Advertisement

ನೇತ್ರಾವತಿ ನದಿಯಲ್ಲಿ ಗೋಮಾಂಸ ಪತ್ತೆ ಮತಾಂಧತೆ ತೋರಿಸುತ್ತದೆ: ಸಿ.ಟಿ. ರವಿ ಕಿಡಿ

05:50 PM Jan 02, 2025 | Team Udayavani |

ಚಿಕ್ಕಮಗಳೂರು: ಧರ್ಮಸ್ಥಳದ ನೇತ್ರಾವತಿ ನದಿಯಲ್ಲಿ ಗೋಮಾಂಸ ಪತ್ತೆ ಪ್ರಕರಣವು ಲಕ್ಷಾಂತರ ಭಕ್ತರು ಬರುವ ಧಾರ್ಮಿಕ ಕ್ಷೇತ್ರವನ್ನು ಅಪವಿತ್ರಗೊಳಿಸಬೇಕು ಎನ್ನುವ ದುಷ್ಟಮನಸ್ಥಿತಿಗಳ ಮತಾಂಧತೆ ತೋರಿಸುತ್ತದೆ ಎಂದು ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಪ್ರತಿಕ್ರಿಯಿಸಿದರು.

Advertisement

ಗುರುವಾರ ನಗರದಲ್ಲಿ ಮಾತನಾಡಿ, ಬರೀ ನೇತ್ರಾವತಿ ಮಾತ್ರವಲ್ಲ. ರಾಜ್ಯದ ಉದ್ದಗಲಕ್ಕೂ ಇದೆ ಪರಿಸ್ಥಿತಿ ಇದೆ. ರಾಜ್ಯದಲ್ಲಿ ಗೋಹತ್ಯೆ ನಿಷೇದ ಕಾಯ್ದೆ ಇದೆಯೋ ಇಲ್ಲವೋ ಎಂಬ ಅನುಮಾನ ಮೂಡಿಸುತ್ತದೆ. ಕಾಯ್ದೆ ಇದೆ ಎಂದಾದರೇ, ಗೋಹತ್ಯೆ ಹೇಗಾಗುತ್ತದೆ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಬೇಕು ಎಂದರು.

”ಪ್ರಕರಣಗಳನ್ನು ಗಮನಿಸಿದರೆ ರಾಜ್ಯ ಸರ್ಕಾರ ಗೋಹತ್ಯೆ ಕಾಯ್ದೆಯನ್ನು ಸರಿಯಾಗಿ ಅನುಷ್ಠಾನ ಮಾಡುತ್ತಿಲ್ಲ ಎನ್ನುವುದು ತೋರಿಸುತ್ತಿದೆ. ಗೋಕಳ್ಳರು ರಸ್ತೆ, ಕೊಟ್ಟಿಗೆಯಲ್ಲಿರುವ ಹಸುಗಳನ್ನು ಬಿಟ್ಟಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇದು ನಮ್ಮದೆ ಸರ್ಕಾರವೆಂದು ಗೋಕಳ್ಳರು ರಾಜಾರೋಷವಾಗಿ ಗೋಹತ್ಯೆ, ಕಳ್ಳತನ ಮಾಡುತ್ತಿದ್ದಾರೆ” ಎಂದು ದೂಷಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸುವರ್ಣಸೌಧದಲ್ಲಿ ಘಟನೆ ಸಂಬಂಧ ದೂರು ನೀಡಿಲ್ಲವೆಂಬ ಕುರಿತು ಪ್ರತಿಕ್ರಿಯಿಸಿ, ”ಅವರ ಬಗ್ಗೆ ನಾನು ಮಾತನಾಡಲು ಬಯಸಲ್ಲ. ಕಾನೂನು ಪ್ರಕಾರ ಏನು ಮಾಡಬೇಕೋ ಮಾಡುತ್ತೇನೆ. ಚಾಣಕ್ಯ ನೀತಿಯಂತೆ ಯಾವುದರಿಂದ ದೂರ ವಿರಬೇಕೆಂದು ಅಂದೇ ಹೇಳಿದ್ದೇನೆ. ನಾನು ನೀಡಿದ ದೂರು ಇಂದಿಗೂ ಎಫ್‌ಐಆರ್ ಆಗಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ ಗೊಂದು ಕಾನೂನು, ಬಿಜೆಪಿಗೊಂದು ಕಾನೂನು ಇಲ್ಲ ಎಂದರು.

”ನನ್ನ ವಿರುದ್ಧ ದೂರು ಕೊಟ್ಟರೇ ದಾಖಲಾಗುತ್ತದೆ, ಅರೆಸ್ಟ್ ಮಾಡುವಂತಿಲ್ಲ, ಆದರೂ ಅರೆಸ್ಟ್ ಮಾಡ್ತಾರೆ. ಅರೆಸ್ಟ್ ಮಾಡಿದ ಮೇಲೆ ರಾತ್ರಿ ಕಬ್ಬಿನಗದ್ದೆ, ಜಲ್ಲಿ ಕ್ರಷರ್, ಕಾಡಿನೊಳಗೆ ಕರೆದುಕೊಂಡು ಹೋಗ್ತಾರೆ. ರಾಜ್ಯದಲ್ಲಿ ಯಾರಿಗೆ ರಕ್ಷಣೆ ಬೇಕಾದರೂ ಪೊಲೀಸ್ ಸ್ಟೇಷನ್‌ನಲ್ಲಿ ರಕ್ಷಣೆ ಸಿಗಲ್ಲ. ಕಬ್ಬಿನಗದ್ದೆ, ಜಲ್ಲಿ ಕ್ರಷರ್‌ಗೆ ಹೋಗಬೇಕು. ನಾನು ಡಿಜಿಪಿ, ಐಜಿ, ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದೇನೆ. ಸಂವಿಧಾನ ಬದ್ಧವಾಗಿ ನಡೆದುಕೊಳ್ಳುವವರಿದ್ದರೇ, ಒಬ್ಬರಿಗೊಂದು ಒಬ್ಬರಿಗೊಂದು ಮಾಡುವುದಿಲ್ಲ” ಎಂದರು.

Advertisement

ಮೈಸೂರಿನಲ್ಲಿ ರಸ್ತೆಗೆ ನಾಮಕರಣ ಮಾಡುವ ವಿಚಾರ ಸಂಬಂಧ ಮಾತನಾಡಿ, ”ಜನರು ಅಧಿಕಾರ ಕೊಟ್ಟಿದ್ದಾರೆಂದ ಕೂಡಲೇ ಸರ್ವಾಧಿಕಾರಿಗಳಲ್ಲ. ನಿಯಮ ಮೀರಿ ನಡಿಯೋಬೇಕಿಲ್ಲ. ಹೊಸರಸ್ತೆ, ಹೆಸರಿಲ್ಲದ ರಸ್ತೆ ಅಲ್ಲಿ ನೂರಾರಿವೆ. ಸಿದ್ದರಾಮಯ್ಯ ಹೆಸರು ಅಲ್ಲಿಗೆ ಇಡಲಿ ಬೇಡ ಅಂದವರು ಯಾರು. ಎರಡು ಬಾರಿ ಮುಖ್ಯಮಂತ್ರಿ, ಜನನಾಯಕರಾಗಿರುವ ಸಿದ್ದರಾಮಯ್ಯ ಅವರ ಹೆಸರೇ ಇಡಲಿ, ಆದರೆ ಐತಿಹಾಸಿಕ ಹೆಸರು ಅಳಸಿ ಇಡಬೇಕು ಎನ್ನುವುದು ಎಷ್ಟರ ಮಟ್ಟಿಗೆ ಸರಿ” ಎಂದರು.

”ನಾಳೆ ಎಲ್ಲರೂ ಇದನ್ನೇ ಮಾಡಿದರೇ ಏನಾಗಬಹುದು. ಅದಕ್ಕೆ ಹೊಸ ರಸ್ತೆಗೆ ಹೆಸರಿಡಲಿ. ನಾಲ್ವಡಿ ಕೃಷ್ಣರಾಜ ಒಡೆಯರು ಪ್ರಜೆಗಳ ಕ್ಷೇಮವೇ ತನ್ನ ಕ್ಷೇಮ ಎಂದು ಆಡಳಿತ ನೀಡಿದವರು. ಅಂತಹ ಪುಣ್ಯಾತ್ಮರ ಹೆಸರನ್ನು ಅಳಿಸೋದು ಸೂಕ್ತವಲ್ಲ. ಹೊಸ ರಸ್ತೆಗೆ ಸಿದ್ದರಾಮಯ್ಯ ಹೆಸರಿಡಲಿ ನಮ್ಮಗ್ಯಾರಿಗೂ ಬೇಸರವಿಲ್ಲ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next