೇತ್ರಕ್ಕೆ ಸಂಸದರ ನಿಧಿಯಿಂದ 17.50 ಕೋ. ರೂ. ಗಳು ಬಿಡುಗಡೆಯಾಗಿವೆ. ಈ ಪೈಕಿ ಸಮುದಾಯ ಭವನ, ರಸ್ತೆ ಕಾಮಗಾರಿಗಳಿಗೆ 16.62 ಕೋ. ರೂ.ಗಳನ್ನು ಪ್ರತಿ ವರ್ಷ ನೂರಕ್ಕೂ ಹೆಚ್ಚು ಕಾಮಗಾರಿಗಳಿಗೆ ವಿನಿಯೋಗಿಸಲಾಗಿದೆ. ಕೊನೆಯ ಕಂತಿನ ಶೇ.25ರಷ್ಟು ಅನುದಾನವಾದ 8.76 ಕೋ. ರೂ.ಮಾತ್ರವೇ ಉಳಿಕೆಯಾಗಿದೆ. ಇನ್ನು ಸಂಸತ್‌ನಲ್ಲಿ ಸಂಸದರ ಹಾಜರಾತಿ ಪ್ರತಿಬಾರಿಯೂ ಶೇ.95ಕ್ಕಿಂತ ಹೆಚ್ಚಿದೆ.

Advertisement

Udayavani is now on Telegram. Click here to join our channel and stay updated with the latest news.

Next