ಬಲ್ಲಿಯಾ (ಯುಪಿ): ಇಲ್ಲಿ ಅತಿಕ್ರಮಿತ ಭೂಮಿಯಲ್ಲಿ ನಿರ್ಮಿಸಲಾಗಿದೆ ಎನ್ನಲಾದ ಬಿಜೆಪಿ ಕ್ಯಾಂಪ್ ಕಚೇರಿಯನ್ನು ಡಿಸೆಂಬರ್ 17 ರಂದು ನಗರಪಾಲಿಕೆಯ ತಂಡವು ಬುಲ್ಡೋಜರ್ ಬಳಸಿ ತೆರವು ಮಾಡಿದೆ.
ಬಲ್ಲಿಯಾ ನಗರ ಪಾಲಿಕೆ ಪರಿಷತ್, ಜಿಲ್ಲಾಡಳಿತ ಮತ್ತು ಪೊಲೀಸರ ಜಂಟಿ ತಂಡ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಸ್ಥಳದಲ್ಲಿ ಭಾರೀ ಪೊಲೀಸ್ ಮತ್ತು ಸರಕಾರಿ ಸಿಬಂದಿಗಳನ್ನು ನಿಯೋಜಿಸಲಾಗಿತ್ತು.
ಅಧಿಕೃತ ಮೂಲಗಳ ಪ್ರಕಾರ, ತಂಡವು ಚಿಟ್ಟು ಪಾಂಡೆ ಪ್ರದೇಶದ ಇಂದಿರಾ ಮಾರ್ಕೆಟ್ ಪ್ರದೇಶದಲ್ಲಿದ್ದ ಬಿಜೆಪಿ ಶಿಬಿರ ಕಚೇರಿಯನ್ನು ಬುಲ್ಡೋಜರ್‌ಗಳನ್ನು ಬಳಸಿ ನೆಲಸಮ ಮಾಡಿದೆ. ಬುಲ್ಡೋಜರ್ ಕ್ರಮವನ್ನು ದೃಢಪಡಿಸಿದ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ರಾಜೇಶ್ ಕುಮಾರ್, ಅತಿಕ್ರಮಣವನ್ನು ತೆರವು ಮಾಡಲಾಗಿದೆ ಎಂದು ಹೇಳಿದರು.
ಅಧಿಕಾರಿಗಳ ಈ ನಡೆ ಸ್ಥಳೀಯ ಬಿಜೆಪಿ ಮುಖಂಡರಿಂದ ಟೀಕೆಗೆ ಗುರಿಯಾಗಿದೆ.ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುರೇಂದ್ರ ಸಿಂಗ್ ಈ ಕ್ರಮವನ್ನು ಖಂಡಿಸಿದ್ದು, ಸುಮಾರು ನಾಲ್ಕು ದಶಕಗಳಿಂದ ಕಚೇರಿ ಇಲ್ಲಿದೆ ಎಂದಿದ್ದಾರೆ.
“ಆಡಳಿತವು ನಮ್ಮ ಕಚೇರಿಯನ್ನು ತಪ್ಪಾಗಿ ಗುರಿಪಡಿಸಿದೆ. ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಸಿಟಿ ಮ್ಯಾಜಿಸ್ಟ್ರೇಟ್ ಅವರ ಭ್ರಷ್ಟಾಚಾರ ಮತ್ತು ಅಪ್ರಾಮಾಣಿಕತೆಯ ತೀವ್ರ ವಿಷಾದನೀಯ ಕೃತ್ಯವಾಗಿದೆ ಎಂದು ಸಿಂಗ್ ಆರೋಪಿಸಿದ್ದಾರೆ.