ಕರ್ನಾಟಕ, ಕೇರಳ ಹಾಗೂ ತಮಿಳುನಾಡು ಅರಣ್ಯಗಳಲ್ಲಿ ಸುಮಾರು ಎರಡು ದಶಕಗಳ ಕಾಲ ಬಂದೂಕು ಹಿಡಿದು ಹೋರಾಟ ನಡೆಸಿದ್ದ ಆರು ಮಂದಿ ನಕ್ಸಲೀಯರು ಬುಧವಾರ (ಜನವರಿ 08) ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಸಚಿವ ಪರಮೇಶ್ವರ ಸೇರಿದಂತೆ ಪೊಲೀಸ್ ವರಿಷ್ಠಾಧಿಕಾರಿಗಳ ಮುಂದೆ ಶರಣಾಗಿದ್ದಾರೆ. ಇದರೊಂದಿಗೆ ಹಲವು ದಶಕಗಳ ಕಾಲ ರಾಜ್ಯ ಸರ್ಕಾರಕ್ಕೆ ತಲೆನೋವಾಗಿದ್ದ ನಕ್ಸಲ್ ಹೋರಾಟ ರಾಜ್ಯದಲ್ಲಿ ಅಂತ್ಯಕಾಣುವ ಕಾಲ ಸಮೀಪಿಸಿದಂತಾಗಿದೆ.
ಕರ್ನಾಟಕದಲ್ಲಿ ಈ ನಕ್ಸಲ್ ಹೋರಾಟ ಯಾವಾಗ ಪ್ರಾರಂಭವಾಯಿತು…ಈವರೆಗೆ ನಡೆದ ಎನ್ ಕೌಂಟರ್ ನಲ್ಲಿ ಎಷ್ಟು ನಕ್ಸಲೀಯರು ಹತರಾಗಿದ್ದಾರೆ…ಎಷ್ಟು ನಕ್ಸಲೀಯರು ಶರಣಾಗಿದ್ದಾರೆ ಎಂಬ ವಿವರ ಇಲ್ಲಿದೆ…
1990ರಿಂದ 2012ರವರೆಗೆ ರಾಜ್ಯದಲ್ಲಿ ನಕ್ಸಲ್ ಚಳವಳಿ ಉತ್ತುಂಗದಲ್ಲಿದ್ದ ಕಾಲ…ಆ ಸಂದರ್ಭದಲ್ಲಿ ಸುಮಾರು 40ರಿಂದ 45 ಶಸ್ತ್ರಾಸ್ತ್ರಧಾರಿ ನಕ್ಸಲೀಯರು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗದ ದಟ್ಟ ಅರಣ್ಯದಲ್ಲಿ ಸಕ್ರಿಯರಾಗಿದ್ದರು. ಅಷ್ಟೇ ಅಲ್ಲ ಶುಷ್ಕ ಪ್ರದೇಶವಾದ ಬೀದರ್, ರಾಯಚೂರು, ಬಳ್ಳಾರಿ ಮತ್ತು ತುಮಕೂರು, ಪಾವಗಡದಲ್ಲಿಯೂ ನಕ್ಸಲೀಯರ ಅಟ್ಟಹಾಸ ಜೋರಾಗಿತ್ತು.
2005 ಹಾಗೂ 2012ರ ನಡುವೆ ನಕ್ಸಲ್ ನಿಗ್ರಹ ದಳದ 11 ಎನ್ ಕೌಂಟರ್ ಗಳಲ್ಲಿ 19 ಮಂದಿ ನಕ್ಸಲೀಯರು ಹ*ತ್ಯೆಗೀಡಾಗಿದ್ದರು. ಈ ಕಾರ್ಯಾಚರಣೆ ವೇಳೆ ಮೂವರು ನಾಗರಿಕರು ಸಾವಿಗೀಡಾಗಿದ್ದರು. 2005ರಲ್ಲಿ ತುಮಕೂರಿನಲ್ಲಿ ನಕ್ಸಲೀಯರ ಹೊಂಚು ದಾಳಿಗೆ ರಾಜ್ಯದ ಎಂಟು ಮಂದಿ ಕೆಎಸ್ ಆರ್ ಪಿ ಪೊಲೀಸರು ಕೊನೆಯುಸಿರೆಳೆಯುವಂತಾಗಿತ್ತು. ಅಲ್ಲದೇ ಪೊಲೀಸರ ಮಾಹಿತಿದಾರರೆಂದು ಆರೋಪಿಸಿ ನಕ್ಸಲೀಯರು ಏಳು ಮಂದಿ ನಾಗರಿಕರನ್ನು ಕೊ*ಲೆಗೈದಿದ್ದರು.
2005ರಲ್ಲಿ ನಕ್ಸಲೀಯರ ಚಳವಳಿ ಹತ್ತಿಕ್ಕಲು ರಾಜ್ಯ ಸರ್ಕಾರ ನಕ್ಸಲ್ ನಿಗ್ರಹ ಪಡೆ (ANF) ಯನ್ನು ರಚಿಸಿತ್ತು. ಕರ್ನಾಟಕ ಉಡುಪಿ ಜಿಲ್ಲೆ ಹಾಗೂ ಮಲೆನಾಡು, ಪಶ್ಚಿಮಘಟ್ಟ ಪ್ರದೇಶದಲ್ಲಿ ಎಎನ್ ಎಫ್ 15 ಕ್ಯಾಂಪ್ಸ್ ಗಳನ್ನು ಹೊಂದಿದ್ದು, 500 ಸಿಬಂದಿಗಳು ಕಾರ್ಯಾಚರಿಸುತ್ತಿದ್ದರು.
2003ರ ನವೆಂಬರ್ 17ರಂದು ಕಾರ್ಕಳ ತಾಲೂಕಿನ ಈದು ಗ್ರಾಮದ ಬೊಲ್ಲೊಟ್ಟೊದಲ್ಲಿ ಎಎನ್ ಎಫ್ ನಡೆಸಿದ ಪ್ರಥಮ ಎನ್ ಕೌಂಟರ್ ನಲ್ಲಿ ನಕ್ಸಲೀಯರಾದ ರಾಯಚೂರಿನ ಹಾಜಿಮಾ ಮತ್ತು ಕೊಪ್ಪದ ಪಾರ್ವತಿ ಬಲಿಯಾಗಿದ್ದರು.
ಆ ಬಳಿಕ 2005ರ ಫೆಬ್ರುವರಿ 6ರಂದು ಚಿಕ್ಕಮಗಳೂರಿನಲ್ಲಿ ಕರ್ನಾಟಕದ ನಕ್ಸಲ್ ಚಟುವಟಿಕೆಯ ಮಾಸ್ಟರ್ ಮೈಂಡ್, ನಕ್ಸಲ್ ನಾಯಕ ಸಾಕೇತ್ ರಾಜನ್ ಎನ್ ಕೌಂಟರ್ ನಲ್ಲಿ ಹತನಾಗಿದ್ದ. ಈ ಸಂದರ್ಭದಲ್ಲಿ ಸಾಕೇತ್ ಜತೆಗಿದ್ದ ಶಿವಲಿಂಗು ಎಂಬಾತನೂ ಸಾವಿಗೀಡಾಗಿದ್ದ.
ಏತನ್ಮಧ್ಯೆ ನಕ್ಸಲೀಯರು 2005ರ ಮೇ 17ರಂದು ಪೊಲೀಸ್ ಮಾಹಿತಿದಾರ ಎಂದು ಆರೋಪಿಸಿ ಬುಡಕಟ್ಟು ಮುಖಂಡ ಶೇಷಯ್ಯ ಅವರನ್ನು ಹ*ತ್ಯೆಗೈದಿತ್ತು. ನಂತರ ಸಾಕೇತ್ ರಾಜನ್ ಎನ್ ಕೌಂಟರ್ ಗೆ ಪ್ರತೀಕಾರವಾಗಿ ನಕ್ಸಲೀಯರು 2005ರ ಫೆಬ್ರುವರಿ 10ರಂದು ವೆಂಕಟಮ್ಮನಹಳ್ಳಿಯಲ್ಲಿ ಆರು ಮಂದಿ ಪೊಲೀಸರನ್ನು ಹಾಗೂ ನಾಗರಿಕರೊಬ್ಬರನ್ನು ಹ*ತ್ಯೆಗೈದಿತ್ತು.
2005ರ ಜೂನ್ 23ರಂದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ದೇವರಬಾಳು ಬಳಿ ನಡೆದ ಎನ್ ಕೌಂಟರ್ ನಲ್ಲಿ ಬೆಳಗಾವಿಯ ಅಜಿತ್ ಕುಸಬಿ, ಮೂಡಿಗೆರೆಯ ಸಬ್ಲಿ ಉಮೇಶ್ ಕೊನೆಯುಸಿರೆಳೆದಿದ್ದರು. 2006ರ ಡಿಸೆಂಬರ್ 25ರಂದು ಶೃಂಗೇರಿ ತಾಲೂಕಿನ ಕಿಗ್ಗಾದಲ್ಲಿ ದಿನಕರ್, 2007ರ ಜುಲೈ 10ರಂದು ಕೊಪ್ಪದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಸಿಂಧನೂರಿನ ಗೌತಮ್, ಪರಮೇಶ್ವರ, ಸುಂದರೇಶ್, ಮನೆಯ ಯಜಮಾನ ರಾಮೇಗೌಡ್ಲು, ಪತ್ನಿ ಕಾವೇರಿ ಸಾವಿಗೀಡಾಗಿದ್ದರು.
2008ರ ನವೆಂಬರ್ 19ರಂದು ಹೊರನಾಡು ಸಮೀಪ ನಡೆದ ಎನ್ ಕೌಂಟರ್ ನಲ್ಲಿ ಸೊರಬದ ಮನೋಹರ್ ಹಾಗೂ ಅಭಿಲಾಷ್, ನವೀನ್ ಹ*ತ್ಯೆಗೀಡಾಗಿದ್ದರು. 2010ರ ಮಾರ್ಚ್ 1ರಂದು ಬೆಳ್ತಂಗಡಿಯ ಕುತ್ಲೂರಿನಲ್ಲಿ ನಡೆದ ಎನ್ ಕೌಂಟರ್ ನಲ್ಲಿ ವಸಂತ ಗೌಡ್ಲು ಕೊನೆಯುಸಿರೆಳೆದಿದ್ದ. 2024ರ ನವೆಂಬರ್ 18ರಂದು ಹೆಬ್ರಿಯ ಪೀತಬೈಲು ಸಮೀಪ ನಡೆದ ಎನ್ ಕೌಂಟರ್ ನಲ್ಲಿ ನಕ್ಸಲ್ ಮುಖಂಡ ವಿಕ್ರಮ್ ಗೌಡ ಹತನಾಗಿದ್ದ.
ಈಗಾಗಲೇ ಶರಣಾದ ನಕ್ಸಲೀಯರು ಯಾರು?
ಈ ಹಿಂದೆ ರಾಜ್ಯ ಸರ್ಕಾರ ಘೋಷಿಸಿದ್ದ ನಕ್ಸಲ್ ಶರಣಾಗತಿ ಪ್ಯಾಕೇಜ್ ನಡಿ ಹಾಗಲಗಂಚಿ ವೆಂಕಟೇಶ್, ಮಲ್ಲಿಕಾ, ಹೊರ್ಲೆ ಜಯ, ಸಿರಿಮನೆ ನಾಗರಾಜ್, ನೂರ್ ಶ್ರೀಧರ್, ನೀಲಗುಳಿ ಪದ್ಮನಾಭ, ಪರಶುರಾಮ, ಭಾರತಿ, ಕನ್ಯಾಕುಮಾರಿ, ಶಿವು, ಚನ್ನಮ್ಮ ಸೇರಿ ಒಟ್ಟು 14 ಮಂದಿ ನಕ್ಸಲರು ಸಮಾಜದ ಮುಖ್ಯವಾಹಿನಿಗೆ ಮರಳಿದ್ದು, ಇಂದು (ಜ-08) ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರಪ್ಪ ಅರೋಲಿ(ಜಯಣ್ಣ), ಕೆ.ವಸಂತ್ ಮತ್ತು ಟಿ.ಎನ್.ಜೀಶ್ ಶರಣಾಗಿದ್ದಾರೆ.
ಮೂಲಗಳ ಪ್ರಕಾರ, ರಾಜ್ಯದಲ್ಲಿ ಕೇವಲ ಓರ್ವ ನಕ್ಸಲ್ ಮಾತ್ರ ಶರಣಾಗತಿಗೆ ಬಾಕಿ ಉಳಿದಿದ್ದು, ಆತನ ಶರಣಾಗತಿಗೆ ಪ್ರಯತ್ನ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದ್ದು, ಇದರೊಂದಿಗೆ ಕರ್ನಾಟಕದಲ್ಲಿ ಎರಡೂವರೆ ದಶಕಗಳ ಕಾಲದ ನಕ್ಸಲ್ ಚಳವಳಿ ಅಂತ್ಯ ಕಂಡಂತಾಗಿದೆ.