Advertisement

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

01:51 AM Nov 29, 2024 | Team Udayavani |

ಬೆಂಗಳೂರು: ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ತಿದ್ದುಪಡಿ ಮಸೂದೆ ಸೇರಿ ಬೆಳಗಾವಿಯಲ್ಲಿ ನಡೆಯುವ ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆಯಾಗುವ 8 ಮಸೂದೆಗಳಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದ್ದು, ಕಾರ್ಮಿಕ ಕಲ್ಯಾಣ ನಿಧಿಯ ಬಗ್ಗೆ 10 ನಿಮಿಷಕ್ಕೂ ಹೆಚ್ಚು ಕಾಲ ಚರ್ಚೆ ನಡೆಸಲಾಗಿದೆ.

ಯಾವ ಯಾವ ಮಸೂದೆ?
– ಕರ್ನಾಟಕ ಕಾರ್ಮಿಕರ ಕಲ್ಯಾಣ ನಿಧಿ (ತಿದ್ದುಪಡಿ) ಮಸೂದೆ-2024
ಇದರ ಪ್ರಕಾರ ಕಾರ್ಮಿಕ ಕಲ್ಯಾಣ ನಿಧಿಗೆ ಕಾರ್ಮಿಕರು, ಸರಕಾರ ಹಾಗೂ ಕಂಪೆನಿಗಳಿಂದ ನೀಡುತ್ತಿದ್ದ ವಂತಿಕೆ ಪ್ರಮಾಣ ಹೆಚ್ಚಿಸಲಾಗಿದೆ. ಹಿಂದಿನ ನಿಯಮದ ಪ್ರಕಾರ ಕಾರ್ಮಿಕ-20 ರೂ. ಸರಕಾರ 20 ರೂ. ಹಾಗೂ ಕಂಪೆನಿ 40 ರೂ.ನ್ನು ವಾರ್ಷಿಕವಾಗಿ ಈ ಕಲ್ಯಾಣ ನಿಧಿಗೆ ನೀಡಬೇಕಿತ್ತು. ಆದರೆ ಈಗ ಕಾರ್ಮಿಕ 50 ರೂ. ಸರಕಾರ 50 ರೂ. ಹಾಗೂ ಕಂಪೆನಿ 100 ರೂ. ವಂತಿಗೆ ನೀಡಬೇಕು. ಇದರಿಂದ ವಾರ್ಷಿಕ 100 ಕೋಟಿ ರೂ. ನಿಧಿ ಸಂಗ್ರಹಣೆ ಗುರಿ ಹೊಂದಲಾಗಿದೆ.

– ಕರ್ನಾಟಕ ಅಂತರ್ಜಲ (ನಿಯಮಾವಳಿ ಮತ್ತು ಅಭಿವೃದ್ಧಿ ಮತ್ತು ನಿರ್ವಹಣ ನಿಯಂತ್ರಣ) (ತಿದ್ದುಪಡಿ) ಮಸೂದೆ-2024ಕೊರೆದ ಕೊಳವೆ ಬಾವಿಗಳು ವಿಫ‌ಲವಾದಾಗ ಅವುಗಳನ್ನು ಸಮರ್ಪಕವಾಗಿ ಮುಚ್ಚದೆ ಇರುವುದರಿಂದ ಆಗುವ ಮಾನವ ಹಾನಿ ತಡೆಯಲು ಈ ಮಸೂದೆ. ವಿಫ‌ಲ ಕೊಳವೆ ಬಾವಿ ನಿರ್ವಹಣೆ ಮಾಡದ ಜಮೀನು ಮಾಲಕ ಹಾಗೂ ಬೋರ್‌ ಕೊರೆದವರಿಗೆ ಇದರ ಪ್ರಕಾರ 1 ವರ್ಷ ಶಿಕ್ಷೆ ಹಾಗೂ 10 ಸಾವಿರ ರೂ. ದಂಡಕ್ಕೆ ಅವಕಾಶ.
– ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ಮಸೂದೆ-2024 ಬಸವನಬಾಗೇವಾಡಿ ಸಮಗ್ರ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮ ಆಕರ್ಷಣೆಗೆ
– ಚಾಣಕ್ಯ ವಿಶ್ವವಿದ್ಯಾಲಯ (ತಿದ್ದುಪಡಿ) ಮಸೂದೆ-2024 ಉಳಿದ ಖಾಸಗಿ ವಿವಿಗಳ ರೀತಿ ಚಾಣಕ್ಯ ವಿ.ವಿ.ಗೆ ಸರಕಾರದ ಪ್ರತಿನಿಧಿಯಾಗಿ ಸದಸ್ಯರ ನಾಮ ನಿರ್ದೇಶನಕ್ಕೆ ಅವಕಾಶವಿರಲಿಲ್ಲ. ಹೀಗಾಗಿ ನಾಮನಿರ್ದೇಶನಕ್ಕೆ ಅವಕಾಶ ಕಲ್ಪಿಸಲು ತಿದ್ದುಪಡಿ.
– ಕರ್ನಾಟಕ ರಾಜ್ಯ ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯ (ತಿದ್ದುಪಡಿ) ಮಸೂದೆ-2024
ರಾಜ್ಯಪಾಲರ ಬದಲು ಮುಖ್ಯ ಮಂತ್ರಿಯನ್ನು ಈ ವಿಶ್ವವಿದ್ಯಾನಿಲಯದ ಕುಲಪತಿ ಮಾಡುವುದಕ್ಕೆ ಅವಕಾಶ
– ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ಮಸೂದೆ-2024 ಜಿಎಸ್‌ಟಿ ಸಂಗ್ರಹ ಹಾಗೂ ದಂಡಕ್ಕೆ ಸಂಬಂಧಪಟ್ಟಂತೆ ಕೇಂದ್ರದ ಕಾಯಿದೆಗೆ ಪೂರಕವಾಗಿ ತಿದ್ದುಪಡಿ.
– ಬೃಹತ್‌ ಬೆಂಗಳೂರು ಮಹಾ ನಗರ ಪಾಲಿಕೆ (2ನೇ ತಿದ್ದುಪಡಿ) ಮಸೂದೆ-2024 ಆಸ್ತಿ ತೆರಿಗೆ ಬಾಕಿ ಒಂದು ಬಾರಿ ಇತ್ಯರ್ಥಪಡಿಸುವ ಸಮಯಾವಧಿ ವಿಸ್ತರಣೆಗೆ ಹೊರಡಿಸಿದ್ದ ಅಧ್ಯಾದೇಶಕ್ಕೆ ಕಾಯಿದೆಯ ಸ್ವರೂಪ
– ಕರ್ನಾಟಕ ಪ್ರವಾಸೋದ್ಯಮ ರೋಪ್‌ವೇಸ್‌ ಮಸೂದೆ-2024 ರಾಜ್ಯ ಸರಕಾರ ರೋಪ್‌ ವೇ ನಿರ್ಮಾಣ ಮಾಡಲು ಈಗಾಗಲೇ ಗುರುತಿಸಿರುವ 12 ತಾಣಗಳಲ್ಲಿ ಸುರಕ್ಷೆ ಹಾಗೂ ಭದ್ರತೆಯನ್ನು ನಿಗದಿ ಮಾಡುವುದಕ್ಕಾಗಿ ಮಸೂದೆ.

500 ಸರಕಾರಿ ಶಾಲೆ ಪಬ್ಲಿಕ್‌ ಶಾಲೆಗಳಾಗಿ ಪರಿವರ್ತನೆ
ಬೆಂಗಳೂರು, ನ. 28: ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ನ (ಎಡಿಬಿ) 2,500 ಕೋಟಿ ರೂ. ಬಾಹ್ಯ ಸಹಯೋಗದೊಂದಿಗೆ ರಾಜ್ಯದ 500 ಸರಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್‌ ಶಾಲೆಯನ್ನಾಗಿ ಪರಿವರ್ತಿಸುವ ಮಹತ್ವದ ನಿರ್ಧಾರವನ್ನು ಸಚಿವ ಸಂಪುಟ ಸಭೆ ತೆಗೆದುಕೊಂಡಿದೆ. 2025ರಿಂದ 2029ರ 4 ವರ್ಷದ ಅವಧಿಯಲ್ಲಿ ಅಸ್ತಿತ್ವದಲ್ಲಿರುವ ಸರಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್‌ ಮಾದರಿ ಶಾಲೆಗಳಾಗಿ ಪರಿವರ್ತಿಸಲಾಗುವುದು ಎಂದು ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್‌.ಕೆ. ಪಾಟೀಲ್‌ ಸುದ್ದಿಗಾರರಿಗೆ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next