ಮುಂಬೈ: ಇತ್ತೀಚೆಗೆ ವಿವಾಹವಾದ ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಗೆ ದುಬಾರಿ ರಿಯಲ್ ಎಸ್ಟೇಟ್, ಕಾರುಗಳು ಮತ್ತು ಆಭರಣಗಳು ಉಡುಗೊರೆ ರೂಪದಲ್ಲಿ ಬಂದಿವೆ ಎಂಬ ವರದಿಗಳು ಸುಳ್ಳು ಎಂದು ವಧುವಿನ ಕುಟುಂಬ ಮಾಹಿತಿ ನೀಡಿದೆ.
ಆಥಿಯಾ ತಂದೆ ಸುನೀಲ್ ಶೆಟ್ಟಿ ಅವರ ವಕ್ತಾರರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಈ ಬಗ್ಗೆ ಸ್ಪಷ್ಟಪಡಿಸಿದ್ದು, “ದುಬಾರಿ ಉಡುಗೊರೆ ಕುರಿತ ಎಲ್ಲಾ ವರದಿಗಳು ಸಂಪೂರ್ಣವಾಗಿ ಆಧಾರ ರಹಿತವಾಗಿವೆ. ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಅವರಿಗೆ ಬಂದ ಉಡುಗೊರೆಗಳ ಬಗ್ಗೆ ಸುದ್ದಿಗಳು ನಿಜವಲ್ಲ, ಅಂತಹ ತಪ್ಪು ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸುವ ಮೊದಲು ನಮ್ಮೊಂದಿಗೆ ವಿವರಗಳನ್ನು ಖಚಿತಪಡಿಸಿ” ಎಂದಿದ್ದಾರೆ.
ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಜ.23ರಂದು ಸುನಿಲ್ ಶೆಟ್ಟಿ ನಿವಾಸದಲ್ಲಿ ವಿವಾಹವಾದರು. ಈ ವೇಳೆ ನೂತನ ದಂಪತಿಗಳಿಗೆ ಕ್ರಿಕೆಟಿಗರು ಮತ್ತು ಬಾಲಿವುಡ್ ಸೆಲೆಬ್ರಿಟಿಗಳು ಬೆಲೆಬಾಳುವ ಉಡುಗೊರೆಗಳನ್ನು ನೀಡಿದ್ದಾರೆ ಎಂದು ಹಲವಾರು ವರದಿಗಳು ಹೇಳಿವೆ.
ಇದನ್ನೂ ಓದಿ:ಚುನಾವಣೆಗೆ ಮೂರು ತಿಂಗಳು ಇರುವಾಗಲೇ ಆಮಿಷ ಆರಂಭ ; ಜನಪ್ರಿಯ ಯೋಜನೆಗಳ ಬೆನ್ನೇರಿ…
ವರದಿಗಳ ಪ್ರಕಾರ, ಸಲ್ಮಾನ್ ಖಾನ್ ಅವರು ನೂತನ ದಂಪತಿಗೆ ₹ 1.64 ಕೋಟಿ ಮೌಲ್ಯದ ಆಡಿ ಕಾರು ಮತ್ತು ಜಾಕಿ ಶ್ರಾಫ್ ಅವರು ಅಥಿಯಾ ಅವರಿಗೆ 30 ಲಕ್ಷ ರೂ. ಮೌಲ್ಯದ ಚೋಪಾರ್ಡ್ ವಾಚ್ ನೀಡಿದರು. ಅಲ್ಲದೆ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು 2 ಕೋಟಿ ರೂ. ಹೆಚ್ಚು ಮೌಲ್ಯದ ಬಿಎಂಡಬ್ಲ್ಯು ಮತ್ತು ಎಂಎಸ್ ಧೋನಿ 80 ಲಕ್ಷ ಮೌಲ್ಯದ ಕವಾಸಕಿ ಬೈಕನ್ನು ಉಡುಗೊರೆಯಾಗಿ ನೀಡಿದ್ದಾರೆ. ನಟ ಅರ್ಜುನ್ ಕಪೂರ್ ಅವರು ಅಥಿಯಾ ಅವರಿಗೆ 1.5 ಕೋಟಿ ರೂ. ಬೆಲೆಯ ವಜ್ರದ ಬ್ರೇಸ್ಲೆಟ್ ನೀಡಿದ್ದಾರೆ ಎಂದು ವರದಿಯಾಗಿದೆ. ಆದರೆ ಇದೆಲ್ಲವನ್ನೂ ಈಗ ವಕ್ತಾರರು ಅಲ್ಲಗಳೆದಿದ್ದಾರೆ.
ಅಲ್ಲದೆ ಅಥಿಯಾ ತಂದೆ ಸುನಿಲ್ ಶೆಟ್ಟಿ ಅವರು ಮುಂಬೈನಲ್ಲಿ 50 ಕೋಟಿ ರೂ ಮೌಲ್ಯದ ಅಪಾರ್ಟ್ ಮೆಂಟ್ ಗಿಫ್ಟ್ ನೀಡಿದ್ದಾರೆ ಎಂದು ವರದಿಯಾಗಿತ್ತು.