ಕಾಪು: ಕೋವಿಡ್ ವೈರಸ್ ಹರಡುವಿಕೆಯ ಭೀತಿಯ ಹಿನ್ನೆಲೆಯಲ್ಲಿ ಇತಿಹಾಸ ಪ್ರಸಿದ್ಧವಾಗಿರುವ ಕಾಪುವಿನ ಮೂರೂ ಮಾರಿಗುಡಿಗಳಲ್ಲೂ ಮಂಗಳವಾರ ರಾತ್ರಿ ಸರಳ ರೀತಿಯಲ್ಲಿ ಆಟಿ ಮಾರಿಪೂಜೆಗೆ ಚಾಲನೆ ನೀಡಲಾಯಿತು.
ಕಾಪು ಶ್ರೀ ಹಳೇ ಮಾರಿಗುಡಿ, ಶ್ರೀ ಹೊಸ ಮಾರಿಗುಡಿ ಮತ್ತು ಶ್ರೀ ಮೂರನೇ ಮಾರಿಗುಡಿಯಲ್ಲಿ ಜು. 28 ಮತ್ತು ಜು. 29ರಂದು ಕಾಲಾವಧಿ ಆಟಿ ಮಾರಿಪೂಜೆ ನಡೆಯಲಿದ್ದು, ಕೋವಿಡ್ ವೈರಸ್ ಹರಡುವಿಕೆಯ ಭೀತಿಯ ಹಿನ್ನಲೆ ಸಾರ್ವಜನಿಕರ ಪಾಲ್ಗೊಳ್ಳುವುದನ್ನು ನಿರ್ಬಂಧಿಸಿ ಸರಳ ರೀತಿಯಲ್ಲಿ ಆಚರಿಸಲಾಯಿತು.
ಮಂಗಳವಾರ ರಾತ್ರಿ ಎಂಟು ಗಂಟೆಯೊಳಗೆ ಮಾರಿಪೂಜೆಯ ಎಲ್ಲಾ ವಿಧಿ ವಿಧಾನಗಳನ್ನು ಪೂರ್ಣಗೊಳಿಸಲಾಗಿದ್ದು ಅರ್ಚಕರು ಮತ್ತು ಸಿಬ್ಬಂದಿಗಳಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿತ್ತು.
ಕೋವಿಡ್ ವೈರಸ್ ಹಿನ್ನೆಲೆಯಲ್ಲಿ ಕಳೆದ ಸುಗ್ಗಿ ಮಾರಿಪೂಜೆಯಲ್ಲೂ ಸಾರ್ವಜನಿಕರ ಭೇಟಿಗೆ ಅವಕಾಶ ನಿರಾಕರಿಸಿ ಸಂಪ್ರಧಾಯಕ್ಕಷ್ಟೇ ಸೀಮಿತಗೊಳಿಸಲಾಗಿದ್ದು, ಆಟಿ ಮಾರಿಪೂಜೆಯನ್ನೂ ಅದೇ ಮಾದರಿಯಲ್ಲಿ ಆಚರಿಸಲಾಯಿತು.
ಸುಗ್ಗಿ ಮತ್ತು ಆಟಿಯ ಕಾಲಾವಧಿ ಮಾರಿಪೂಜೆಯಲ್ಲಿ ಭಕ್ತಾಧಿಗಳು ಸಲ್ಲಿಸದೇ ಬಾಕಿಯುಳಿದಿರುವ ವಿವಿಧ ಹರಕೆಗಳನ್ನು ಮುಂದಿನ ಜಾರ್ದೆ ಮಾರಿಪೂಜೆಯಲ್ಲಿ ಸಮರ್ಪಿಸಿ, ದೇವರ ಕೃಪೆಗೆ ಪಾತ್ರರಾಗುವಂತೆ ಹೊಸ ಮಾರಿಗುಡಿ ದೇವಸ್ಥಾನದ ಆಡಳಿತಾಧಿಕಾರಿ ರವಿಕುಮಾರ್, ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ ಕುಮಾರ್ ಶೆಟ್ಟಿ, ಹಳೆ ಮಾರಿಗುಡಿ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಸಾದ್ ಶೆಣೈ, ಮೂರನೇ ಮಾರಿಗುಡಿಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮೋಹನ್ ಬಂಗೇರ ತಿಳಿಸಿದ್ದಾರೆ.