ಪಣಜಿ: 51ನೇ “ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ’ (ಐಎಫ್ಎಫ್ಐ)ಕ್ಕೆ ಶನಿವಾರ ಚಾಲನೆ ದೊರೆತಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಮೊದಲಾದ ಗಣ್ಯರು ಹಾಜರಿದ್ದ “ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ’ (ಐಎಫ್ಎಫ್ಐ)ದ ಉದ್ಘಾಟನಾ ಸಮಾರಂಭದಲ್ಲಿ ನಟ ಸುದೀಪ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ “ಪ್ರತಿಯೊಬ್ಬರಿಗೂ ಕನ್ನಡ ಚಿತ್ರರಂಗದ ಪರವಾಗಿ ಹಾಗೂ ಕರ್ನಾಟಕದ ಪರವಾಗಿ ಈ ಕಿಚ್ಚನಿಂದ ನಮಸ್ತೆ’ ಎಂದು ಹೇಳುವ ಮೂಲಕ ಕನ್ನಡದಲ್ಲೇ ಮಾತನ್ನು ಆರಂಭಿಸಿದ ಸುದೀಪ್, “ಸಿನಿಮಾ ಮತ್ತು ಕ್ರೀಡೆ ಎಂಬುದು ನಮ್ಮೆಲ್ಲರನ್ನೂ ಬೆಸೆದಿದೆ. ಆ ಕಾರಣಕ್ಕಾಗಿಯೇ ನಾವೆಲ್ಲರೂ ಇಲ್ಲಿ ಸೇರಿದ್ದೇವೆ. ಸಿನಿಮಾ ಎಂಬುದು ಎಲ್ಲೆಡೆ ಹಬ್ಬುವಂತಾಗಲಿ. ದೇಶ ಸುತ್ತು, ಕೋಶ ಓದು ಎಂಬ ಮಾತನ್ನು ನಾನು ಕೇಳಿದ್ದೇನೆ. ಈ ಎರಡನ್ನೂ ಸಿನಿಮಾ ಒದಗಿಸುತ್ತದೆ. ಇಂಥದ್ದೊಂದು ಅಭೂತಪೂರ್ವ ಸಮಾರಂಭದಲ್ಲಿ ಭಾಗವಹಿಸಲು ನನಗೆ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು’ ಎಂದರು.
ಪಣಜಿಯ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ಆರಂಭವಾಗಿರುವ 51ನೇ “ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ’ (ಐಎಫ್ಎಫ್ಐ) ಜ.16ರಿಂದ ಜ.24ರವರೆಗೆ ನಡೆಯಲಿದೆ. ಈ ಚಿತ್ರೋತ್ಸವದಲ್ಲಿ ಸುಮಾರು 119 ಸಿನಿಮಾಗಳು ಈ ಬಾರಿ ಪ್ರದರ್ಶನಗೊಳ್ಳುತ್ತಿವೆ. ಅವುಗಳಲ್ಲಿ 85 ಸಿನಿಮಾಗಳು ಪ್ರೀಮಿಯರ್ ಪ್ರದರ್ಶನ ಕಾಣಲಿವೆ.
ಈ ಬಾರಿ ಕೋವಿಡ್ ಆತಂಕದಿಂದ ಫಿಲ್ಮ್ ಫೆಸ್ಟಿವಲ್ ಆಯೋಜನೆಯ ರೀತಿಯಲ್ಲಿ ಕೆಲ ಬದಲಾವಣೆಗಳಾಗಿದೆ. ಕೆಲವು ಸಿನಿಮಾಗಳು ದೊಡ್ಡ ಪರದೆಯಲ್ಲಿ ಪ್ರದರ್ಶನ ಕಂಡರೆ, ಮತ್ತೆ ಕೆಲವು ಆನ್‌ಲೈನ್ ಮೂಲಕ ಪ್ರದರ್ಶನವಾಗಲಿವೆ. ಉಳಿದಂತೆ ತಜ್ಞರ ಜೊತೆಗಿನ ಮಾಸ್ಟರ್ ಕ್ಲಾಸ್, ಸಂವಾದ ಮುಂತಾದ ಕಾರ್ಯಕ್ರಮಗಳು ಕೂಡ ಓಟಿಟಿ ಮೂಲಕವೇ ನಡೆಯಲಿವೆ.
ಇನ್ನೊಂದು ವಿಶೇಷವೆಂದರೆ, ಈ ಪ್ರತಿಷ್ಠಿತ “ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ’ (ಐಎಫ್ಎಫ್ಐ) ಉದ್ಘಾಟಿಸುವ ಅವಕಾಶ ಪಡೆದ ಕನ್ನಡದ ಮೊದಲ ನಾಯಕ ನಟ ಎಂಬ ಹೆಗ್ಗಳಿಕೆಗೂ ಸುದೀಪ್ ಪಾತ್ರರಾಗಿದ್ದಾರೆ.