ಬೆಂಗಳೂರು: ಪ್ಯಾನ್ ಇಂಡಿಯಾದಲ್ಲಿ ದೊಡ್ಡ ಹಿಟ್ ಆದ ರಿಷಬ್ ಶೆಟ್ಟಿ ಅವರ ʼಕಾಂತಾರʼ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಸಿನಿಮಾಕ್ಕೆ ಯಾರು ಯಾರು ಎಷ್ಟು ಸಂಭಾವನೆ ಪಡೆದುಕೊಂಡಿದ್ದಾರೆಂದು ನ್ಯೂಸ್ 18 ವೆಬ್ ಸೈಟ್ ವರದಿ ಮಾಡಿದೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿರುವ ʼಕಾಂತಾರʼ ಕನ್ನಡ ಮಾತ್ರವಲ್ಲದೆ, ಇತರ ಭಾಷೆಯ ಮಾರುಕಟ್ಟೆಯಲ್ಲೂ ಭರ್ಜರಿ ಗಳಿಕೆ ಮಾಡಿದೆ. ಸಿನಿಮಾಕ್ಕೆ ಎಲ್ಲೆಡೆ ಸಿಕ್ಕ ಪ್ರತಿಕ್ರಿಯೆಯಿಂದ ಇದರ ಎರಡನೇ ಭಾಗ ಬರಬಹುದು ಎಂದು ಸಿನಿ ಪ್ರಿಯರು ಊಹಿಸಿದ್ದಾರೆ. ಕಾಂತಾರ ಭಾಗ-2 ಬರುವುದು ಅಧಿಕೃತಗೊಂಡಿಲ್ಲ. ಈ ಬಗ್ಗೆ ಚರ್ಚೆಗಳಾಗಿವಷ್ಟೇ.
ಕಾಂತಾರದಲ್ಲಿ ʼಶಿವʼ,ʼಗುರುವʼ,ʼಮುರಳಿಧರ್, ʼದೇವೇಂದ್ರʼ ,’ಸುಧಾಕರʼ ನಂತಹ ಪ್ರಮುಖ ಪಾತ್ರಗಳನ್ನು ಮಾಡಲು ಕಲಾವಿದರು ಎಷ್ಟು ಸಂಭಾವನೆ ಪಡೆದುಕೊಂಡಿದ್ದರು ಎನ್ನುವುದು ರಿವೀಲ್ ಆಗಿದೆ.
ಫಾರೆಸ್ಟ್ ಆಫೀಸರ್ ಆಗಿ ಮುರಳಿ ಪಾತ್ರವನ್ನು ಮಾಡಿದ್ದ ಕಿಶೋರ್ ಅವರು ತನ್ನ ಪಾತ್ರಕ್ಕಾಗಿ 1 ಕೋಟಿ.ರೂ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ. ಸುಧಾಕರನ ಪಾತ್ರವನ್ನು ಮಾಡಿದ್ದ ಪ್ರಮೋದ್ ಶೆಟ್ಟಿ ಅವರು 60 ಲಕ್ಷ ರೂ.ವನ್ನು ಪಾತ್ರಕ್ಕಾಗಿ ಪಡೆದುಕೊಂಡಿದ್ದಾರೆ. ಇನ್ನು ಸಿನಿಮಾದ ಮತ್ತೊಂದು ಪ್ರಮುಖ ಪಾತ್ರ ಧಣಿ ದೇವೆಂದ್ರನಾಗಿ ನಟಿಸಿದ್ದ ಅಚ್ಯುತ್ ಕುಮಾರ್ ಅವರು 40 ಲಕ್ಷ ರೂ.ವನ್ನು ಪಡೆದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಇನ್ನು ತನ್ನ ನಟನೆಯಿಂದ ಗಮನ ಸೆಳೆದ ನಾಯಕಿ ಸಪ್ತಮಿ ಗೌಡ ಅವರು ತಮ್ಮ ಪಾತ್ರಕ್ಕಾಗಿ 1 ಕೋಟಿ ರೂ.ವನ್ನು ಪಡೆದುಕೊಂಡಿದ್ದಾರೆ. ನಿರ್ದೇಶನ ಹಾಗೂ ನಟನೆ ಎರಡರಲ್ಲೂ ಜವಾಬ್ದಾರಿ ನಿಭಾಯಿಸಿದ ರಿಷಬ್ ಶೆಟ್ಟಿ ʼಶಿವʼನ ಪಾತ್ರವನ್ನು ಮಾಡಲು 4 ಕೋಟಿ ರೂ.ವನ್ನು ಪಡೆದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
16 ಕೋಟಿ ರೂ. ಬಜೆಟ್ ನಲ್ಲಿ ತಯಾರಾದ ʼಕಾಂತಾರʼ 400 ಕೋಟಿಗೂ ಅಧಿಕ ಹಣವನ್ನು ಗಳಿಸಿದೆ.