Advertisement

ಕಿಚ್ಚನ ಹೊಸ ಕಿಚ್ಚು: ಧ್ರುವ ಶರ್ಮಾ ನಟನೆಯ ಕೊನೆಯ ಚಿತ್ರ

11:35 AM Apr 30, 2018 | Team Udayavani |

ಸುದೀಪ್‌ ಅಭಿನಯದ “ದಿ ವಿಲನ್‌’ ಮುಗಿಯೋ ಹಂತ ತಲುಪಿದೆ. ಈ ಮಧ್ಯೆ, “ಕೋಟಿಗೊಬ್ಬ 3′ ಇತ್ತೀಚೆಗಷ್ಟೇ ಮುಹೂರ್ತ ಕಂಡಿದೆ. “ಪೈಲ್ವಾನ್‌’ ಚಿತ್ರಕ್ಕೂ ಪೂಜೆ ನಡೆದಿದೆ. ಆದರೆ, ಸುದೀಪ್‌ ನಾಯಕತ್ವದ ಈ ಚಿತ್ರಗಳು ಪರದೆ ಮೇಲೆ ಬರೋಕೆ ಇನ್ನಷ್ಟು ಸಮಯ ಬೇಕು. ಹಾಗಂತ ಸುದೀಪ್‌ ಮಾತ್ರ ಅಭಿಮಾನಿಗಳನ್ನು ಕಾಯಿಸಿಲ್ಲ ಎಂಬುದು ವಿಶೇಷ.

Advertisement

ಯಾಕೆಂದರೆ, “ರಾಜು ಕನ್ನಡ ಮೀಡಿಯಂ’ ಚಿತ್ರದ ಮೂಲಕ ಕಾಣಿಸಿಕೊಂಡು ಅಭಿಮಾನಿಗಳನ್ನು ರಂಜಿಸಿದ್ದರು. ಈಗ ಪ್ರದೀಪ್‌ರಾಜ್‌ ನಿರ್ದೇಶನದ “ಕಿಚ್ಚು’ ಎಂಬ ಮತ್ತೂಂದು ಚಿತ್ರದಲ್ಲಿ ವಿಶೇಷ ಪಾತ್ರ ಮಾಡಿದ್ದಾರೆ. ಈ ಚಿತ್ರ ಮೇ 4 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅಂದಹಾಗೆ, ಸುದೀಪ್‌ ಈ ಚಿತ್ರದಲ್ಲಿ ವಿಶೇಷ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ. ಅವರದು ಡಾಕ್ಟರ್‌ ಪಾತ್ರ. ಚಿತ್ರಕ್ಕೆ ತಿರುವು ಕೊಡುವಂತಹ ಪಾತ್ರ ಎಂಬುದು ಪ್ರದೀಪ್‌ರಾಜ್‌ ಮಾತು.

ಸುದೀಪ್‌ ಅವರೇ ಆ ಪಾತ್ರ ಮಾಡಬೇಕು ಎಂಬ ಕಾರಣಕ್ಕೆ, ಪ್ರದೀಪ್‌ರಾಜ್‌, ಸುದೀಪ್‌ ಬಳಿ ಕಥೆ ಮತ್ತು ಪಾತ್ರದ ಬಗ್ಗೆ ವಿವರಿಸಿದಾಗ, ಸುದೀಪ್‌ ತಕ್ಷಣವೇ, ಗ್ರೀನ್‌ಸಿಗ್ನಲ್‌ ಕೊಟ್ಟಿದ್ದಾರೆ. ಮೂರು ದಿನಗಳ ಕಾಲ ಸುದೀಪ್‌ ಭಾಗದ ಚಿತ್ರೀಕರಣ ಮುಗಿಸಿದ ಪ್ರದೀಪ್‌ರಾಜ್‌, ಸುದೀಪ್‌ ಅವರಿಂದ ಒಂದೊಳ್ಳೆಯ ಸಂದೇಶ ರವಾನಿಸಲಿದ್ದಾರಂತೆ. ಆ ಸಂದೇಶ ಏನೆಂಬುದನ್ನು ಸಿನಿಮಾದಲ್ಲೇ ಕಾಣಬೇಕು ಎಂಬುದು ಅವರ ಮಾತು.

ಈ ಚಿತ್ರದ ಮತ್ತೂಂದು ವಿಶೇಷವೆಂದರೆ, ಕಿವಿ ಕೇಳದ, ಮಾತು ಬಾರದ ನಾಯಕ, ನಾಯಕಿ ಅಭಿನಯಿಸಿರುವುದು.ಪ್ರದೀಪ್‌ ರಾಜ್‌ ಹೇಳುವಂತೆ, ಭಾರತೀಯ ಚಿತ್ರರಂಗದಲ್ಲೇ ಇದು ಮೊದಲು. ಧ್ರುವ ಶರ್ಮಾ ಹೀರೋ ಆಗಿ ನಟಿಸಿದರೆ, ಅವರಿಗೆ ಅಭಿನಯ ನಾಯಕಿಯಾಗಿದ್ದಾರೆ. ಇಬ್ಬರಿಗೂ ಕಿವಿ ಕೇಳುವುದಿಲ್ಲ, ಮಾತು ಬರುವುದಿಲ್ಲ. ಇಬ್ಬರೂ ಸಹ ರೀಲ್‌ ಲೈಫ್ನಲ್ಲಿ ಹಾಗೆಯೇ ಅಭಿನಯಿಸಿದ್ದಾರೆ.

ಇನ್ನೂ ಒಂದು ವಿಶೇಷವೆಂದರೆ, ಅವರಿಂದಲೇ ಡಬ್ಬಿಂಗ್‌ ಕೂಡ ಮಾಡಿಸಿದ್ದಾರಂತೆ ನಿರ್ದೇಶಕರು. ಹಾಗಂತ, ಮಾತುಗಳಿಲ್ಲ. ಬರೀ ಎಕ್ಸ್‌ಪ್ರೆಶನ್‌ಗಳಲ್ಲೇ ಡಬ್‌ ಮಾಡಿಸಿದ್ದಾಗಿ ಹೇಳುತ್ತಾರೆ ಪ್ರದೀಪ್‌ರಾಜ್‌. ಧ್ರುವಶರ್ಮ ಅಭಿನಯದ ಕೊನೆಯ ಚಿತ್ರವಿದು. ಹೀಗಾಗಿ ಮೇ.4 ರಂದು ಅಗಲಿದ ಧ್ರುವ ಶರ್ಮಾ ಅವರಿಗೆ ಒಂದು ಗೌರವ ಕೊಡಬೇಕು ಎಂಬ ಉದ್ದೇಶದಿಂದಲೇ, ಅಂದು ಬೇರೆ ಯಾವುದೇ ಚಿತ್ರವನ್ನು ಬಿಡುಗಡೆ ಮಾಡದಿರಲು, ಕೆಲ ನಿರ್ಮಾಪಕರು, ನಿರ್ದೇಶಕರು, ವಿತರಕರು ನಿರ್ಧರಿಸಿದ್ದಾರೆ.

Advertisement

ಅವರಿಗೆ ನನ್ನ ಕಡೆಯಿಂದ ಧನ್ಯವಾದ ಎನ್ನುತ್ತಾರೆ ಪ್ರದೀಪ್‌ರಾಜ್‌. ಎಲ್ಲಾ ಸರಿ, “ಕಿಚ್ಚು’ ಕಥೆ ಏನು ಎಂದರೆ , “ಇದೊಂದು ಕಾಡು ಉಳಿಸಿ ವಿಷಯ ಕುರಿತ ಕಥೆ ಇದೆ. ಚಿಕ್ಕಮಗಳೂರು, ದಾಂಡೇಲಿಯಿಂದ ದಟ್ಟ ಅರಣ್ಯ ಶುರುವಾಗುತ್ತೆ. ಅಲ್ಲಿ ಹುಲಿ, ಆನೆಗಳು ಹೆಚ್ಚಾಗಿವೆ. ಕಾಡು ಮತ್ತು ಪ್ರಾಣಿಗಳನ್ನು ಉಳಿಸುವ ಸಲುವಾಗಿ, ಅಲ್ಲಿನ ಒಕ್ಕಲುತನ ಮಾಡುವ ಜನರು ಹೋರಾಡುತ್ತಾರೆ. ಅದೇ ಕಾನ್ಸೆಪ್ಟ್ ಚಿತ್ರದಲ್ಲಿದೆ. ಇಲ್ಲಿ ಮೂಗ, ಮೂಗಿ ಮೂಲಕ ಸರ್ಕಾರಕ್ಕೂ ಕೂಡ ಕಿವಿ ಕೇಳಲ್ಲ, ಬಾಯಿ ಇಲ್ಲ ಎಂಬ ಸಂದೇಶ ತಲುಪಿಸುವ ಪ್ರಯತ್ನ ಮಾಡಿದ್ದೇನೆ.

ರಾಗಿಣಿ ಇಲ್ಲಿ ಡಿ ಗ್ಲಾಮ್‌ ಪಾತ್ರ ಮಾಡಿದ್ದಾರೆ. ಈ ಚಿತ್ರಕ್ಕಾಗಿಯೇ ಅವರು ಸಿಕ್ಕಾಪಟ್ಟೆ ಸಣ್ಣಗಾಗಿದ್ದಾರೆ.  ಉಳಿದಂತೆ ಚಿತ್ರದಲ್ಲಿ ಸಾಯಿಕುಮಾರ್‌,ಸುಚೇಂದ್ರ ಪ್ರಸಾದ್‌ ಇತರರು ನಟಿಸಿದ್ದಾರೆ. ರುಬಿಶರ್ಮ ಜೊತೆಗೆ ನಾನೂ ನಿರ್ಮಾಣ ಮಾಡಿದ್ದೇನೆ. ಸಾಹಿತ್ಯ, ಸಂಭಾಷಣೆ ಗೌಸ್‌ಪೀರ್‌ ಬರೆದಿದ್ದಾರೆ. ಅರ್ಜುನ್‌ ಜನ್ಯಾ ಸಂಗೀತವಿದೆ. ಚಿದಂಬರಂ ಅವರ ಛಾಯಾಗ್ರಹಣವಿದೆ ಎಂದು ವಿವರ ಕೊಡುತ್ತಾರೆ ಪ್ರದೀಪ್‌ರಾಜ್‌.

Advertisement

Udayavani is now on Telegram. Click here to join our channel and stay updated with the latest news.

Next