ಮುಂಬಯಿ: ಕೇಂದ್ರ ಸರಕಾರಕ್ಕೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸ್ಥಳೀಯರಿಗೆ ಪ್ರಾತಿನಿಧ್ಯ ಕಲ್ಪಿಸುವ ಕುರಿತಂತೆ ಪರಿಷ್ಕೃತ ನೀತಿಯನ್ನು ಹೊರಡಿಸುವಂತೆ ಪ್ರಸ್ತಾವನೆಯನ್ನು ಸಲ್ಲಿಸಲು ಬಂದಿದ್ದ ಕರ್ನಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್. ಜಿ. ಸಿದ್ದœರಾಮಯ್ಯ ನೇತೃತ್ವದ ನಿಯೋಗವು ಪ್ರತಿಷ್ಠಿತ ದೆಹಲಿ ಕರ್ನಾಟಕ ಸಂಘಕ್ಕೆ ಸೆ. 7 ರಂದು ಭೇಟಿ ನೀಡಿ ದೆಹಲಿ ತುಳು-ಕನ್ನಡಿಗರೊಂದಿಗೆ ತಮ್ಮ ವಿಚಾರಗಳನ್ನು ವಿನಿಮಯ ಮಾಡಿಕೊಂಡಿತು.
ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಅವರು, ದೆಹಲಿಗೆ ಬಂದ ನಿಯೋಗವನ್ನು ಸ್ವಾಗತಿಸಿ ದೆಹಲಿ ಕರ್ನಾಟಕ ಸಂಘ ಕರ್ನಾಟಕದಿಂದ ಬರುವ ಎಲ್ಲ ಸಾಹಿತಿಗಳನ್ನು, ಕಲಾವಿದರನ್ನು, ಬುದ್ಧಿ ಜೀವಿಗಳನ್ನು ಸಂಘಕ್ಕೆ ಕರೆದು ಅಭಿನಂದಿಸುವುದರ ಜತೆಗೆ ಸಂಘ ಏನು ಮಾಡುತ್ತಿದೆ ಮತ್ತು ಪರಸ್ಪರ ನಾವು ಏನು ಮಾಡಬಹುದು ಎನ್ನುವುದನ್ನು ನಿಯೋಗದ ಜತೆಗೆ ಹಂಚಿಕೊಂಡರು.
ಪ್ರಾಧಿಕಾರದ ಅಧ್ಯಕ್ಷ ಎಸ್. ಜಿ. ಸಿದ್ಧರಾಮಯ್ಯ ಅವರು ಮಾತನಾಡಿ, ದೆಹಲಿ ಕರ್ನಾಟಕ ಸಂಘವು ರಾಜಧಾನಿಯಲ್ಲಿ ಕನ್ನಡದ ಬಗ್ಗೆ ಅತ್ಯುತ್ತಮವಾದ ಕೆಲಸಗಳನ್ನು ಮಾಡುತ್ತಿದೆ. ಕನ್ನಡ ಮಕ್ಕಳಿಗೆ ಕನ್ನಡದ ಬಗ್ಗೆ ಅಭಿಮಾನ ಮೂಡಿಸುವಂತಹ ಕೆಲಸವನ್ನು ಇನ್ನೂ ಹೆಚ್ಚು ಮಾಡಬೇಕು ಹಾಗೂ ಬೇರೆ ಬೇರೆ ಭಾಷಾ ವಲಯಕ್ಕೆ ಕನ್ನಡದ ಕುರಿತು ಪ್ರಚಾರ ಮಾಡುವಂತಹ ಕೆಲಸವನ್ನು ದೆಹಲಿ ಕರ್ನಾಟಕ ಸಂಘ ಇನ್ನೂ ಅಧಿಕವಾಗಿ ಮಾಡಬೇಕು. ಇದಕ್ಕೆ ಪ್ರಾಧಿಕಾರ ಸಂಪೂರ್ಣ ಸಹಕಾರ ನೀಡುತ್ತದೆ. ಕನ್ನಡದ ವಿಚಾರ ಭಾರತದ ಎಲ್ಲ ಭಾಷೆಗಳಿಗೆ ತಲುಪುವಂತಹ ಕೆಲಸವನ್ನೂ ಮಾಡಬೇಕು. ಭಾರತದ ಬೇರೆ ಎಲ್ಲಿಯೂ ನಡೆಯದಂತಹ ದೊಡ್ಡ ಕ್ರಾಂತಿಗಳು ಕರ್ನಾಟಕದಲ್ಲಿ ನಡೆದಿವೆ. ದೊಡ್ಡ ದೊಡ್ಡ ಕವಿಗಳು ಆಗಿ ಹೋಗಿದ್ದಾರೆ. ಇವರೆಲ್ಲರೂ ಬೇರೆ ಬೇರೆ ಭಾಷೆಯ ಜನರಿಗೆ ತಿಳಿಯುವಂತಹ ಕೆಲಸವಾಗಬೇಕು. ತಮ್ಮ ಎಲ್ಲ ಪ್ರಯತ್ನಕ್ಕೆ ನಾವು ಸ್ಪಂದಿಸುತ್ತೇವೆ ಎಂದು ನುಡಿದು, ದೆಹಲಿ ಕರ್ನಾಟಕ ಸಂಘ ಒಂದು ಆಪ್ತವಾದ ಸಂಬಂಧವನ್ನು ಸಾಹಿತ್ಯ ಲೋಕದೊಂದಿಗೆ ಇಟ್ಟುಕೊಂಡಿದೆ. ಸಂಘದ ಅಧ್ಯಕ್ಷರು ಹೇಳಿದ ಹಾಗೆ ಅವರ ಎಲ್ಲ ಹೊಸ ಯೋಜನೆಗಳು ಕೂಡಾ ಅಭಿನಂದನಾರ್ಹವಾಗಿವೆ ಎಂದರು.
ಈ ನಿಯೋಗದಲ್ಲಿ ಎಸ್. ಜಿ. ಸಿದ್ಧರಾಮಯ್ಯ, ಪ್ರೊ| ಎಸ್. ಎಲ್. ಭೈರಪ್ಪ, ಪ್ರೊ| ಮರುಳ ಸಿದ್ದಪ್ಪ, ಡಾ| ಸಿದ್ದಲಿಂಗಯ್ಯ, ಬಿ. ಟಿ. ಲಲಿತಾ ನಾಯಕ್, ಡಾ| ಮುಖ್ಯಮಂತ್ರಿ ಚಂದ್ರು, ಡಾ| ಎಲ್. ಹನುಮಂತಯ್ಯ, ಡಾ| ಮನು ಬಳಿಗಾರ್, ರವೀಂದ್ರ ಬಿ. ಎಸ್. ನಾರಾಯಣ ರಾಯಚೂರು, ಡಾ| ಕೆ. ಮುರುಳೀಧರ ಅವರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಚಂದ್ರಶೇಖರ್ ಎನ್. ಪಿ. ಕಾರ್ಯಕ್ರಮ ನಿರೂಪಣೆಗೈದರು. ಕಾರ್ಯದರ್ಶಿ ಸಿ. ಎಂ. ನಾಗರಾಜ ಅವರು ವಂದಿಸಿದರು.