Advertisement
ಚುನಾಯಿತ ಜನಪ್ರತಿನಿಧಿಗಳ ಕೈಯಲ್ಲಿ ಅಧಿಕಾರ ಇಲ್ಲದ ಕಾರಣ, 4 ವರ್ಷಗಳಿಂದ ಗ್ರಾಮೀಣ ಭಾಗದ ಆಡಳಿತ ಮತ್ತು ಅಭಿವೃದ್ಧಿಗೆ ಹಿನ್ನಡೆ ಆಗಿದೆ. ಮೀಸಲಾತಿ, ಕ್ಷೇತ್ರ ಪುನರ್ ವಿಂಗಡನೆ ಗೊಂದಲ, ಕಾಯ್ದೆ ತಿದ್ದುಪಡಿ, ಚುನಾವಣ ಆಯೋಗದ ಅಧಿಕಾರ ಮೊಟಕು, ಹೈಕೋರ್ಟ್ನಲ್ಲಿ ವ್ಯಾಜ್ಯ ಇದೆಲ್ಲವೂ ಚುನಾವಣೆ ವಿಳಂಬಕ್ಕೆ ಕಾರಣವಾಗಿದೆ. ತಾ.ಪಂ., ಜಿ.ಪಂ. ಚುನಾವಣೆಗೆ ತಾನು ಸಿದ್ಧ, ಆದರೆ ನ್ಯಾಯಾಲಯದಲ್ಲಿ ವ್ಯಾಜ್ಯವಿದೆ ಎಂದು ಸರಕಾರ ಹೇಳುತ್ತಿದೆ.
ಆಯೋಗ ಸಿದ್ಧ ಇಲ್ಲ ಅಂತ ಯಾರು ಹೇಳಿದ್ದು? ಚುನಾವಣೆ ನಡೆಸುವುದೇ ನಮ್ಮ ಕೆಲಸ. ವಾಸ್ತವ ಸಂಗತಿ ಏನೆಂದರೆ ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ. ಸರಕಾರ ಮೀಸಲಾತಿ ಪಟ್ಟಿ ಕೊಡುತ್ತಿಲ್ಲ. ಕಳೆದೊಂದು ವರ್ಷದಿಂದ ಮೀಸಲಾತಿ ಪಟ್ಟಿ ಕೊಡುವ ವಿಚಾರದಲ್ಲಿ ಕಾಲ ತಳ್ಳುತ್ತಾ ಬರಲಾಗಿದೆ. ಮೀಸಲಾತಿ ಪಟ್ಟಿ ಕೊಟ್ಟರೆ ಎಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಸಿಯೇ ಸಿದ್ಧ.
Related Articles
ಚುನಾವಣೆ ವಿಳಂಬಕ್ಕೆ ಆಯೋಗ ಕಾರಣ ಅನ್ನುವುದು ತಪ್ಪು. ಚುನಾವಣೆಗೆ ಸರಕಾರ ಸಿದ್ಧವಿದೆ. ಆದರೆ ನ್ಯಾಯಾಲಯದಲ್ಲಿ ವ್ಯಾಜ್ಯವಿದೆ ಎಂದು ಇತ್ತೀಚೆಗೆ ಮುಖ್ಯಮಂತ್ರಿಯವರು ಹೇಳಿದ್ದಾರೆ. ವಾಸ್ತವ ಸಂಗತಿ ಅದಲ್ಲ, ವ್ಯಾಜ್ಯ ಬಂದಿದ್ದು ಯಾಕೆ? ಸರಕಾರ ಮೀಸಲಾತಿ ಪಟ್ಟಿ ಕೊಟ್ಟಿಲ್ಲ. ಅದರಿಂದಾಗಿ ಆಯೋಗ ನ್ಯಾಯಾಲಯದ ಮೊರೆ ಹೋಗಬೇಕಾಯಿತು. ಮೀಸಲಾತಿ ಪಟ್ಟಿ ಕೊಟ್ಟಿದ್ದರೆ ಇದೆಲ್ಲ ಆಗುತ್ತಿರಲಿಲ್ಲ. ಸರಕಾರದ ತಪ್ಪಿನಿಂದಾಗಿ ಚುನಾವಣೆಗಳು ನನೆಗುದಿಗೆ ಬಿದ್ದಿವೆ.
Advertisement
– ಸರಕಾರದ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಿದ್ದು ಯಾಕೆ?ಕ್ಷೇತ್ರ ಪುನರ್ವಿಂಗಡನೆ ಮತ್ತು ಮೀಸಲಾತಿ ಪಟ್ಟಿ ಸರಕಾರ ಬಳಿ ಇದೆ. ಕ್ಷೇತ್ರ ಪುನರ್ವಿಂಗಡನೆ ಪೂರ್ಣಗೊಂಡಿದೆ ಎಂಬ ಮಾಹಿತಿ ಇದೆ. ಆದರೆ, ಮೀಸಲಾತಿ ಆಗಿಲ್ಲ. 2023ರ ಡಿಸೆಂಬರ್ನಲ್ಲಿ 15 ದಿನದಲ್ಲಿ ಮೀಸಲಾತಿ ಪಟ್ಟಿ ಆಯೋಗಕ್ಕೆ ಕೊಡಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹೈಕೋರ್ಟ್ಗೆ ಮುಚ್ಚಳಿಕೆ ಬರೆದು ಕೊಟ್ಟಿದ್ದರು. ಅದರಂತೆ ನಡೆದುಕೊಳ್ಳದ ಕಾರಣ ಆಯೋಗ ಸರಕಾರದ ವಿರುದ್ಧ 2024ರ ಜೂನ್ ತಿಂಗಳಲ್ಲಿ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿದೆ. ಐದಾರೂ ತಿಂಗಳು ಕಳೆದರೂ 15 ದಿನದಲ್ಲಿ ಕೊಡುತ್ತೇವೆ, ತಿಂಗಳಲ್ಲಿ ಕೊಡುತ್ತೇವೆ ಎಂದು ಸರಕಾರ ಹೇಳುತ್ತಲೇ ಇದೆ. ಹೈಕೋರ್ಟ್ ಆದೇಶ ಪಾಲಿಸುವಲ್ಲಿ ಸರಕಾರ ವಿಫಲವಾಗಿದೆ. ಜನವರಿ 29ಕ್ಕೆ ವಿಚಾರಣೆಗೆ ಬರಲಿದೆ. ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಿದೆ. ವಕೀಲರ ಮೂಲಕ ನ್ಯಾಯಾಲಯಕ್ಕೆ ವಸ್ತುಸ್ಥಿತಿಯನ್ನು ಮನದಟ್ಟು ಮಾಡಿಕೊಡುತ್ತೇವೆ. ಸಕಾಲದಲ್ಲಿ ಚುನಾವಣೆಗಳು ನಡೆಯದಿದ್ದರೆ ಆಗುವ ಅನನುಕೂಲಗಳೇನು?
ನಿಗದಿಯಂತೆ 5 ವರ್ಷಕ್ಕೊಮ್ಮೆ ಚುನಾವಣೆ ನಡೆಯದಿದ್ದರೆ ಕೇಂದ್ರ ಸರಕಾರದಿಂದ ಬರುವ ಅನುದಾನ ನಿಂತು ಹೋಗುತ್ತದೆ. ಇದು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಹಿನ್ನಡೆ ಆಗುತ್ತದೆ. ಅಧಿಕಾರ ವಿಕೇಂದ್ರೀಕರಣದ ಬದಲು ಕೇಂದ್ರೀಕೃತ ಅಧಿಕಾರ ಇರುತ್ತದೆ. ಜನಪ್ರತಿನಿಧಿಗಳ ಆಡಳಿತದ ಬದಲು ಅಧಿಕಾರಿಗಳ ಆಡಳಿತ ಇರುತ್ತದೆ. ಮುಖ್ಯವಾಗಿ ಯುವ ಪೀಳಿಗೆ ರಾಜಕೀಯ-ಸಾಮಾಜಿಕ ನಾಯಕತ್ವದಿಂದ ವಂಚಿತರಾಗುತ್ತಾರೆ. ಹೀಗಾದರೆ, ಅಧಿಕಾರ ವಿಕೇಂದ್ರೀಕರಣ, ಸಂವಿಧಾನ ತಿದ್ದುಪಡಿ, ಪಂಚಾಯಿತಿಗಳ ರಚನೆಯ ಉದ್ದೇಶವೇ ವಿಫಲವಾಗುತ್ತದೆ. ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಸಲು ಪರಿಸ್ಥಿತಿ ಅನುಕೂಲಕರವಾಗಿರುತ್ತಾ?
ಸರಕಾರ ಮೀಸಲಾತಿ ಪಟ್ಟಿ ಕೊಡಲಿ, ಪರಿಸ್ಥಿತಿ-ಸಂದರ್ಭ ನೋಡು ವುದು ಆಯೋಗದ ಕೆಲಸ. ಶೈಕ್ಷಣಿಕ ಚಟುವಟಿಕೆ, ಪರೀಕ್ಷೆಗಳು, ಬಿಸಿಲು, ಮಳೆ ಮತ್ತಿತರ ನೈಸರ್ಗಿಕ ವಿಕೋಪ ಎಲ್ಲವನ್ನೂ ಗಮನಿಸಿ- ಪರಿಗಣಿಸಿ ಚುನಾವಣೆಗಳನ್ನು ನಡೆಸುತ್ತೇವೆ. ಸರಕಾರ ಮೀಸಲಾತಿ ಪಟ್ಟಿ ಕೊಟ್ಟರೆ ಸಾಕು, ಮುಂದಿನದ್ದು ಆಯೋಗ ನೋಡಿಕೊಳ್ಳಲಿದೆ. ಸರಕಾರ ಆಯೋಗದ ಕೆಲವು ಅಧಿಕಾರವನ್ನು ಕಿತ್ತು ಹಾಕಿದೆಯಲ್ಲವೇ? ಅದಕ್ಕೆ ಚುನಾವಣ ಆಯೋಗ ಏನು ಮಾಡುತ್ತದೆ?
2005ರಿಂದ 2015ರ ವರೆಗೆ ಮೀಸಲಾತಿ, ಕ್ಷೇತ್ರ ಪುನರ್ವಿಂಗಡನೆೆ ಯನ್ನು ಆಯೋಗವೇ ಮಾಡುತ್ತಾ ಬಂದಿದೆ. ಈ ಅಧಿಕಾರವನ್ನು ಮಾತ್ರ ವಾಪಸ್ ಪಡೆಯಲಾಗಿದೆ. ಉಳಿದೆಲ್ಲ ಸಾಂವಿಧಾನಿಕ ಅಧಿಕಾರಿ ಗಳು ಆಯೋಗದ ಬಳಿಯೇ ಇವೆ. ಈಗ ಮೀಸಲಾತಿ ನಿಗದಿ, ಕ್ಷೇತ್ರ ಪುನರ್ವಿಂಗಡನೆ ಅಧಿಕಾರವನ್ನು ಆಯೋಗಕ್ಕೆ ಮರಳಿ ನೀಡು ವಂತೆ ರಾಜ್ಯಪಾಲರಿಗೆ ಪತ್ರ ಬರೆಯಲಾಗಿದೆ. ಮುಖ್ಯಮಂತ್ರಿ, ಸಂಬಂಧಪಟ್ಟ ಇಲಾಖೆಗಳ ಸಚಿವರ ಗಮನಕ್ಕೂ ಈ ವಿಚಾರವನ್ನು ತರಲಾಗಿದೆ. ಆಯೋಗದ ಪತ್ರವನ್ನು ಸರಕಾರಕ್ಕೆ ರವಾನಿಸಿರುವ ರಾಜ್ಯಪಾಲರು ಚುನಾವಣ ಆಯೋಗದ ಅಧಿಕಾರವನ್ನು ಮರಳಿಸುವ ಬಗ್ಗೆ ಪರಿಶೀಲಿಸುವಂತೆ ಹೇಳಿದ್ದಾರೆ. ಅಲ್ಲದೆ ತಾ.ಪಂ., ಜಿ.ಪಂ. ಚುನಾವಣೆಗಳನ್ನು ನಡೆಸಲು ಅನುಕೂಲ ಮಾಡಿಕೊಡುವಂತೆಯೂ ಸರಕಾರಕ್ಕೆ ರಾಜ್ಯಪಾಲರು ಹೇಳಿದ್ದಾರೆ. ಚುನಾವಣ ಆಯೋಗದಿಂದ ಸಿದ್ಧತೆ ಆಗಿದೆಯಾ?
ಈಗಾಗಲೇ ತಾ.ಪಂ., ಜಿ.ಪಂ. ಚುನಾವಣೆಗಳಿಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನಿರಂತರ ಸಭೆಗಳನ್ನು ನಡೆಸಲಾಗುತ್ತಿದೆ. ಮೀಸಲಾತಿ ಪಟ್ಟಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಚಿವರ ಬಳಿ ಇದೆ ಎಂದು ಹೇಳಲಾಗುತ್ತಿದೆ. ಆದಷ್ಟು ಬೇಗ ಮೀಸಲಾತಿ ಪಟ್ಟಿ ಕೊಡಿ ಎಂದು ನಾನು ಕೇಳಿಕೊಳ್ಳುತ್ತೇನೆ. ಏಕೆಂದರೆ ಮೀಸಲಾತಿ ಕೊಟ್ಟ ಕನಿಷ್ಠ 1.5ತಿಂಗಳ ಬಳಿಕ ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಬೇಕಾಗುತ್ತದೆ.