Advertisement

Udupi: ನೊಂದ ಮಹಿಳೆಯರ, ಮಕ್ಕಳ‌ ಕಣ್ಣೀರೊರೆಸುವ ‘ಸಖೀ’

02:55 PM Dec 10, 2024 | Team Udayavani |

ಉಡುಪಿ: ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ, ಮಕ್ಕಳ ರಕ್ಷಣೆಗಾಗಿ ದಿನದ 24 ತಾಸು ಕಾರ್ಯನಿರ್ವಹಿಸುವ ಸಖೀ ಒನ್‌ ಸ್ಟಾಪ್‌ ಕೇಂದ್ರವು ನೊಂದವರಿಗೆ ನೈತಿಕ ಧೈರ್ಯ, ಸ್ಥೈರ್ಯ ನೀಡಿ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದೆ. ಉಡುಪಿ ಜಿಲ್ಲೆಯ ಕೇಂದ್ರವು ನಿಟ್ಟೂರಿನ ರಾಜ್ಯ ಮಹಿಳಾ ನಿಲಯ ಆವರಣದಲ್ಲಿ ಕೇಂದ್ರ ಕಾರ್ಯಾಚರಿಸುತ್ತಿದ್ದು, ಸಂಕಷ್ಟದಲ್ಲಿರುವವರಿಗೆ ನೆರವು ನೀಡುತ್ತಿದೆ.

Advertisement

ಸಖೀ ಒನ್‌ ಸ್ಟಾಪ್‌ ಸೆಂಟರ್‌ನ ಉಚಿತ ಸಹಾಯವಾಣಿ 191ರ ಮೂಲಕ 2015ರ ಮಾರ್ಚ್‌ ನಿಂದ ಅಕ್ಟೋಬರ್‌ 2024 ಅಂತ್ಯದವರೆಗೆ 1411 ಪ್ರಕರಣ ದಾಖಲಾಗಿರುತ್ತದ್ದು, 1307 ಪ್ರಕರಣಗಳು ಇತ್ಯರ್ಥವಾಗಿದೆ. ಬಾಕಿ ಉಳಿದ 104 ಪ್ರಕರಣಗಳಲ್ಲಿ 71 -ನ್ಯಾಯಾಲಯ, 1-ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ 22-ಸಮಾಲೋಚನೆಯಲ್ಲಿ ಬಾಕಿಯಿದ್ದು ಕೇಂದ್ರದಲ್ಲಿ ಅನುಸರಣೆ ಮಾಡಲಾಗುತ್ತಿದೆ.

2023-24ರಲ್ಲಿ 287 ದೌರ್ಜನ್ಯ ಪ್ರಕರಣ ದಾಖಲಾಗಿತ್ತು. 2024-25ರಲ್ಲಿ ಅಕ್ಟೋಬರ್‌ ಅಂತ್ಯಕ್ಕೆ 164 ಕೇಸುಗಳು ದಾಖಲಾಗಿವೆ. ಕೌಟುಂಬಿಕ ಸಮಸ್ಯೆಗೆ ಸಂಬಂಧಿಸಿದ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದೆ. ಲೈಂಗಿಕ ದೌರ್ಜನ್ಯ, ಮಹಿಳೆ ಕಾಣೆ ಪ್ರಕರಣ, ಸೈಬರ್‌ ಅಪರಾಧ ಇನ್ನಿತರೆ ಪ್ರಕರಣಗಳಾದ ಜಾಗದ ತಕಾರಾರು, ಹಣದ ವಿಚಾರ. ಅಸಹಾಯಕ ಮಹಿಳೆ, ಮಾನಸಿಕ ಕಿರುಕುಳ ಮುಂತಾದ ಪ್ರಕರಣಗಳು ದಾಖಲಾಗುತ್ತದೆ.

ಯಾವ ರೀತಿ ನ್ಯಾಯ ಒದಗಿಸಲಾಗುತ್ತದೆ?
ದೂರು ನೀಡಿದ ಬಳಿಕ ಪೊಲೀಸ್‌ ಮಹಾ ನಿರ್ದೇಶಕರಿಂದ ನಿಯೋಜಿಸ್ಪಟ್ಟ ಇನ್ಸ್‌ಪೆಕ್ಟರ್‌ ದರ್ಜೆಯ ಮಹಿಳಾ ಪೊಲೀಸ್‌ ಅಧಿಕಾರಿಯೊಬ್ಬರು ಕೇಂದ್ರಕ್ಕೆ ಭೇಟಿ ನೀಡಿ ಎಫ್ಐಆರ್‌ ದಾಖಲಿಸಿಕೊಳ್ಳುತ್ತಾರೆ. ಬಳಿಕ ಅದನ್ನು ಸಂಬಂಧಪಟ್ಟ ಪೊಲೀಸ್‌ ಠಾಣೆಗೆ ವರ್ಗಾಯಿಸಲಾಗುತ್ತದೆ. ಬಳಿಕ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ನೇಮಿಸಲ್ಪಟ್ಟ ಕಾನೂನು ಸಲಹೆಗಾರರಿಂದ ಅಗತ್ಯ ಕಾನೂನು ನೆರವು ಒದಗಿಸಲಾಗುತ್ತದೆ. ದೌರ್ಜನ್ಯಕ್ಕೊಳಗಾದ ಮಹಿಳೆಯರು ಹಾಗೂ ಮಕ್ಕಳಿಗೆ ಸರಕಾರದಿಂದ ಗುರುತಿಸಲ್ಪಟ್ಟ ಸ್ವಯಂ ಸೇವಾ ಸಂಸ್ಥೆ ಅಥವಾ ಸರಕಾರಿ ಗೃಹಗಳಲ್ಲಿ ಆಶ್ರಯ ಒದಗಿಸಿ ರಕ್ಷಣೆ ನೀಡಲಾಗುತ್ತದೆ.

Advertisement

ಸಖೀಯಿಂದ ಏನೇನು ಕೆಲಸ?
ಬಾಲಾಪರಾಧ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ-2000 ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ-2012 (ಪೋಕ್ಸೋ)ರ ಅಡಿಯಲ್ಲಿ ಸ್ಥಾಪಿಸಲಾದ ಸಂಸ್ಥೆಗಳು ಮತ್ತು ಪ್ರಾಧಿಕಾರಗಳು ಸಖೀ ಒನ್‌ ಸ್ಟಾಪ್‌ ಸೆಂಟರ್‌ನೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಜಾತಿ, ವರ್ಗ, ಧರ್ಮ, ಪ್ರದೇಶ, ಲೈಂಗಿಕ ದೃಷ್ಟಿಕೋನ ಅಥವಾ ವೈವಾಹಿಕ ಸ್ಥಿತಿಯನ್ನು ಲೆಕ್ಕಿಸದೆ ಅಪ್ರಾಪ್ತ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳು (ಪೋಕ್ಸೋ), ಕೌಟುಂಬಿಕ ಕಲಹಗಳ ದೌರ್ಜನ್ಯ, ಮಾನಸಿಕ ಅಸ್ವಸ್ಥೆಯರು, 18 ವರ್ಷ ಮೇಲ್ಪಟ್ಟ ಪ್ರಾಪ್ತ, ವಯಸ್ಕ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ, ವರದಕ್ಷಣೆ ಕಿರುಕುಳ, ಸೈಬರ್‌ ಅಪರಾಧ, ದ್ವಿಪತ್ನಿತ್ವ ಪ್ರಕರಣ, ಬಾಲ್ಯ ವಿವಾಹ, ಅಪಹರಣ ಪ್ರಕರಣ, ವಿಷಸೇವನೆ, ಮಾನಸಿಕ ಹಿಂಸೆ ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಿ ನೊಂದವರಿಗೆ ನ್ಯಾಯ ಒದಗಿಸುವ ಕೆಲಸವನ್ನು ಇದು ಮಾಡುತ್ತಿದೆ.

ಒಂದೇ ಸೂರಿನಡಿ 05 ಸೌಲಭ್ಯಗಳು
ನೊಂದವರಿಗೆ ತಾತ್ಕಾಲಿಕ ಆಶ್ರಯ, ಆಪ್ತ ಸಮಾಲೋಚನೆ, ವೈದ್ಯಕೀಯ ನೆರವು, ಪೊಲೀಸ್‌ ನೆರವು, ಕಾನೂನು ನೆರವು ಈ 5 ಸೌಲಭ್ಯಗಳ ಮೂಲಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ನೆರವು ನೀಡಲಾಗುತ್ತದೆ.

ನೊಂದವರಿಗೆ ಸಹಾಯ
ದೌರ್ಜನ್ಯಕ್ಕೆ ಒಳಗಾದವರು ಉಚಿತ ಸಹಾಯನಾಣಿಗೆ ಕರೆ ಮಾಡಿ ಅಥವಾ ನೇರವಾಗಿ ಬಂದು ದೂರು ನೀಡಬಹುದು. ದಾಖಲಾದ ಬಳಿಕ ಮುಂದಿನ ಕ್ರಮಗಳನ್ನು ಅನುಸರಿಸಲಾಗುತ್ತದೆ.
-ಶ್ಯಾಮಲಾ ಸಿ.ಕೆ., ಉಪನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.

Advertisement

Udayavani is now on Telegram. Click here to join our channel and stay updated with the latest news.

Next