ಬೆಂಗಳೂರು: ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ (ಕೆಎಸ್‌ಆರ್)ದಲ್ಲಿ ಅಳವಡಿಸಿದ ಕೈತೊಳೆಯುವ ಕಿಯೋಸ್ಕ್ ನ ಮಾಹಿತಿ ಫಲಕದಲ್ಲಿ ಕಡೆಗೂ ಕನ್ನಡಕ್ಕೆ ಸ್ಥಾನ ಸಿಕ್ಕಿದೆ!
ಕೆಲ ದಿನಗಳ ಹಿಂದಷ್ಟೇ ರೈಲು ನಿಲ್ದಾಣದಲ್ಲಿ ಕೈತೊಳೆಯುವ ಕಿಯೋಸ್ಕ್ ಅಳವಡಿಸಲಾಗಿತ್ತು. ಈ ಕಿಯೋಸ್ಕ್ ನಲ್ಲಿ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾಹಿತಿ ಫಲಕ ಅಳವಡಿಸಲಾಗಿತ್ತು. ಕನ್ನಡ ಕಡೆಗಣಿಸಲ್ಪಟ್ಟಿತ್ತು. ಇದರ ವಿರುದ್ಧ ಟ್ವಿಟರ್‌ನಲ್ಲಿ ದನಿ ಎತ್ತಿದ್ದ ಕನ್ನಡಿಗರು, ಪ್ರಾದೇಶಿಕ ಭಾಷೆಯನ್ನು ಕಡೆಗಣಿಸಿರುವುದಕ್ಕೆ ಕಿಡಿಕಾರಿದ್ದರು. ಇದಕ್ಕೆ ಮಣಿದ ನೈಋತ್ಯ ರೈಲ್ವೆ ಬೆಂಗಳೂರು ವಿಭಾಗ, ಕಿಯೋಸ್ಕ್ ನಲ್ಲಿ ಹಿಂದಿ, ಇಂಗ್ಲಿಷ್ ಜತೆಗೆ ಕನ್ನಡದಲ್ಲೂ ಮಾಹಿತಿ ಫಲಕ ಅಳವಡಿಸಿದೆ.
ಆಗಿದ್ದೇನು?: ಟ್ವಿಟ್ಟಿಗರೊಬ್ಬರು “ವೈ ಹಿಂದಿ’ ಎಂದು ಟ್ವಿಟ್ ಮಾಡಿದ್ದರು. ಇದಕ್ಕೆ “ದಿಸ್ ಈಸ್ ಇಂಡಿಯಾ’ ಎಂದು ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಉದ್ಧಟತನದ ಉತ್ತರ ನೀಡಿದ್ದರು. ಇದರಿಂದ ಕೆರಳಿದ್ದ ಟ್ವಿಟ್ಟಿಗರು, “ಇದು ಕರ್ನಾಟಕ. ಇಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಸ್ಥಳೀಯ ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಮಾಹಿತಿ ನೀಡಬೇಕು. ಹಿಂದಿ ರಾಷ್ಟ್ರಭಾಷೆ ಅಲ್ಲ. ಕನ್ನಡಕ್ಕೆ ಇಲ್ಲದ ಪ್ರಾಮುಖ್ಯತೆ ಹಿಂದಿಗೆ ಏಕೆ’ ಎಂದು ತರಾಟೆಗೆ ತೆಗೆದುಕೊಂಡಿದ್ದರು. ತ್ರಿಭಾಷಾ ಸೂತ್ರ ಅನುಸರಿಸಬೇಕು ಎಂದು ನಿಯಮ ಹೇಳುತ್ತದೆ. ಹೀಗಾಗಿದ್ದರೂ ರೈಲ್ವೆ ಸ್ಥಳೀಯ ಭಾಷೆ ಕನ್ನಡವನ್ನು ಕಡೆಗಣಿಸಿರುವುದು ಸರಿಯಲ್ಲ. ಭಾರತ ಪೂರ್ತಿ ಹಿಂದಿ ಮಾತನಾಡುವುದಿಲ್ಲ. ಹಿಂದಿ ಏಕೆ ಎಂದು ಕೇಳಿದಾಗ ದೇಶಭಕ್ತಿ, ಭಾರತ ಎನ್ನುವುದನ್ನು ನಿಲ್ಲಿಸಿ. ದೇಶಭಕ್ತಿಗೂ ಹಿಂದಿಗೂ ಸಂಬಂಧವಿಲ್ಲ. ಕರ್ನಾಟಕದಲ್ಲಿ ಕನ್ನಡದಲ್ಲೇ ಮಾಹಿತಿ ನೀಡಬೇಕು ಎಂದು ಟ್ವಿಟ್ಟಿಗರು ರೈಲ್ವೆ ಇಲಾಖೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.
ಕನ್ನಡಕ್ಕೆ ಆದ್ಯತೆ: ಟ್ವಿಟರ್‌ನಲ್ಲಿ ಸಾರ್ವಜನಿಕರ ಆಕ್ರೋಶ ಹೆಚ್ಚಾದ ಪರಿಣಾಮ ಎಚ್ಚೆತ್ತ ರೈಲ್ವೆ, ಇದೀಗ ಕಿಯೋಸ್ಕ್ ಗೆ ಕನ್ನಡ, ಹಿಂದಿ, ಇಂಗ್ಲಿಷ್ ಈ ಮೂರು ಭಾಷೆಯ ಮಾಹಿತಿ ಫಲಕ ಅಳವಡಿಸಿದೆ. ಈ ಮಾಹಿತಿ ಫಲಕದಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ ನೀಡಲಾಗಿದೆ. ಈ ಹಿಂದೆಯೂ ರೈಲ್ವೆ ಹಲವು ಬಾರಿ ಕನ್ನಡವನ್ನು ಕಡೆಗಣಿಸಿತ್ತು. ಪ್ರತಿ ಬಾರಿಯೂ ಸ್ಥಳೀಯರು ಹಿಂದಿ ಹೇರಿಕೆ ವಿರುದ್ಧ ದನಿ ಎತ್ತಿದ್ದರು.