Advertisement

Karnataka Polls 2023;”ರಾಜ’ಕಾರಣದಲ್ಲಿ “ರಾಣಿ’ಯರು ವಿರಳ!

12:31 AM Apr 06, 2023 | Team Udayavani |

ಕಲಬುರಗಿ:ಅಡುಗೆ ಮನೆಗೆ ಸೀಮಿತವಾಗಿದ್ದ ಮಹಿಳೆ ಈಗ ಎಲ್ಲ ರಂಗದಲ್ಲೂ ಛಾಪು ಮೂಡಿಸಿದ್ದಾಳೆ. ಊದುಗೊಳವೆ ಹಿಡಿಯುವ ಕೈಗಳು ಈಗ ಊರುಗೋಲಾಗುವ ಮಟ್ಟಕ್ಕೆ ಬೆಳೆದಿವೆ. ಆದರೆ, ರಾಜಕೀಯದಲ್ಲಿ ಈಗಲೂ ಅಂಬೆಗಾಲಿಡುವ ದುಸ್ಥಿತಿ ಇದೆ!

Advertisement

ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಇಂದಿಗೂ ಮಹಿಳೆಯರಿಗೆ ಅಗತ್ಯವಿರುವಷ್ಟು ಪ್ರಾಧಾನ್ಯತೆ ಸಿಗುತ್ತಿಲ್ಲ. ಕರುನಾಡ ರಾಜಕಾರಣದಲ್ಲಂತೂ ಬೆರಳೆಣಿಕೆಯಷ್ಟು ಮಹಿಳೆಯರಿಗೆ ಮಾತ್ರ ಅವಕಾಶ ಸಿಕ್ಕಿದೆ. ಪ್ರಸ್ತುತ 224 ಕ್ಷೇತ್ರಗಳ ಪೈಕಿ ಬಿಜೆಪಿಯಿಂದ ಮೂವರು, ಕಾಂಗ್ರೆಸ್‌ನಿಂದ 6 ಹಾಗೂ ಜೆಡಿಎಸ್‌ನಿಂದ ಓರ್ವ ಶಾಸಕಿ ಸೇರಿ ಒಟ್ಟು 10 ಮಹಿಳಾ ಪ್ರತಿನಿಧಿಗಳಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ 41 ವಿಧಾನಸಭೆ ಕ್ಷೇತ್ರಗಳ ಪೈಕಿ ಕಲಬುರಗಿ ಉತ್ತರ ಕ್ಷೇತ್ರದಲ್ಲಿ ಮಾಜಿ ಸಚಿವ ದಿ. ಖಮರುಲ್‌ ಇಸ್ಲಾಂ ಪತ್ನಿ ಖನಿಜಾ ಫಾತೀಮಾ ಮಾತ್ರ ಏಕೈಕ ಮಹಿಳಾ ಶಾಸಕಿ ಇದ್ದಾರೆ.

2018ರ ಚುನಾವಣೆಯಲ್ಲಿ 200 ಮಹಿಳೆಯರು ಕಣಕ್ಕಿಳಿದಿದ್ದರು. ಇದರಲ್ಲಿ ಕೇವಲ 8 ಮಹಿಳೆಯರು ಆಯ್ಕೆಯಾಗಿದ್ದರು. ನಂತರ ನಡೆದ ಎರಡು ಉಪ ಚುನಾವಣೆಯಲ್ಲಿ ಇಬ್ಬರು ಗೆಲ್ಲುವ ಮೂಲಕ 10ಕ್ಕೆ ಹೆಚ್ಚಳವಾಗಿದೆ. 2013ರ ವಿಧಾನಸಭೆಯಲ್ಲಿ ಕೇವಲ 6 ಮಹಿಳೆಯರು ವಿಧಾನಸಭೆ ಪ್ರವೇಶಿಸಿದ್ದರು.

ಆನಂದ ಸಿಂಗ್‌ ಸೋದರ ಸಂಬಂಧಿ ಕಣಕ್ಕೆ?:
ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಕಾಂಗ್ರೆಸ್‌ನಿಂದ ಕಲಬುರಗಿ ಉತ್ತರ ಕ್ಷೇತ್ರದ ಹಾಲಿ ಶಾಸಕಿ ಖನೀಜಾ ಫಾತೀಮಾಗೆ ಈಗಾಗಲೇ ಟಿಕೆಟ್‌ ಘೋಷಿಸಲಾಗಿದೆ. ಜೆಡಿಎಸ್‌ನಿಂದ ಆಳಂದ ಕ್ಷೇತ್ರದಲ್ಲಿ ಜೆಡಿಎಸ್‌ ಮಹೇಶ್ವರಿ ವಾಲಿ, ರಾಯಚೂರಿನ ದೇವದುರ್ಗ ಕ್ಷೇತ್ರಕ್ಕೆ ಕರೆಮ್ಮ ನಾಯಕರಿಗೆ ಟಿಕೆಟ್‌ ನೀಡಲಾಗಿದೆ. ವಿಜಯನಗರ ಕ್ಷೇತ್ರದಲ್ಲಿ ಸಚಿವ ಆನಂದ್‌ಸಿಂಗ್‌ ಸಹೋದರ ಸಂಬಂಧಿ ರಾಣಿ ಸಂಯುಕ್ತ, ಬಸವಕಲ್ಯಾಣದಲ್ಲಿ ಕಾಂಗ್ರೆಸ್‌ನಿಂದ ಮಾಲಾ ನಾರಾಯಣರಾವ್‌, ಯಾದಗಿರಿ ಜಿಲ್ಲೆಯ ಯಾದಗಿರಿ ಕ್ಷೇತ್ರದಿಂದ ಕಾಂಗ್ರೆಸ್‌ನ ಮಾಜಿ ಸಚಿವ ಡಾ. ಮಾಲಕರೆಡ್ಡಿ ಪುತ್ರಿ ಅನುರಾಗ, ಗುರುಮಠಕಲ್‌ನಿಂದ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಲಲಿತಾ ಅನಪೂರ, ಕೂಡ್ಲಿಗಿ ಎಸ್‌ಟಿ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ನಾಗಮಣಿ ಜಿಂಕಲ್‌, ಬಿಜೆಪಿಯಿಂದ ಮಾಜಿ ಸಂಸದೆ ಜೆ.ಶಾಂತಾ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ.

ಜಿಲ್ಲೆಗೊಂದಾದರೂ ಮಹಿಳಾ ಅಭ್ಯರ್ಥಿಗೆ ಟಿಕೆಟ್‌ ನೀಡುವಂತೆ ಬಿಜೆಪಿ ಮಹಿಳಾ ಘಟಕದ ರಾಷ್ಟ್ರಾಧ್ಯಕ್ಷೆ ವಾನತಿ ಶ್ರೀನಿವಾಸ ಅವರು ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ಕಟೀಲ್‌ಗೆ ಮನವಿ ಸಲ್ಲಿಸಿದ್ದಾರೆ. ಕಾರ್ಯಕಾರಿಣಿ ಸಭೆಯಲ್ಲಿ ಹಲವು ಸಲ ಒತ್ತಾಯಿಸಲಾಗಿದೆ. ಆದ್ಯತೆ ಸಿಗುವ ವಿಶ್ವಾಸವಿದೆ.
– ಚಂದಮ್ಮ ಪಾಟೀಲ್‌, ಬಿಜೆಪಿ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ

Advertisement

– ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next