ಮೂರು ದಶಕಗಳ ನನ್ನ ವೃತ್ತಿ ಜೀವನದಲ್ಲಿ ಬಹುತೇಕ ಕವಿಗಳ, ಸಾಹಿತಿಗಳ ಸಾಹಿತ್ಯಕ್ಕೆ ನಾನು ಧ್ವನಿಯಾಗಿದ್ದೇನೆ. ಪ್ರತಿ ಸಾಲುಗಳನ್ನು ಜೀವಿಸಿ, ಅನುಭವಿಸಿ ಹಾಡುವುದಷ್ಟೇ ಅಲ್ಲದೇ, ಆ ಭಾವ ಜನರ ಮನದಲ್ಲಿ ಬೇರೂರುವುದಕ್ಕೆ ಕಾರಣ ಕನ್ನಡ. ಕನ್ನಡದ ಹಾಡುಗಳನ್ನ ಆಹ್ಲಾದಿಸೋ, ಪ್ರೀತಿಸೋ ಈ ಜನರ ಖುಷಿಯನ್ನ ಕಣಿ¤ಂಬಿಕೊಳ್ಳೋ ಸೌಭಾಗ್ಯ ಸಿಕ್ಕಿದೆ. ಬಹುಶಃ ಬೇರಾವುದೇ ವೃತ್ತಿ ಕ್ಷೇತ್ರದಲ್ಲೂ ನನಗೆ ಇಂಥ ಸಂತೃಪ್ತಿ ಸಿಗುತ್ತಿರಲಿಲ್ಲವೇನೋ, ಅದನ್ನು ದಕ್ಕಿಸಿಕೊಟ್ಟಿರುವುದು ಕನ್ನಡ. ದೇಶ- ವಿದೇಶಗಳನ್ನ ಸುತ್ತಿ, ಸಂಗೀತ ಪ್ರದರ್ಶನ ನೀಡಿರುವ ನನಗೆ ಕನ್ನಡ ಎಂದಿಗೂ ಮೊದಲು…!
ಯಾವುದೇ ಭಾಷೆ, ಕೋಶಗಳನ್ನ ಓದಿದರೂ ನಮ್ಮ ಯೋಚನಾಲಹರಿ, ಚಿಂತನೆಗಳು ಸಾಗುವುದು ಕನ್ನಡದೊಂದಿಗೆ ಮಾತ್ರ.. ಎಲ್ಲಿ ಯಾವುದೇ ಭಾಷಿಗರಿಗಾಗಿ, ಅವರದ್ದೇ ಭಾಷೆಗಳಲ್ಲಿ ಹಾಡುವಾಗಲೂ ಕನ್ನಡದೊಂದು ಹಾಡು ಹಾಡುವಿರಾ? ಎನ್ನುವ ಮಾತೇ ನನಗೆ ಅಪಾರ ಸಂತಸವನ್ನ ನೀಡಿದ್ದಿದೆ. ಕನ್ನಡದ ಹಾಡು ಕೇಳುಗರಿಗೆ ಬರೀ ಮಧುರವಾಗಿ ಕೇಳಿಸುವುದು ಮಾತ್ರವಲ್ಲ , ಹೃದಯಗಳನ್ನು ಬೆಸೆಯುವ, ಆಪ್ತವನ್ನಾಗಿಸುವ ವಿಶೇಷ ಶಕ್ತಿಯೂ ಕನ್ನಡಕ್ಕಿದೆ.
ನಮ್ಮ ನಾಡಿಗೆ ಬಂದವರನ್ನ ತೆರೆದ ತೋಳುಗಳಲ್ಲಿ ಅಪ್ಪುವ ಪ್ರೀತಿ ಕನ್ನಡಿಗರಿಗಿದೆ. ಮಹಾನ್ ಸಂಗೀತಗಾರರಿಗೆ ವೇದಿಕೆ ನೀಡಿ, ಪ್ರೀತಿ ನೀಡಿ, ಬದುಕು ನೀಡಿದ್ದು ಇದೇ ಕರುನಾಡು. ಇಲ್ಲಿಗೆ ಬಂದವರೂ ಅದೇ ಪ್ರೀತಿಯೊಂದಿಗೆ ನಮ್ಮ ಭಾಷೆಯನ್ನ ಕಲಿತು ಬೆರೆತರೆ ಅದಕ್ಕಿಂತ ಸಂತಸ ಮತ್ತೂಂದಿಲ್ಲ. ಕನ್ನಡದ ಈ ನಾಡಿನಲ್ಲಿ ತ್ಯಾಗ, ಭೋಗ, ವಿದ್ಯೆ, ಸಂಗೀತ -ಗೋಷ್ಠಿಗಳ ಸಂತೋಷ ಸೌಖ್ಯಕ್ಕೆ ಅರ್ಹರಾಗಿರುವ ಮನುಷ್ಯರೇ ನಿಜವಾದ ಮನುಷ್ಯರು! ಇಲ್ಲಿ ಮನುಷ್ಯನಾಗಿ ಹುಟ್ಟುವುದೇ ಅದೃಷ್ಟ! ಅದಾಗದಿದ್ದರೂ ದುಂಬಿಯಾಗಿಯೋ, ಕೋಗಿಲೆಯಾಗಿಯೋ ಹುಟ್ಟಬೇಕು ಅಂತ ಮಹಾನ್ ಕವಿ, ಆದಿ ಕವಿ ಪಂಪ ಹೇಳಿದ್ದಾರೆ. ಅಂತಹದರಲ್ಲಿ ಈ ಭವ್ಯ ನಾಡಿನಲ್ಲಿ ಸಂಗೀತಗಾತಿಯಾಗಿಯೇ ನಾನು ಹುಟ್ಟದ್ದೀನಿ, ಅದು ನನ್ನ ಸುಕೃತ. ಮತ್ತೂಂದು ಜನ್ಮವೊಂದಿದ್ದರೆ ಅದೂ ಈ ನಾಡಿನಲ್ಲೇ ಸಿಗಲಿ ಅನ್ನೋದು ನನ್ನ ಅಭಿಲಾಷೆ. ಈ ನೆಲ, ಭಾಷೆ, ಕನ್ನಡಿಗರು ನನಗೆ ಅಪಾರ ಪ್ರೀತಿ, ಗೌರವ, ಗಟ್ಟಿಯಾದ ನೆಲೆ, ಬದುಕನ್ನ ಕೊಟ್ಟಿದ್ದಾರೆ. ಅದಕ್ಕೆಂದಿಗೂ ನಾನು ಋಣಿ! ಕನ್ನಡದ ಶುಭ ಸುವರ್ಣ ಮಹೋತ್ಸವದ ಈ ಸಂದರ್ಭದಲ್ಲಿ ಮೊದಲು ನಮ್ಮ ನಮ್ಮ ಮನಗಳಲ್ಲಿ- ಮನೆಗಳಿಂದಲೇ ಕನ್ನಡದ ಮೇಲಿನ ಪ್ರೀತಿ ಪಸರಿಸಲಿ ಅನ್ನೋದು ನನ್ನ ಕೋರಿಕೆ.
-ಅರ್ಚನಾ ಉಡುಪ, ಖ್ಯಾತ ಹಿನ್ನೆಲೆ ಗಾಯಕಿ