Advertisement

Karkala: ಬಂಡಿಮಠ ರಸ್ತೆ- ಗುಂಡಿ ತಪ್ಪಿಸಿ ಹೋಗೋದೇ ತಲೆನೋವು!

04:41 PM Oct 05, 2023 | Team Udayavani |

ಕಾರ್ಕಳ: ಕಾರ್ಕಳ ಪುರಸಭೆ ವ್ಯಾಪ್ತಿಯ ಬಂಡಿಮಠ ಜಂಕ್ಷನ್‌ನಲ್ಲಿ ಬೃಹತ್‌ ಗಾತ್ರದ ಗುಂಡಿ ನಿರ್ಮಾಣವಾಗಿದೆ.ಇಲ್ಲಿ
ಸಂಚರಿಸುವುದೇ ದೊಡ್ಡ ತಲೆನೋವು. ಈ ರಸ್ತೆಯಲ್ಲಿ ಗುಂಡಿ ತಪ್ಪಿಸಿ ಹೋದ ಬಳಿಕ ಮೈಕೈ ನೋಯುವುದಂತೂ ಖಚಿತ. ದ್ವಿಚಕ್ರ  ಸವಾರರ ಸಹಿತ ಇತರೇ ವಾಹನ ಚಾಲಕರು, ಅಪಾಯವನ್ನು ಎದುರಿಸುತ್ತಿದ್ದು, ಜೀವಹಾನಿ
ಸಂಭವಿಸುವ ಪರಿಸ್ಥಿತಿ ಇಲ್ಲಿದೆ.

Advertisement

ಉಡುಪಿ ಕಾರ್ಕಳ ರಸ್ತೆ, ತಾಲೂಕು ಕಚೇರಿ ರಸ್ತೆ, ತೆಳ್ಳಾರು, ಪೆರ್ವಾಜೆ ಕಡೆಯಿಂದ ಬಂದು ಸೇರುವಲ್ಲಿ ಈ ಪರಿಸ್ಥಿತಿಯಿದ್ದು, ಸವಾರರು, ಪ್ರಯದಾಣಿಕರು ನಿತ್ಯ ಇಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಪಾದಚಾರಿಗಳು, ವಾಹನಗಳಿಗಾಗಿ ಕಾಯುವವರು ಎಲ್ಲರೂ ಈ ರಸ್ತೆ ಗುಂಡಿಯಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಕಿರಿದಾಗಿದ್ದ ಗುಂಡಿ ನಿರಂತರ ಮಳೆಗೆ ಗಾತ್ರ ವಿಸ್ತರಿಸಿ ಕೊಂಡಿದೆ, ಅದೀಗ ಮರಣ ಗುಂಡಿಯಾಗಿ ಮಾರ್ಪಟ್ಟಿದೆ. ಅಪಘಾತಕ್ಕೆ ಕಾರಣವಾಗುತ್ತಿದೆ.

ತಾ| ಕಚೇರಿ ಸಹಿತ ಪರಿಸರದ ವಿವಿಧ ಸರಕಾರಿ, ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಇಲ್ಲೇ ಗುಂಡಿ ಪಕ್ಕದಲ್ಲಿ ಬಸ್‌ಗೆ ಕಾದು ನಿಲ್ಲುತ್ತಾರೆ. ಬಸ್‌ನವರು ಪ್ರಯಾಣಿಕರನ್ನು ಹತ್ತಿ ಇಳಿಸುವ ವೇಳೆ ಇದೇ ರಸ್ತೆ ಗುಂಡಿ ಪಕ್ಕವೇ ವಾಹನ ನಿಲ್ಲಿಸುತ್ತಿರುತ್ತಾರೆ. ಆಗ ಹತ್ತಿಳಿಯುವುದಕ್ಕೆ ತೊಂದರೆಯಾಗುತ್ತದೆ. ದ್ವಿಚಕ್ರ ಸವಾರರು, ಲಘು ವಾಹನ ಸವಾರರು ಗುಂಡಿ ತಪ್ಪಿಸುವ ಭರದಲ್ಲಿ ಬ್ಯಾಲೆನ್ಸ್‌ ಮಾಡುವಾಗ ಪರಸ್ಪರ ಒಂದಕ್ಕೊಂದು ಗುದ್ದಿ ಅಪಾಯ ತಂದುಕೊಳ್ಳುತ್ತಿದ್ದಾರೆ. ಖಾಸಗಿ ಬಸ್‌ಗಳು ಪೈಪೋಟಿಗೆ ಬಿದ್ದು ಇಲ್ಲಿ ತೆರಳುತ್ತಿದ್ದು ದ್ವಿಚಕ್ರ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ.

ತೇಪೆಗಷ್ಟೇ ಸಮಾಧಾನ
ಪ್ರತೀ ಮಳೆಗಾಲದಲ್ಲೂ ಇಲ್ಲಿನ ರಸ್ತೆ ಗುಂಡಿ ಸಮಸ್ಯೆ ತರುತ್ತಿತ್ತು. ಮಳೆಗಾಲ ಆರಂಭಕ್ಕೂ ಮುಂಚಿತ ಈ ಗುಂಡಿಯನ್ನು ಪುರಸಭೆ ವತಿಯಿಂದ ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಸುರಿದ ಮಳೆಗೆ ಆರಂಭದಲ್ಲಿ ಸಣ್ಣ ಗುಂಡಿ ಬಿದ್ದಿದ್ದು$ ಬಳಿಕ ದಿನದಿಂದ ದಿನಕ್ಕೆ ದೊಡ್ಡದಾಗುತ್ತಾ ಹೋಗಿದೆ. ಮಳೆ ಬಂದಾಗ ಗುಂಡಿಯಲ್ಲಿ ನೀರು ತುಂಬಿ ವಾಹನದ ಚಕ್ರಗಳು ಗುಂಡಿಗೆ ಇಳಿದು ಹತ್ತುವಾಗ ಪ್ರಯಾಣಿಕರು ಅನುಭವಿಸುವ ಯಾತನೆ ಅಷ್ಟಿಷ್ಟಲ್ಲ.

ಈ ರಸ್ತೆಯಲ್ಲಿ ವಾಹನವೂ ಅಧಿಕ
ಕಾರ್ಕಳ-ಉಡುಪಿ ನಡುವೆ ಅಪಾರ ಪ್ರಮಾಣದಲ್ಲಿ ಬಸ್‌, ಖಾಸಗಿ ವಾಹನಗಳು, ಲೋಡ್‌ ತುಂಬಿದ ಘನ ವಾಹನಗಳು ಇಲ್ಲಿ ತೆರಳುತ್ತವೆ.ಕಾರ್ಕಳ ಪೇಟೆಯಾಗಿ ಉಡುಪಿಗೆತೆರಳುವ ವಾಹನಗಳು, ಇನ್ನೊಂದು ಕಡೆ ಪೇಟೆಯಿಂದ ಒಳ ರಸ್ತೆ ಪೆರ್ವಾಜೆಯಾಗಿ
ತೆರಳುವ ವಾಹನಗಳು, ತಾಲೂಕು ಕಚೇರಿ ಭಾಗದಿಂದ ಹೀಗೆ ಎಲ್ಲ ಕಡೆಯಿಂದ ವಾಹನಗಳು ಒಂದೆಡೆ  ಈ ಜಂಕ್ಷನ್‌ನಲ್ಲಿ ಸೇರಿ ಸಂಚಾರ ಬೆಳೆಸುತ್ತವೆ. ಹಾಗಾಗಿ ಈ ಜಂಕ್ಷನ್‌ ಅತ್ಯಂತ ಮಹತ್ವದ್ದಾಗಿದೆ. ಇಲ್ಲಿನ ಗುಂಡಿಯಿಂದ ಎಲ್ಲ ದೃಷ್ಟಿಯಿಂದಲೂ ಅಪಾಯವೇ ಹೆಚ್ಚು. ಶಾಶ್ವತ ಪರಿಹಾರ ಅಗತ್ಯ ಇಲ್ಲಿ ಡಾಮರು ಬದಲಿಗೆ ಕಾಂಕ್ರೀಟ್‌ ಕಾಮಗಾರಿ ನಡೆಸಿ ಶಾಶ್ಚತವಾದ ಪರಿಹಾರ ಮಾಡಿದರಷ್ಟೇ ಸುಗಮ ಸಂಚಾರ ಹಾಗೂ ಸುಖಕರ ಪ್ರಯಾಣ ಸಾಧ್ಯ. ಸಂಬಂಧಿಸಿದ ಇಲಾಖೆ ಈ ಮರಣ ಗುಂಡಿಗೆ ಶಾಶ್ವತ ಪರಿಹಾರ ನೀಡುವ ಕಡೆಗೆ ಗಮನಹರಿಸಬೇಕು ಎನ್ನುವುದು ವಾಹನ ಸವಾರರ, ನಾಗರಿಕರ ಆಗ್ರಹವಾಗಿದೆ.

Advertisement

ನಗರದೊಳಗಿದೆ ಅಲ್ಲಲ್ಲಿ ಸಣ್ಣ ಪುಟ್ಟ ಗುಂಡಿ!
ಮಳೆ ಈ ಬಾರಿ ಹೆಚ್ಚು ಸುರಿಯದಿದ್ದರೂ ಸುರಿದ ವಿರಳ ಮಳೆಗೆ ಪುರಸಭೆಯೊಳಗಿನ ರಸ್ತೆಗಳ ಕೆಲವೆಡೆ ಸಣ್ಣ ಪುಟ್ಟ ಗುಂಡಿಗಳು ನಿರ್ಮಾಣವಾಗುತ್ತಿವೆ. ಅವುಗಳಿಗೆ ಆರಂಭದಲ್ಲೇ ಮುಕ್ತಿ ನೀಡದಿದ್ದಲ್ಲಿ ವಾಹನಗಳ ನಿರಂತರ ಸಂಚಾರದಿಂದ ವಗಳ ಗಾತ್ರ ಹಿರಿದಾಗುತ್ತವೆ.

ಅನಂತಶಯನದ ಬಳಿ ತೆಳ್ಳಾರು ರಸ್ತೆಗೆ ತೆರಳುವಲ್ಲಿ ಇತ್ತೀಚೆಗೆ ಸೃಷ್ಟಿಯಾಗಿದ್ದ ಅಪಾಯದ ಗುಂಡಿಯನ್ನು ಸ್ಥಳೀಯರು ಮಣ್ಣು ಹಾಕಿ ಮುಚ್ಚಿದ್ದರು. ಪೇಟೆಯಿಂದ ಮಾರುಕಟ್ಟೆ ಮಾರ್ಗವಾಗಿ ಪೆರ್ವಾಜೆಗೆ ತೆರಳುವಲ್ಲಿ ರಸ್ತೆ ಬದಿಯಲ್ಲೇ ಬೃಹತ್‌ ಗುಂಡಿಯಿದ್ದು ಇದು ತೀರಾ ಅಪಾಯ ಕಾರಿಯಾಗಿದೆ. ದೊಡ್ಡ ಗುಂಡಿಗಳಾಗುವ ಮುಂಚಿತವೇ ಇವುಗಳನ್ನು ಗಮನಿಸಿ ಆರಂಭದಲ್ಲೇ ಇಂತಹ ಗುಂಡಿಗಳಿಗೆ ಮುಕ್ತಿ ನೀಡಿ ಸುರಕ್ಷಿತವಾಗಿಡುವ ಕಾರ್ಯ ಪುರಸಭೆಯಿಂದ ನಡೆಯಬೇಕು.

ಅಂದಾಜು ಪಟ್ಟಿ ಸಿದ್ಧ ಪ್ರತಿ ಮಳೆಗಾಲವೂ ಇಲ್ಲಿ ಮಳೆಯಿಂದ ಸಮಸ್ಯೆ
ಸೃಷ್ಟಿಯಾಗುತ್ತಿದೆ. ಅಲ್ಲಿಯ ರಸ್ತೆ ಸಹಿತ ನಗರದೊಳಗಿನ ಗುಂಡಿ ಬಿದ್ದ ರಸ್ತೆಗಳ ದುರಸ್ತಿ ಅಂದಾಜು ಪಟ್ಟಿ ಸಿದ್ಧಪಡಿಸಿದ್ದೇವೆ. ಮಳೆ ಕಡಿಮೆಯಾದ ಸಮಯ ನೋಡಿಕೊಂಡು ದುರಸ್ತಿಗೆ ಕ್ರಮವಹಿಸುತ್ತೇವೆ.
ರೂಪಾ ಟಿ. ಶೆಟ್ಟಿ, ಮುಖ್ಯಾಧಿಕಾರಿ ಪುರಸಭೆ ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next