Advertisement

Congress: ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಮುಂದುವರಿದ ಒತ್ತಡ

11:58 PM Jan 01, 2025 | Team Udayavani |

ಬೆಂಗಳೂರು: ಕಾಂಗ್ರೆಸ್‌ ಆಡಳಿತದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಆತ್ಮಹತ್ಯೆ ಭಾಗ್ಯ ನೀಡಿದ್ದು, ಕಲಬುರಗಿ ರಿಪಬ್ಲಿಕ್‌, ಬೆಳಗಾವಿ ರಿಪಬ್ಲಿಕ್‌, ಕನಕಪುರ ರಿಪಬ್ಲಿಕ್‌ ಅನಂತರ ಒಂದೊಂದು ಜಿಲ್ಲೆಯನ್ನೂ ಬನಾನಾ ರಿಪಬ್ಲಿಕ್‌ ಮಾಡಿಕೊಂಡಿದ್ದಾರೆ. 2025ರ ಅವಧಿಯಲ್ಲಾದರೂ ಕಾನೂನು ಎಲ್ಲರಿಗೆ ಸಮಾನವಾಗಿರಲಿ. ಸಂವಿಧಾನ ಎಲ್ಲರಿಗೂ ಅನ್ವಯಿಸಲಿ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಆಶಿಸಿದರು.

Advertisement

ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಒಬ್ಬ ಮನುಷ್ಯ ಸಾಯುವ ನಿರ್ಧಾರ ತೆಗೆದುಕೊಳ್ಳುತ್ತಾನೆ ಎಂದರೆ ಮಾನಸಿಕವಾಗಿ ಆತ ಎಷ್ಟು ಕಟುವಾಗಿ ನಿರ್ಧರಿಸಬಹುದು ಎಂದು ಈ ಹಿಂದೆ ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದ್ದರಲ್ಲದೆ, ಇದನ್ನೇ ಇಟ್ಟುಕೊಂಡು ಕೆ.ಎಸ್‌. ಈಶ್ವರಪ್ಪ ಅವರ ರಾಜೀನಾಮೆಗೂ ಆಗ್ರಹಿಸಿದ್ದರು. ಈಗ ಅವರಿಗೆ ಈ ನೀತಿ ಅನ್ವಯಿಸುವುದಲ್ಲವೇ ಎಂದು ಪ್ರಶ್ನಿಸಿದರು.

ಪ್ರಿಯಾಂಕ್‌ ಖರ್ಗೆಯವರೇ, ಸಚಿನ್‌ ಪಾಂಚಾಳ್‌ ಸಾವಿಗೆ ನೀವು ಹೊಣೆ ಆಗಬಹುದಲ್ಲವೇ? ಈಶ್ವರಪ್ಪ ಅವರ ರಾಜೀನಾಮೆಗೆ ಆಗ್ರಹಿಸುವಾಗ ಏನೆಲ್ಲ ಹೇಳಿದ್ದಿರಿ ಎಂಬುದನ್ನು ಮರೆತಿದ್ದೀರಾ? ಅದನ್ನೆಲ್ಲ ನೆನಪು ಮಾಡಿಕೊಳ್ಳಿ ಎಂದು ಒತ್ತಾಯಿಸಿದರು.

ಬೆಲೆ ಏರಿಕೆ, ಭ್ರಷ್ಟಾಚಾರವೇ ಇವರ ಸಾಧನೆ
ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದು 1.5 ವರ್ಷ ಪೂರ್ಣಗೊಂಡಿದೆ. ಸಾಧನೆ ಏನೆಂದು ಅವಲೋಕನ ಮಾಡಿದರೆ, ಬೆಲೆ ಏರಿಕೆ, ಭ್ರಷ್ಟಾಚಾರ ಕಣ್ಮುಂದೆ ನಿಲ್ಲುತ್ತದೆ. ವಿದ್ಯುತ್‌ ದರ, ಹಾಲು, ಆಲ್ಕೋಹಾಲ್‌ ಸೇರಿ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಲಾಗಿದೆ ಎಂದು ಆರೋಪಿಸಿದರು.

ಮುಡಾ ಹಗರಣ, ವಾಲ್ಮೀಕಿ ನಿಗಮದ ಹಗರಣ ಅಬಕಾರಿ ಇಲಾಖೆ ಹಗರಣ ನಡೆದಿದೆ. ಆರೋಗ್ಯ ಖಾತೆಗೇ ಅನಾರೋಗ್ಯ ಬಡಿದಿದೆ. ಬಾಣಂತಿಯರು, ಹಸುಗೂಸುಗಳ ಸರಣಿ ಸಾವು ನಿಂತಿಲ್ಲ. ಜೀವರಕ್ಷಕ ಔಷಧಗಳೇ ಕಳಪೆಯಾಗಿರುವುದು ಆಶ್ಚರ್ಯ ಮತ್ತು ಆಘಾತಕಾರಿ ವಿಷಯಗಳು. ಮುಖ್ಯಮಂತ್ರಿಯಾದಿಯಾಗಿ ಬಹುತೇಕ ಸಚಿವರು ಒಂದಲ್ಲ ಒಂದು ಹಗರಣದಲ್ಲಿ ಸಿಲುಕಿದ್ದಾರೆ ಎಂದು ಆರೋಪಿಸಿದರು.

Advertisement

ಸಭಾಪತಿಗಳಿಗೆ ಬಿಟ್ಟ ವಿಚಾರ
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹಾಗೂ ತಮ್ಮ ನಡುವಿನ ವಾಗ್ವಾದಕ್ಕೆ ಸಂಬಂಧಿಸಿದಂತೆ ವಿಧಾನಪರಿಷತ್‌ ಸಭಾಂಗಣದಲ್ಲಿ ತನಿಖೆ ಮಾಡುವ ಸಿಐಡಿ ಅಧಿಕಾರಿಗಳ ಪ್ರಸ್ತಾವನೆ ವಿಚಾರವನ್ನು ಸಭಾಪತಿಗಳು ತೀರ್ಮಾನಿಸುತ್ತಾರೆ. ಸಿಐಡಿ ಅಧಿಕಾರಿಗಳು ಮೇಲ್ಮನೆ ಕಾರ್ಯದರ್ಶಿಗೆ ಅವಕಾಶ ಕೋರಿ ಪತ್ರ ಬರೆದಿದ್ದರೆ, ಕಾರ್ಯದರ್ಶಿ ಮತ್ತು ಸಭಾಪತಿ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಸಿ.ಟಿ. ರವಿ ತಿಳಿಸಿದರು.

ಪಿಎಸ್‌ಐ ಪರಶುರಾಮ್‌, ಲೆಕ್ಕಾಧಿಕಾರಿ ಚಂದ್ರಶೇಖರ್‌, ಬೆಳಗಾವಿಯಲ್ಲಿ ರುದ್ರೇಶ್‌ ಯಡವಣ್ಣವರ್‌ ಸೇರಿ ಹಲವು ಪ್ರಾಮಾಣಿಕ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುತ್ತಿಗೆದಾರ ಸಚಿನ್‌ ಪಾಂಚಾಳ್‌, ಕೆಎಸ್‌ಡಿಎಲ್‌ ನೌಕರ ಅಮೃತ್‌ ಶಿರೂರ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಾಮಾಣಿಕ ಅಧಿಕಾರಿಗಳಿಗೆ ಈ ಸರಕಾರ ಆತ್ಮಹತ್ಯೆ ಭಾಗ್ಯ ನೀಡಿದೆ.
– ಸಿ.ಟಿ. ರವಿ, ವಿಧಾನಪರಿಷತ್‌ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next