Advertisement

ಸಿದ್ದುಗೆ ವರುಣಾ ಗೆಲುವು ಅನಿವಾರ್ಯ

11:20 PM Apr 15, 2023 | Team Udayavani |

ಬೆಂಗಳೂರು: ಆರಂಭದಿಂದಲೂ ಎರಡು ಕ್ಷೇತ್ರಗಳ ಬಡಬಡಿಕೆಯಲ್ಲಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಉತ್ಸಾಹಕ್ಕೆ ಕಾಂಗ್ರೆಸ್‌ನ ಮೂರನೇ ಪಟ್ಟಿ ತಣ್ಣೀರೆರಚಿದೆ.

Advertisement

ಕಳೆದ ಬಾರಿ ಬಾದಾಮಿ ಮತ್ತು ಚಾಮುಂಡೇಶ್ವರಿಯಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯ, ಈ ಬಾರಿಯೂ ಎರಡು ಕಡೆಯಿಂದ ಕಣಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿದ್ದರು. ಆ ಎರಡನೇ ಕ್ಷೇತ್ರ ಕೋಲಾರ ಆಗಿರಲಿದೆ ಎಂದು ಘೋಷಿಸಿದ್ದರು. ಈ ಮಧ್ಯೆ ಮೊದಲೆರಡು ಪಟ್ಟಿಯಲ್ಲಿ ಕೋಲಾರ ಪ್ರಸ್ತಾವ ಇರಲಿಲ್ಲ. ಆದರೆ ಕೋಲಾರಕ್ಕೆ ಕೊತ್ತೂರು ಮಂಜುನಾಥ ಹೆಸರು ಘೋಷಣೆಯಾಗುವ ಮೂಲಕ ನಿರೀಕ್ಷೆ ಹುಸಿಯಾಗಿದೆ. ಜತೆಗೆ ವರುಣಾದಿಂದ ಗೆಲ್ಲಲೇಬೇಕಾದ ಅನಿವಾರ್ಯ ಸಿದ್ದರಾಮಯ್ಯ ಅವರಿಗೆ ಸೃಷ್ಟಿಯಾಗಿದೆ.

2018ರಲ್ಲಿ ಎರಡು ಕಡೆ ಕಣಕ್ಕಿಳಿಯುವಾಗ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು. ಒಂದು ಕಡೆ (ತವರು ಜಿಲ್ಲೆ) ಸೋಲನುಭವಿಸಿ, ಮತ್ತೂಂದು ಕಡೆ ಗೆದ್ದಿದ್ದರು. ಈಗ ಅವರು ವಿಪಕ್ಷ ನಾಯಕರಾಗಿದ್ದು, ಎರಡೆರಡು ಕಡೆ ಸ್ಪರ್ಧಿಸುವುದರೊಂದಿಗೆ ಗೆಲ್ಲಬೇಕಾಗುತ್ತದೆ. ಅಕಸ್ಮಾತ್‌ ಒಂದು ಕಡೆ ಸೋತರೂ ತಪ್ಪು ಸಂದೇಶ ರವಾನೆ ಆಗುತ್ತದೆ. ಹಾಗಾಗಿ ಒಂದೇ ಕ್ಷೇತ್ರದಿಂದ ಕಣಕ್ಕಿಳಿಯುವುದು ಸೂಕ್ತ ಎಂಬ ಅಭಿಪ್ರಾಯ ಪಕ್ಷದ ಒಳಗೆ ವ್ಯಕ್ತವಾಗಿತ್ತು. ಸಿದ್ದರಾಮಯ್ಯ ವಿರೋಧಿ ಬಣ ಕೊನೆಗೂ ಕೋಲಾರವನ್ನು ತಪ್ಪಿಸಿ ಅವರನ್ನು ವರುಣಾಗೆ ಸೀಮಿತಗೊಳಿಸಿದ್ದಾರೆ.

ಈ ಬೆಳವಣಿಗೆಯಿಂದ ಸಿದ್ದರಾಮಯ್ಯ ಅವರು ಕಣಕ್ಕಿಳಿಯಲಿರುವ ಕ್ಷೇತ್ರ ವರುಣಾ ಒಂದೇ ಎನ್ನುವುದು ಖಚಿತವಾಗಿದೆ. ಈಗ ಅವರ ಮುಂದೆ ಎರಡು ಸವಾಲುಗಳಿವೆ- ಒಂದು ಪಕ್ಷದಲ್ಲೇ ತಮ್ಮನ್ನು ಕಟ್ಟಿಹಾಕಲು ಹವಣಿಸುತ್ತಿರುವ ಬಣದ ಬೇಗುದಿಯನ್ನು ಮೆಟ್ಟಿನಿಲ್ಲುವುದು. ಮತ್ತೂಂದು ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿರುವ ಎದುರಾಳಿಗಳನ್ನು ಮಣಿಸುವುದು. ಇದರ ಜತೆಗೆ ರಾಜ್ಯಾದ್ಯಂತ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷವನ್ನು ಗೆಲುವಿನ ದಡ ತಲುಪಿಸುವುದು. ಇದೆಲ್ಲವೂ ಅಷ್ಟು ಸುಲಭದ ತುತ್ತು ಅಲ್ಲ. ಇದಕ್ಕಾಗಿ ಅವರು ಹಲವು ಪಟ್ಟುಗಳು, ಕಸರತ್ತುಗಳನ್ನು ಕೂಡ ನಡೆಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next