Advertisement

ಕಣ್ಣೂರು ಏರ್‌ಪೋರ್ಟ್‌ನಿಂದ ರಾಜ್ಯಕ್ಕೆ ಅನುಕೂಲ

06:00 AM Aug 04, 2018 | Team Udayavani |

ಬೆಂಗಳೂರು: ಕೇರಳದ ಕಣ್ಣೂರಿನಲ್ಲಿ ನಿರ್ಮಾಣವಾಗುತ್ತಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಕ್ಷಿಣ ಕರ್ನಾಟಕಕ್ಕೂ ಅನುಕೂಲವಾಗಲಿದೆ. ಹೊಸ ವಿಮಾನ ನಿಲ್ದಾಣ ಕಣ್ಣೂರಿನಿಂದ 26 ಕಿಮೀ ದೂರವಿದ್ದರೆ, ಮಡಿಕೇರಿಯಿಂದ 90 ಕಿಮೀ ದೂರದಲ್ಲಿದೆ.

Advertisement

ಕಣ್ಣೂರಿನ ಹೊಸ ವಿಮಾನ ನಿಲ್ದಾಣದಿಂದ “ಭಾರತದ ಸ್ಕಾಟ್ಲೆಂಡ್‌’ ಮತ್ತು “ಅರಮನೆಗಳ ನಗರಿ’ ಎಂದು ಹೆಸರಾಗಿರುವ ಮೈಸೂರಿಗೆ ಹೆಚ್ಚಿನ ಅನುಕೂಲವಾಗಲಿದೆ. ಮಡಿಕೇರಿ, ಮೈಸೂರು ಮತ್ತು ದಕ್ಷಿಣ ಕರ್ನಾಟಕದ ಪ್ರವಾಸಿ ಸ್ಥಳಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರಲು ನೆರವಾಗಲಿದೆ. ಇದರ ಜತೆಗೆ ಈ ಪ್ರದೇಶದಲ್ಲಿ ಬೆಳೆಯಲಾಗುವ ಕಾಫಿ, ಸಾಂಬಾರ ಪದಾರ್ಥಗಳು, ಹೂವುಗಳು,  ಮೀನು ಮತ್ತು ಮಾಂಸದ ಉತ್ಪನ್ನಗಳು, ಔಷಧೋತ್ಪನ್ನಗಳನ್ನು ಭಾರಿ ಪ್ರಮಾಣದಲ್ಲಿ ರಫ್ತು ಮಾಡಲೂ ಅನುಕೂಲವಾಗಲಿದೆ. ಅದು ಈ ಪ್ರದೇಶದ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗಳಿಗೂ ಸಹಾಯಕವಾಗಲಿದೆ.

ಹೊಸ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಅತ್ಯಾಧುನಿಕ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಯಾನಕ್ಕಾಗಿ 97 ಸಾವಿರ ಚದರ ಮೀಟರ್‌ ಏಕೀಕೃತ ಟರ್ಮಿನಲ್‌ ಕಟ್ಟಡವಿದೆ. ಸದ್ಯ ಅದು 3,050 ಮೀಟರ್‌ ರನ್‌ವೇ ಹೊಂದಿದ್ದು, ಮುಂದಿನ ದಿನಗಳಲ್ಲಿ ಅದನ್ನು 4 ಸಾವಿರ ಮೀಟರ್‌ಗೆ ವಿಸ್ತರಿಸಲಾಗುತ್ತದೆ.

ಕಾರ್ಗೋ ಕಾಂಪ್ಲೆಕ್ಸ್‌: ಇದರ ಜತೆಗೆ ಸರಕು ಸಾಗಣೆ ವಿಭಾಗದಲ್ಲಿ ಹೆಚ್ಚಿನ ಪ್ರಮಾಣದ ಬೆಳವಣಿಗೆ ಸಾಧಿಸುವ ನಿರೀಕ್ಷೆ ಇರುವುದರಿಂದ 1.05 ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದಿರುವ ಕಾರ್ಗೊ ಕಾಂಪ್ಲೆಕ್ಸ್‌ ನಿರ್ಮಿಸಲಾಗುತ್ತಿದೆ. ಅದರಲ್ಲಿ ಬೇಗನೆ ಹಾಳಾಗುವ ವಸ್ತುಗಳಾದ ಹಣ್ಣು, ತರಕಾರಿ, ಹೂವುಗಳನ್ನು ಜತನವಾಗಿ ನಿರ್ವಹಿಸುವ ಮತ್ತು ಇತರ ವಸ್ತುಗಳನ್ನು ನಿರ್ವಹಿಸುವ ವಿಭಾಗವನ್ನು ಮಾಡಲಾಗಿದೆ. ಅದು ಪೂರ್ತಿಗೊಂಡ ಬಳಿಕ ಕಣ್ಣೂರು ಏರ್‌ಪೋರ್ಟ್‌ನಲ್ಲಿರುವ ಕಾರ್ಗೊ ಕಾಂಪ್ಲೆಕ್ಸ್‌ ಆ ಪ್ರದೇಶದ ಅತ್ಯಂತ ದೊಡ್ಡ ಸ್ಥಳವಾಗಲಿದೆ.

24 ಚೆಕ್‌ಇನ್‌ ಕೌಂಟರ್‌ಗಳು: ಪ್ರಯಾಣಿಕರ ಅನುಕೂಲಕ್ಕಾಗಿ 24 ಚೆಕ್‌ ಇನ್‌ ಕೌಂಟರ್‌ಗಳನ್ನು ಆರಂಭಿಸಲಾಗಿದೆ. ಅಗತ್ಯ ಬಿದ್ದರೆ ಏಕಕಾಲಕ್ಕೆ 48 ಚೆಕ್‌ ಇನ್‌ ಕೌಂಟರ್‌ಗಳನ್ನೂ ತೆರೆಯುವ ವ್ಯವಸ್ಥೆಯೂ ಇರಲಿದೆ. ಇಂಥ ವ್ಯವಸ್ಥೆ ಕೇರಳದ ವಿಮಾನ ನಿಲ್ದಾಣಗಳಲ್ಲಿಯೇ ಮೊದಲು. ಜತೆಗೆ 2 ಸ್ವಯಂ ಬ್ಯಾಗೇಜ್‌ ಡ್ರಾಪ್‌ ಕೌಂಟರ್‌ಗಳನ್ನೂ ತೆರೆಯಲಾಗುತ್ತದೆ. ಜತೆಗೆ ಸೆಲ್ಫ್ ಚೆಕ್‌ ಇನ್‌ ಮಷೀನ್‌ಗಳನ್ನೂ ಆರಂಭಿಸಲಾಗುತ್ತದೆ. ಈ ಮೂಲಕ ಪ್ರಯಾಣಿಕರಿಗೆ ಹೆಚ್ಚಿನ ವಿಳಂಬವಾಗದೆ, ಕ್ಷಿಪ್ರವಾಗಿ ಪ್ರಕ್ರಿಯೆ ಮುಗಿಸಲು ಅನುಕೂಲ ಕಲ್ಪಿಸಲಾಗುತ್ತದೆ.

Advertisement

ಸದ್ಯ ಸಂಪೂರ್ಣ ವ್ಯವಸ್ಥೆಗಳಿರುವ 20 ಕೊಠಡಿಗಳಿರುವ ಹೊಟೇಲ್‌ ಮತ್ತು ಟರ್ಮಿನಲ್‌ನಲ್ಲಿಯೇ ಶವರ್‌ ವ್ಯವಸ್ಥೆ ಇರುವ ರೂಮ್‌ಗಳನ್ನು ಪ್ರಯಾಣಿಕರಿಗಾಗಿ ಒದಗಿಸಲಾಗುತ್ತದೆ. ವಿಮಾನ ನಿಲ್ದಾಣದ ಸನಿಹದಲ್ಲಿಯೇ ಶೀಘ್ರವೇ ಒಂದು ಪಂಚತಾರಾ ಮತ್ತು ಕಡಿಮೆ ದರ್ಜೆಯ ಇತರ ಹೋಟೆಲ್‌ಗ‌ಳು ನಿರ್ಮಾಣವಾಗಲಿವೆ.

ವಿಶ್ವದರ್ಜೆಯ ವ್ಯವಸ್ಥೆಗಳು
ಹೊಸ ನಿಲ್ದಾಣದಲ್ಲಿ ವಿಮಾನಗಳ ಟೇಕಾಫ್, ಲ್ಯಾಂಡಿಂಗ್‌ಗಾಗಿ ವಿಶ್ವದರ್ಜೆಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಮಂಜು, ಧಾರಾಕಾರ ಮಳೆಯಂಥ ಪ್ರತಿಕೂಲ ಹವಾಮಾನ ವ್ಯವಸ್ಥೆಯಲ್ಲಿ ವಿಮಾನ ಸಂಚಾರಕ್ಕೆ ಅನುಕೂಲವಾಗುವ ವ್ಯವಸ್ಥೆಯಾಗಿರುವ ಕೆಟಗರಿ 1ನೇ ದರ್ಜೆಯ ಇನ್‌ಸ್ಟ್ರೆಮೆಂಟಲ್‌ ಲ್ಯಾಂಡಿಂಗ್‌ ಸಿಸ್ಟಮ್‌ (ಐಎಲ್‌ಎಸ್‌), ಕೆಟಗರಿ 9 ದರ್ಜೆಯ ಅಗ್ನಿಶಾಮಕ ವ್ಯವಸ್ಥೆಯಾಗಿರುವ ಏರ್‌ಕ್ರಾಫ್ಟ್ ರೆಸ್ಕೂé ಫೈರ್‌ ಫೈಟಿಂಗ್‌ (ಎಆರ್‌ಎಫ್ಎಫ್) ಅನ್ನು ಅಳವಡಿಸಲಾಗುತ್ತದೆ.

ಕೇಂದ್ರ ಕೈಗಾರಿಕಾ ಭದ್ರತಾ ದಳ (ಸಿಐಎಸ್‌ಎಫ್) ಏರ್‌ಪೋರ್ಟ್‌ನ ಭದ್ರತೆಯ ಉಸ್ತುವಾರಿ ನೋಡಿಕೊಳ್ಳಲಿದೆ. ಒಟ್ಟಿನಲ್ಲಿ ಶೀಘ್ರದಲ್ಲಿಯೇ ಆರಂಭವಾಗುವ ಈ ಏರ್‌ಪೋರ್ಟ್‌ ಉತ್ತರ ಕೇರಳ ಮತ್ತು ದಕ್ಷಿಣ ಕರ್ನಾಟಕದ ಸಂಪರ್ಕದ ಸೇತುವಾಗುವುದರಲ್ಲಿ ಅನುಮಾನವೇ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next