ಕಾಪು: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಬೆಳಪು ಗ್ರಾಮದ ಪಣಿಯೂರು (ಪಡುಬಿದ್ರಿ) ರೈಲ್ವೇ ನಿಲ್ದಾಣಕ್ಕೆ ತೆರಳುವ ರಸ್ತೆ ಮರುನಿರ್ಮಾಣಕ್ಕೆ ಬೆಳಪು ಗ್ರಾ.ಪಂ. ಶಿಫಾರಸ್ಸಿನಂತೆ ಅದಾನಿ ಫೌಂಡೇಶನ್ ಸಿಎಸ್ಆರ್ ಯೋಜನೆಯಡಿ 17 ಲಕ್ಷ ರೂ. ಅನುದಾನವನ್ನು ಬಿಡುಗಡೆಗೊಳಿಸಿದ್ದು ಕಾಂಕ್ರಿಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಅದಾನಿ ಸಮೂಹ ಸಂಸ್ಥೆಯ ಅಧ್ಯಕ್ಷ ಕಿಶೋರ್ ಆಳ್ವ ಮತ್ತು ಬೆಳಪು ಗ್ರಾ.ಪಂ. ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಅವರು ಜಂಟಿಯಾಗಿ ಗುದ್ದಲಿ ಪೂಜೆ ನೆರವೇರಿಸಿದರು.
ಅದಾನಿ ಸಮೂಹ ಸಂಸ್ಥೆಯ ಅಧ್ಯಕ್ಷ ಮತ್ತು ಕಾರ್ಯ ನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಮಾತನಾಡಿ, ಗ್ರಾಮಾಭಿವೃದ್ಧಿ ಮತ್ತು ಮೂಲಕಸೌಕರ್ಯಗಳ ಜೋಡಣೆಗೆ ತಮ್ಮ ಸಹಕಾರ ನೀಡಲಾಗುವುದು ಎಂದರು.
ಬೆಳಪು ಗ್ರಾ. ಪಂ. ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಗ್ರಾ.ಪಂ. ವತಿಯಿಂದ ಸೋಲಾರ್ ದಾರಿದೀಪಗಳನ್ನು ಅಳವಡಿಸಲಾಗಿದ್ದು ರಸ್ತೆ ಅಭಿವೃದ್ಧಿಗೆ ಅದಾನಿ ಫೌಂಡೇಷನ್ನ ಸಿಎಸ್ಆರ್ ನಿಧಿಯನ್ನು ಬಳಸಿಕೊಳ್ಳಲಾಗಿದೆ. ರಸ್ತೆ ವಿಸ್ತರಣೆ ಮತ್ತು ಸಂಬಂಧಪಟ್ಟ ಕಾಮಗಾರಿಗೆ ಇನ್ನಷ್ಟು ವೇಗ ನೀಡಲಾಗುವುದು ಎಂದರು.
ಕೊಂಕಣ ರೈಲ್ವೇ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ ಮಾತನಾಡಿ, ಈ ರೈಲ್ವೇ ನಿಲ್ದಾಣವನ್ನು ಅಭಿವೃದ್ಧಿ ಪಡಿಸಿ, ಮೇಲ್ದರ್ಜೆಗೇರಿಸಿ ಸ್ಥಳೀಯರ ಬೇಡಿಕೆಯಂತೆ ವಿವಿಧ ರೈಲುಗಳ ನಿಲುಗಡೆಗೆ ಅವಕಾಶ ದೊರಕುವಂತಾಗಲಿ. ಈ ನಿಟ್ಟಿನಲ್ಲಿ ಈಗಾಗಲೇ ರೈಲ್ವೇ ನಿಗಮದ ಅಧಿಕಾರಿಗಳೊಂದಿಗೆ ಪತ್ರ ವ್ಯವಹಾರವನ್ನೂ ನಡೆಸಲಾಗಿದೆ ಎಂದರು.
ಬೆಳಪು ಗ್ರಾ. ಪಂ. ಉಪಾಧ್ಯಕ್ಷೆ ಶೋಭಾ ಭಟ್, ಸದಸ್ಯರಾದ ಸೌಮ್ಯ ಸುರೇಂದ್ರ, ಶರತ್ ಕುಮಾರ್, ಸುಲೇಮಾನ್, ಉಷಾ ವಾಸು, ಸ್ಥಳೀಯ ಪ್ರಮುಖರಾದ ಕೊರಗ ಶೆಟ್ಟಿ ಬೆಳ್ಳಿಬೆಟ್ಟುಗುತ್ತು, ಹರೀಶ್ ಶೆಟ್ಟಿ ಬಡಗರಗುತ್ತು, ಅಶೋಕ್ ಪೂಜಾರಿ ನಾಂಜಾರು ಸಾನದಮನೆ, ಮಹೇಶ್ ಶೆಟ್ಟಿ ಹೊಸಮನೆ, ವಸುಂಧರ ಶೆಟ್ಟಿ, ರೈಲ್ವೇ ಎಸ್ಆ್ಯಂಡ್ಟಿ ಶ್ರೀಜಿತ್ ಕುಮಾರ್, ವಾಸುದೇವ ರಾವ್, ಅದಾನಿ ಸಂಸ್ಥೆಯ ಏಜಿಎಂ ರವಿ ಆರ್. ಜೇರೆ, ಅದಾನಿ ಫೌಂಡೇಷನ್ನ ಅನುದೀಪ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ ಫಲಶ್ರುತಿ: ಬೆಳಪು (ಪಡುಬಿದ್ರಿ) ರೈಲು ನಿಲ್ದಾಣವನ್ನು ಅಭಿವೃದ್ಧಿ ಪಡಿಸುವುದು, ಇಲ್ಲಿ ಮುಂಬಯಿ ಬೆಂಗಳೂರು ರೈಲುಗಳ ನಿಲಗಡೆಗೆ ಅವಕಾಶ ನೀಡುವುದು, ರೈಲ್ವೇ ನಿಲ್ದಾಣಕ್ಕೆ ಬರುವ ರಸ್ತೆಯ ಅಭಿವೃದ್ಧಿ, ದಾರಿ ದೀಪಗಳ ಅಳವಡಿಕೆ ಬಗ್ಗೆ ಉದಯವಾಣಿ ಸುದಿನದಲ್ಲಿ ಹಲವು ಬಾರಿ ವಿಶೇಷ ವರದಿ ಪ್ರಕಟಿಸಲಾಗಿತ್ತು. ಉದಯವಾಣಿ ವರದಿಗೆ ಸ್ಪಂಧಿಸಿ, ಬೆಳಪು ಗ್ರಾ.ಪಂ. ಸೋಲಾರ್ ಲೈಟ್ಗಳನ್ನು ಅಳವಡಿಸಿದ್ದು, ಅದಾನಿ ಫೌಂಡೇಶನ್ ಮೂಲಕ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿದೆ. ಮುಂದೆ ರೈಲು ನಿಲಗಡೆಗೂ ಅವಕಾಶ ಸಿಗುವಂತಾಗಲಿ ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.