Advertisement

ಆಸ್ತಿಕರ ಹೆಚ್ಚಳಕ್ಕೆ ಕೆಸಿಸಿಐ ವಿರೋಧ; ಶೆಟ್ಟರಗೆ ಮನವಿ

07:09 AM May 21, 2020 | Suhan S |

ಹುಬ್ಬಳ್ಳಿ: ಮಹಾನಗರ ಪಾಲಿಕೆ ಆಸ್ತಿಕರ ಹೆಚ್ಚಳ ಮಾಡಿದನ್ನು ಹಿಂಪಡೆಯಲು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ(ಕೆಸಿಸಿಐ) ಒತ್ತಾಯಿಸಿದ್ದು, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಅವರಿಗೆ ಮನವಿ ಸಲ್ಲಿಸಿದೆ.

Advertisement

ಕೋವಿಡ್  ಆತಂಕ, ಲಾಕ್‌ಡೌನ್‌ ಸಮಸ್ಯೆಯಿಂದ ಜನರು ಸಂಕಷ್ಟದಲ್ಲಿದ್ದು, ಇಂತಹ ಸಂದರ್ಭದಲ್ಲಿ ಆಸ್ತಿಕರ ಹೆಚ್ಚಳ ಮಾಡಿದ ಕ್ರಮ ಸರಿಯಲ್ಲ ಎಂದು ಕೆಸಿಸಿಐ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ, ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ ಅವರನ್ನು ಭೇಟಿ ಮಾಡಿ, ಆಸ್ತಿಕರ ಹೆಚ್ಚಳ ನಿರ್ಧಾರ ಕೈಬಿಡುವಂತೆ ಒತ್ತಾಯಿಸಿದೆ.

ಉದ್ದಿಮೆದಾರರು ಉದ್ದಿಮೆಗಳನ್ನು ಪೂರ್ಣ ಬಂದ್‌ ಮಾಡಿದ್ದು, ವ್ಯಾಪಾರಸ್ಥರು ವ್ಯವಹಾರ ಬಂದ್‌ ಮಾಡಿದ್ದರಿಂದ ಸಂಕಷ್ಟಕ್ಕೊಳಗಾಗಿದ್ದಾರೆ. ಸಾರ್ವಜನಿಕರು ತತ್ತರಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಶೇ. 20-30 ತೆರಿಗೆ ಹೆಚ್ಚಿಸಿರುವುದು ಅವೈಜ್ಞಾನಿಕ ಹಾಗೂ ಅಸಮಂಜಸವಾಗಿದೆ. ಕೂಡಲೇ ಹಿಂಪಡೆದು ಶೇ.5 ರಿಯಾಯಿತಿಯೊಂದಿಗೆ ಮೊದಲಿದ್ದ ದರದಲ್ಲಿ ಆಸ್ತಿ ಕರ ಪಾವತಿಸಲು ಅನುಕೂಲ ಮಾಡಿಕೊಡಬೇಕು. ಅಲ್ಲದೆ ಜುಲೈ 31ರವರೆಗೆ ಮುಂದುವರಿಸಬೇಕೆಂದು ಕೋರಿದ್ದು, ಈ ಕುರಿತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೂ ಕೆಸಿಸಿಐ ಪತ್ರ ಬರೆದಿದೆ.

ಸಂಸ್ಥೆ ಅಧ್ಯಕ್ಷ ಮಹೇಂದ್ರ ಲದ್ದಡ, ಉಪಾಧ್ಯಕ್ಷರಾದ ವಿನಯ ಜವಳಿ, ಸಿದ್ದೇಶ್ವರ ಕಮ್ಮಾರ, ಗೌರವ ಕಾರ್ಯದರ್ಶಿ ಅಶೋಕ ಗಡಾದ, ಮಾಜಿ ಅಧ್ಯಕ್ಷರಾದ ಶಂಕರಣ್ಣ ಮುನವಳ್ಳಿ, ರಮೇಶ ಪಾಟೀಲ, ಸದಸ್ಯರಾದ ಬಸವರಾಜ ಎಕಲಾಸಪೂರ, ಅಂದಾನಪ್ಪ ಸಜ್ಜನರ, ಶಾಂತರಾಜ ಪೋಳ ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next