ಕಂಕನಾಡಿ: ಮಂಗಳೂರು ಜಂಕ್ಷನ್ (ಕಂಕನಾಡಿ) ರೈಲು ನಿಲ್ದಾಣ ರಸ್ತೆ ಅಗಲಗೊಳಿಸಲು 4.05 ಕೋ. ರೂ. ಖರ್ಚು ಮಾಡಲಾಗುವುದು ಎಂದು ಶಾಸಕ ಜೆ. ಆರ್. ಲೋಬೋ ತಿಳಿಸಿದ್ದಾರೆ. ಕಂಕನಾಡಿ ಜಂಕ್ಷನ್ ರಸ್ತೆ ವೀಕ್ಷಿಸಿ ಮಾತನಾಡಿದ ಅವರು, ಈಗಾಗಲೇ ಮಂಗಳೂರು ಮಹಾನಗರ ಪಾಲಿಕೆ ಪ್ರೀಮಿಯಂ ಎಫ್‌ಎಆರ್‌ನಿಂದ 2.05 ಕೋ. ರೂ. ಮತ್ತು ರಾಜ್ಯ ಸರಕಾರದ
ಲೋಕೋಪಯೋಗಿ ಇಲಾಖೆಯಿಂದ 2 ಕೋ. ರೂ. ಮಂಜೂರಾಗಿದೆ ಎಂದರು.
ಹಲವು ವರ್ಷಗಳ ಹಿಂದೆ ಮಂಗಳೂರು ಜಂಕ್ಷನ್ ರೈಲು ನಿಲ್ದಾಣವಾಗಿದ್ದರೂ, ಸರಿಯಾದ ರಸ್ತೆ ಇರದ ಕಾರಣ ಜನರು ಕಿರಿದಾದ ರಸ್ತೆಯಲ್ಲೇ ಪ್ರಯಾಸದಿಂದ ಬರುತ್ತಿದ್ದರು. ಬಸ್ ಸೌಕರ್ಯವೂ ಇಲ್ಲದಿದ್ದ ಕಾರಣದಿಂದ ಜನರು ಆಟೋರಿಕ್ಷಾ, ಟ್ಯಾಕ್ಸಿ, ಕಾರುಗಳ ಮೂಲಕವೇ ಬರಬೇಕಾಗಿತ್ತು. ರಸ್ತೆ ಅಭಿವೃದ್ಧಿಗೊಂಡಲ್ಲಿ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಮನಪಾ ಮತ್ತು ಲೋಕೋಪಯೋಗಿ ಇಲಾಖೆಯು ರಸ್ತೆ ನಿರ್ಮಾಣ ಕಾರ್ಯ ಶೀಘ್ರಗೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು. ವ್ಯವಸ್ಥಿತವಾಗಿ ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ತ್ವರಿತವಾಗಿ ನಿರ್ಮಿಸಬೇಕು ಎಂದು ಅವರು ಸೂಚಿಸಿದರು.
ಕಾರ್ಪೊರೇಟರ್ ಪ್ರವೀಣ್ ಚಂದ್ರ ಆಳ್ವ, ಪಾಲಿಕೆ ಉಪ ಆಯುಕ್ತ (ಅಭಿವೃದ್ಧಿ) ಕೆ. ಎಸ್. ಲಿಂಗೇಗೌಡ, ಜಂಟಿ ನಿರ್ದೇಶಕ ಜಯರಾಜ್, ಟಿಪಿಒ ಬಾಲಕೃಷ್ಣ, ಎಂಜಿನಿಯರ್ ಗಣಪತಿ, ಸ್ಥಳೀಯ ಮುಖಂಡರಾದ ಕೃತಿನ್ ಕುಮಾರ್, ಧನರಾಜ್, ಅನಿಲ್ ಮತ್ತಿತರರಿದ್ದರು.