Advertisement

ಕಂಬಳಬೆಟ್ಟು  : ದಾಸ್ತಾನಿದ್ದ ಸಿಡಿಮದ್ದು ನಾಶ

08:38 AM Mar 31, 2017 | |

ವಿಟ್ಲ: ವಿಟ್ಲ ಮುಟ್ನೂರು ಗ್ರಾಮದ ಕಂಬಳ ಬೆಟ್ಟು ನೂಜಿ ಗರ್ನಾಲ್‌ ಸಾಹೇಬ ರೆಂದೇ ಚಿರಪರಿಚಿತರಾಗಿದ್ದ ದಿ| ಇಬ್ರಾಹಿಂ ಸಾಹೇಬ್‌ ಅವರ ಮನೆಯಲ್ಲಿ ಮಾ.20ರಂದು ಸಿಡಿಮದ್ದು ಸ್ಫೋಟ ಸಂಭವಿಸಿದ ಜಾಗಕ್ಕೆ ಮಂಗಳೂರು ಪಿಇಎಸ್‌ಒ ತಂಡ ಗುರುವಾರ ಭೇಟಿ ನೀಡಿ, ದಾಸ್ತಾನಿದ್ದ ಸಿಡಿಮದ್ದುಗಳನ್ನು ನಾಶಪಡಿಸಿತು.

Advertisement

ಮನೆ ಬಳಿಯ ಕೊಟ್ಟಿಗೆಯಲ್ಲಿ ತಯಾರಿಸಿಟ್ಟಿದ್ದ 15ಕ್ಕೂ ಅಧಿಕ ವಿಧದ ಸಿಡಿಮದ್ದು ಹಾಗೂ ಆಕಾಶದೆತ್ತರಕ್ಕೇರಿ, ಸಿಡಿಯುವ ಸುಮಾರು 50ಕ್ಕೂ ಅಧಿಕ ಸಿಡಿಮದ್ದುಗಳನ್ನು ನೀರಿನಲ್ಲಿ ಹಾಕಿ ನಾಶಪಡಿಸಲಾಯಿತು. ಸಲ್ಪರ್‌ ಪೌಡರ್‌ನ ಗೋಣಿ ಚೀಲಗಳಿಂದ, ಅಲ್ಯೂಮಿನಿಯಮ್‌ ಪೌಡರ್‌ನ ಬ್ಯಾರಲ್‌ಗ‌ಳಿಂದ, ಚಾರ್ಕೋಲ್‌ ಚೀಲಗಳಿಂದ ಮಾದರಿ ಪಡೆದು ಕೊಂಡು ನಿರ್ಜನ ಪ್ರದೇಶದಲ್ಲಿ ಬೆಂಕಿ ಹಚ್ಚಿ ಸ್ಫೋಟಕಗಳ ತೀವ್ರತೆಯನ್ನು ಅಧಿಕಾರಿಗಳು ಪರೀಕ್ಷಿಸಿದರು. ಬಳಿಕ ಅಗ್ನಿಶಾಮಕ ದಳದವರ ಸಮ್ಮುಖದಲ್ಲಿ 50 ಕೆಜಿಗೂ ಅಧಿಕ ರಾಸಾಯನಿಕಗಳನ್ನು ನಾಶಪಡಿಸಲಾಯಿತು.

ಮಂಗಳೂರು ಪಿ.ಇಎಸ್‌.ಒ. ಉಪ ಮುಖ್ಯ ನಿಯಂತ್ರಕ ಸಿ. ಷಣ್ಮುಗಂ, ಉಪನಿಯಂತ್ರಕ ಅರುಣ್‌ ಶಿವಸಾಗರ್‌, ಸಿಬಂದಿ ಅಶೋಕ್‌, ಪ್ರಕಾಶ್‌ ಅವರು ಕ್ರಮಕೈಗೊಂಡರು. ಬಂಟ್ವಾಳ ಅಗ್ನಿಶಾಮಕ ಠಾಣಾಧಿಕಾರಿ ಸುಂದರ ವಿ., ಅಗ್ನಿಶಾಮಕ ಪ್ರಮುಖ ಜಯ, ಅಗ್ನಿಶಾಮಕ ಸಿಬಂದಿ ಕೆ. ಸುರೇಂದ್ರ, ಸತೀಶ್‌ ಶೆಣೆ„, ಚಾಲಕ ಕಿರಣ್‌ ಕುಮಾರ್‌ ಬೆಂಕಿಯನ್ನು ನೀರು ಹಾಕಿ ನಂದಿಸಿ ದರು. ವಿಟ್ಲ ಪೊಲೀಸರು, ಸಾಮಾ ಜಿಕ ಕಾರ್ಯಕರ್ತ ಹಮೀದ್‌ ಕಂಬಳಬೆಟ್ಟು ಮತ್ತಿತರರು ಸಹಕರಿಸಿದರು.

ಮನೆಯಿಂದ 500 ಮೀ. ದೂರ ದಲ್ಲಿ ಸಿಡಿ ಮದ್ದು ತಯಾರಿಸಲು ಅನುಮತಿ ಪಡೆದಿರುವ, ನಿರ್ಜನ ಪ್ರದೇಶದಲ್ಲಿರಬೇಕಾದ ಸಿಡಿಮದ್ದು ತಯಾರಿಕೆ ಘಟಕದ ಬದಲಾಗಿ ಮನೆಯ ಪಕ್ಕದ ಕೊಟ್ಟಿಗೆಯಲ್ಲೇ ಸಿಡಿಮದ್ದು ತಯಾರಿಸುತ್ತಿ ದ್ದುದರಿಂದ, ಆಕಸ್ಮಿಕ ಸ್ಫೋಟ ಸಂಭವಿಸಿ, ಕಂಬಳಬೆಟ್ಟು ನೂಜಿ ನಿವಾಸಿ ಅಬ್ದುಲ್‌ ಅಝೀಮ್‌ (24), ಸುಂದರ ಪೂಜಾರಿ ಕಾರ್ಯಾಡಿ (42) ಸ್ಥಳದಲ್ಲೇ ಮೃತಪಟ್ಟಿದ್ದರು. ಪಕ್ಕದ ಮನೆಯ ಆಸೀಮಾ (39), ಪುಷ್ಪಾವತಿ (48), ಸುಜಾತಾ (26), ಸಾತ್ವಿನ್‌ (3) ಗಾಯಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next