ಬೆಂಗಳೂರು: ಜನರ ಸಮಸ್ಯೆಗಳ ಪರಿಹಾರಕ್ಕೆ ಕೇವಲ ರಾಜಕಾರಣಿಗಳಷ್ಟೇ ಅಲ್ಲ ಪ್ರಮುಖ ಅಧಿಕಾರಿಗಳೂ ಕೂಡಾ ಜನರೊಂದಿಗೆ ಬೆರೆಯುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು. ಇದರಿಂದ ಜನರ ಹಲವಾರು ಸಮಸ್ಯೆಗಳು ಸುಲಭವಾಗಿ ಪರಿಹಾರವಾಗಲು ಸಾಧ್ಯ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಮತ್ತು ಪಾಂಡಿಚೇರಿಯ ಮಾಜಿ ಲೆಪ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅಭಿಪ್ರಾಯಪಟ್ಟರು.
ಇಂದು ಬೆಂಗಳೂರಿನಲ್ಲಿ ಸುರಾನಾ ಕಾಲೇಜಿನ ವತಿಯಿಂದ ಆಯೋಜಿಸಲಾಗಿದ್ದ 3ನೇ ಆವೃತ್ತಿಯ ಸಿಜಿಎಸ್ ಕಾನ್ ಕ್ಲೇವ್ ನಲ್ಲಿ ದೇಶ ಮತ್ತು ಸಮುದಾಯಕ್ಕಾಗಿ ಉತ್ತಮ ಸೇವೆ ಸಲ್ಲಿಸಿದ ಗಣ್ಯರಿಗೆ ನೀಡಲಾದ, ಜಿಸಿ ಸುರಾನಾ ಲೀಡರ್‌ಶಿಪ್ ಅವಾರ್ಡ್ 2022 ನ್ನು ಸ್ವೀಕರಿಸಿ ಮಾತನಾಡಿದರು.
ಸರಕಾರದ ಪ್ರಮುಖ ಸ್ಥಾನಗಳಲ್ಲಿರುವ ಅಧಿಕಾರಿಗಳು ತಮ್ಮ ನಾಯಕತ್ವದ ಸರಿಯಾದ ಉಪಯೋಗ ಮಾಡಿಕೊಳ್ಳುವುದು ಬಹಳ ಅಗತ್ಯ. ನಾನು ಐಪಿಎಸ್ ಅಧಿಕಾರಿಯಾಗಿ ಕೆಲಸ ಪ್ರಾರಂಭಿಸಿದ ಸಂಧರ್ಭದಲ್ಲಿ ಅಧಿಕಾರಿಗಳ ಮಧ್ಯೆ ಸಂವಹನವೇ ಇರುತ್ತಿರಲಿಲ್ಲ. ಇದು ಪಾಂಡಿಚೆರಿಯಲ್ಲೂ ಕಂಡುಬಂದಿತು. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ನನ್ನ ಆಡಳಿತದಲ್ಲಿ 6 “ಪಿ” ಗಳನ್ನು ಅಳವಡಿಸಿಕೊಂಡೆ. ಜನರಲ್ಲಿ ನಮ್ಮ ಆಡಳಿತದ ಬಗ್ಗೆ ನಂಬಿಕೆ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಅಲ್ಲದೆ, ಅಧಿಕಾರಿಗಳು ಮತ್ತು ಪ್ರತಿ ಇಲಾಖೆಯ ಪ್ರಮುಖರು ಜನರ ಮಧ್ಯೆ ಬೆರೆಯುವ ಹಾಗೂ ಅಭಿವೃದ್ದಿ ಕಾರ್ಯಗಳನ್ನು ಸ್ವತಃ ಪರಿಶೀಲಿಸುವ ಪರಿಪಾಠವನ್ನು ಬೆಳೆಸಲಾಯಿತು. ಇದರಿಂದ ಅಭಿವೃದ್ದಿ ಕೆಲಸಗಳು ಬಹಳ ವೇಗ ಪಡೆದುಕೊಂಡವು. ಯಾರೋ ಗುರುತಿಸಲಿ ಎನ್ನುವ ಮನೋಭಾವನೆಯಿಂದ ಕೆಲಸಗಳನ್ನು ಮಾಡಬಾರದು, ನಮ್ಮ ಕೆಲಸಗಳೇ ನಮ್ಮನ್ನು ಗುರುತಿಸುವಂತಾಗಬೇಕು. ಶಿಕ್ಷಣ ನೀಡಿರುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಉತ್ತಮ ಸಾಧನೆ ಮಾಡುವಂತೆ ಕರೆ ನೀಡಿದರು.
ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವಥ್ ನಾರಾಯಣ ಮಾತನಾಡಿ, ಇಂದು ಶೈಕ್ಷಣಿಕ ಅಂಕಗಳು ಮಾತ್ರಾ ಉದ್ಯೋಗ ಪಡೆಯುವ ಮಾನದಂಡ ಅಲ್ಲ. ಕ್ರೀಡೆ, ವ್ಯಕ್ತಿತ್ವ ಬೆಳವಣಿಗೆ ಮತ್ತು ನಾಯಕತ್ವ ಗುಣವನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ. ನೂತನ ರಾಷ್ಟ್ರಿಯ ಶಿಕ್ಷಣ ನೀತಿಯಿಂದ ನಮ್ಮ ಶೈಕ್ಷಣಿಕ ಪರಿಕ್ಷಾ ಪದ್ದತಿಯ ಮಾನದಂಡಗಳೇ ಬದಲಾಗಿವೆ. ಮೊದಲೆಲ್ಲಾ ಪುಸ್ತಕಗಳನ್ನು ಬಾಯಿಪಾಠ ಮಾಡಿ ಹೆಚ್ಚು ಅಂಕಗಳನ್ನು ಪಡೆದುಕೊಳ್ಳಬಹುದಿತ್ತು. ಆದರೆ, ಈಗ ವಿಷಯವನ್ನು ಸಮರ್ಥವಾಗಿ ತಿಳಿದುಕೊಂಡರೆ ಮಾತ್ರ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡವುದು ಸಾಧ್ಯ. ಬೆಂಗಳೂರು ಎಲ್ಲಾ ಕ್ಷೇತ್ರಗಳಲ್ಲೂ ಬಹಳ ಕ್ಷಿಪ್ರವಾಗಿ ಬೆಳೆಯುತ್ತಿದೆ. ಎಲ್ಲಾ ರಂಗಗಳಲ್ಲೂ ಕೂಡಾ ವಿಫುಲ ಅವಕಾಶಗಳು ಇವೆ ಎಂದರು.