Advertisement

ಕಲ್ಲಿನ ಕೋರೆಗೆ ತ್ಯಾಜ್ಯ; ಕಾವೂರಿನಲ್ಲಿ ಮುಗಿಯದ ನಿತ್ಯ ಸಮಸ್ಯೆ!

10:55 AM Aug 11, 2018 | Team Udayavani |

ಮಹಾನಗರ: ಕಾವೂರಿನ ಪರಪಾದೆ ಹಾಗೂ ಜಲ್ಲಿಗುಡ್ಡೆ ಶಾಲೆಯ ಹತ್ತಿರದಲ್ಲಿ 100 ಮೀಟರ್‌ ಆಳದ ಕಲ್ಲಿನ ಕೋರೆಗೆ ಪ್ಲಾಸ್ಟಿಕ್‌ ಹಾಗೂ ಇತರ ಹಾನಿಕರ ತ್ಯಾಜ್ಯ ತುಂಬಿಸುತ್ತಿರುವ ಕಾರಣದಿಂದ ಈ ವ್ಯಾಪ್ತಿಯಲ್ಲಿ ಕಲುಷಿತ ವಾತಾವರಣ ಸೃಷ್ಟಿಯಾಗಿದ್ದು, ಇದರ ವಿರುದ್ಧ ಆಡಳಿತ ವ್ಯವಸ್ಥೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕಾವೂರು, ಆಕಾಶಭವನ, ಆನಂದನಗರ, ಮುಲ್ಲಕಾಡು ಪರಿಸರದ ನಾಗರೀಕರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದಾರೆ.

Advertisement

ಇತ್ತೀಚಿನ ಕೆಲವು ದಿನಗಳಿಂದ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಲಾರಿ, ಟೆಂಪೋಗಳಲ್ಲಿ ತಂದು ಇಲ್ಲಿನ ಕೋರೆಗೆ ತುಂಬಿಸುತ್ತಿದ್ದಾರೆ. ಇದರಿಂದಾಗಿ ಇಲ್ಲಿನ ಸುತ್ತಮುತ್ತಲ ವಾತಾವರಣ ಕಲುಷಿತವಾಗಿ ದುರ್ನಾತ ಬೀರುತ್ತಿದೆ. ಹತ್ತಿರದ ಬಾವಿಗಳು ಕೂಡ ಕಲುಷಿತವಾಗಿದೆ. ಜತೆಗೆ ತ್ಯಾಜ್ಯ ತುಂಬಿದ ಲಾರಿಗಳ ಕಾರಣದಿಂದ ಸ್ಥಳೀಯರು ಇಲ್ಲಿ ನಡೆದುಕೊಂಡು ಹೋಗಲು ಕೂಡ ಸಾಧ್ಯವಾಗುತ್ತಿಲ್ಲ. ಪಾದಚಾರಿಗಳಿಗೂ ಇಲ್ಲಿ ಸಮಸ್ಯೆಯಾಗುತ್ತಿವೆ ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ವಿವರಿಸಲಾಗಿದೆ. 

ಕೋರೆಯ ಸುತ್ತ ಬೇಲಿ ಅಗತ್ಯ
ಕಲ್ಲಿನ ಕೋರೆಯಿರುವ ರಸ್ತೆಯು ಅಗಲ ಕಿರಿದಾಗಿದ್ದು ವಾಹನ ಸಂಚಾರಕ್ಕೂ ಸಮಸ್ಯೆಯಾಗುತ್ತಿದೆ. ಜನರು, ಜಾನುವಾರುಗಳಿಗೂ ಇಲ್ಲಿ ನಡೆದುಕೊಂಡು ಹೋಗಲು ಸಮಸ್ಯೆಯಾಗುತ್ತಿದೆ. ಹೀಗಾಗಿ ಕೋರೆಯ ಸುತ್ತ ಸೂಕ್ತ ಭದ್ರತಾ ಬೇಲಿ ಹಾಕಬೇಕು ಹಾಗೂ ಇಲ್ಲಿಗೆ ತ್ಯಾಜ್ಯ ಹಾಕುವುದನ್ನು ತಡೆಯುವ ನಿಟ್ಟಿನಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿಯಲ್ಲಿ ಉಲ್ಲೇಖೀಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next