Advertisement

ಮುಧೋಳ: ಪ್ರವಾಹ-ತರಕಾರಿ ಮಾರಲು ದಾರಿ ಕಟ್‌

05:40 PM Aug 01, 2024 | Team Udayavani |

ಉದಯವಾಣಿ ಸಮಾಚಾರ
ಮುಧೋಳ: ಬೆಳೆದ ತರಕಾರಿ ಮಾರುಕಟ್ಟೆಗೆ ಕೊಂಡೊಯ್ಯಲು ಮನಸ್ಸಿಲ್ಲ, ತೋಟದಲ್ಲಿಯೇ ಬಿಟ್ಟರೆ ಕೊಳೆತು ಹೋಗುತ್ತದೆ ಎಂಬ ಭೀತಿ. ದರ ಇಳಿಕೆ ಮಧ್ಯೆ ಎದುರಾಗಿರುವ ಪ್ರವಾಹ ಸಂಕಟದಿಂದ ಹೊರಬರಲು ದಾರಿಯೇ ತೋಚದಂತಾಗಿದೆ.

Advertisement

ಇದು ಸಮೀಪದ ಜಾಲಿಬೇರಿ ಗ್ರಾಮದ ರೈತ ಗೋವಿಂದ ನಾರಾಯಣಪ್ಪ ಚವ್ಹಾಣ ಅವರ ನೋವಿನ ನುಡಿ. ನಿತ್ಯ ಖರ್ಚಿಗಾಗಿ
ನಾಲ್ಕು ಎಕರೆ ತರಕಾರಿ ಬೆಳೆದಿರುವ ಇವರು ಇದೀಗ ಎದುರಾಗಿರುವ ಪ್ರವಾಹ ಹಾಗೂ ತರಕಾರಿ ದರ ಇಳಿಕೆ ಪರಿಣಾಮದಿಂದ ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ಘಟಪ್ರಭಾ ನದಿ ನೀರು ಅಷ್ಟ ದಿಕ್ಕುಗಳಲ್ಲಿ ದಿಗ್ಬಂಧನ ಹಾಕಿರುವುದರಿಂದ ಬೆಳೆದ ತರಕಾರಿ
ಮಾರುಕಟ್ಟೆಗೆ ಸಾಗಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಜಾಲಿಬೇರಿ ಹೊರಭಾಗದ ಮುಧೋಳ-ಯಾದವಾಡ ರಸ್ತೆಗೆ ಹೊಂದಿಕೊಂಡಿರುವ ಚವ್ಹಾಣ ಅವರ ಮುಖ್ಯ ಕೃಷಿ ಕಬ್ಬು ಬೆಳೆಯಾಗಿದ್ದರೂ, ಅಲ್ಪ ಜಮೀನಿನಲ್ಲಿ ತರಕಾರಿ ಬೆಳೆದಿದ್ದಾರೆ. ಇದೀಗ ಕಳೆದ ಎರಡ್ಮೂರು ದಿನಗಳಿಂದ ಮುಧೋಳ ನಗರಕ್ಕೆ ಬರುವ ಎಲ್ಲ ಮಾರ್ಗಗಳ ಸಂಪರ್ಕ ಕಡಿತಗೊಂಡಿದ್ದು, ಅನಿವಾರ್ಯವಾಗಿ ತರಕಾರಿ ಮಾರಲು ಬಾಗಲಕೋಟೆಯತ್ತ ಮುಖ ಮಾಡಿದ್ದಾರೆ.

70 ಕಿ.ಮೀ ಕ್ರಮಿಸುವ ಅನಿವಾರ್ಯ:ಗೋವಿಂದ ಚವ್ಹಾಣ ತೋಟದಿಂದ  ಯಾದವಾಡ ಸೇತುವೆ ಮೂಲಕ ಮುಧೋಳ
ನಗರಕ್ಕೆ ಕೇವಲ 7 ಕಿ.ಮೀ ಅಂತರವಿದೆ. ಆದರೆ ಇದೀಗ ಯಾದವಾಡ ಸೇತುವೆ, ಚಿಂಚಖಂಡಿ ಸೇತುವೆ, ವಜ್ಜರಮಟ್ಟಿ ಮಾರ್ಗದಲ್ಲಿ ನದಿ ನೀರು ಆವರಿಸಿದ್ದರಿಂದ ಅನಿವಾರ್ಯ ರೂಗಿ, ಲೋಕಾಪುರ ಮಾರ್ಗವಾಗಿ ತರಕಾರಿಯನ್ನು ಬಾಗಲಕೋಟೆಗೆ ಕೊಂಡೊಯ್ಯಬೇಕಿದೆ. ಇದರಿಂದ ತರಕಾರಿ ಸಾಗಣೆ ವೆಚ್ಚ ಹೆಚ್ಚಾಗಿ ನಷ್ಟ ಉಂಟಾಗುತ್ತಿದೆ. ಇನ್ನು ಹೊಲದಲ್ಲೇ ಬಿಟ್ಟರೆ ಕೊಳೆಯುತ್ತದೆ. ಅನಿವಾರ್ಯವಾಗಿ ಕೊಂಡೊಯ್ಯು ತ್ತಿರುವುದಾಗಿ ಹೇಳುತ್ತಾರೆ ರೈತ ಗೋವಿಂದ ಚವ್ಹಾಣ.

ದರ ಇಳಿಕೆ ಬರೆ: ಒಂದೆಡೆ ಪ್ರವಾಹ ಬಂದು ಪ್ರಯಾಣಕ್ಕೆ 70 ಕಿ.ಮೀ ಸುತ್ತುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೆಲ್ಲವನ್ನೂ ಸಹಿಸಿ ಮಾರುಕಟ್ಟೆಗೆ ತೆರಳಿದರೆ ಅಲ್ಲಿ ತರಕಾರಿಗಳ ಬೆಲೆ ಪಾತಾಳಕ್ಕೆ ಕುಸಿದಿದೆ. ಈ ಹಿಂದೆ ಮುಧೋಳ ಮಾರುಕಟ್ಟೆಯಲ್ಲಿ 1000 ರೂ.ಗೆ ಒಂದು ಬುಟ್ಟಿ ಟೊಮ್ಯಾಟೋ ಮಾರಾಟವಾಗುತ್ತಿತ್ತು. ಈಗ ಕೇವಲ 300 ರೂ.ಗೆ ಒಂದು ಬುಟ್ಟಿ ಮಾರಾಟವಾಗುತ್ತಿದೆ.ಇದರಿಂದ ಕಷ್ಟಪಟ್ಟು ಬೆಳೆದ ತರಕಾರಿ ಸುತ್ತಿ ಬಳಸಿ ಮಾರುಕಟ್ಟೆ ತಲುಪಿಸಿದರೂ ನಷ್ಟ ಅನುಭವಿಸಿ ಕೈ ಸುಟ್ಟುಕೊಳ್ಳುವಂತಾಗಿದೆ.

Advertisement

ಭರ್ಜರಿ ಇಳುವರಿ: ಗೋವಿಂದ ಚವ್ಹಾಣ ತೋಟದಲ್ಲಿ ಅರ್ಧ ಎಕರೆ ಟೊಮ್ಯಾಟೋ, ಅರ್ಧ ಎಕರೆ ಹೀರೆ, ಒಂದು ಎಕರೆ ಬೀನ್ಸ್‌, ಒಂದು ಎಕರೆ ಬೆಂಡೆ, ಒಂದು ಎಕರೆಯಲ್ಲಿ ಸವತೆ ಬೇಸಾಯ ಮಾಡುತ್ತಿದ್ದಾರೆ. ಸದ್ಯ ಟೊಮ್ಯಾಟೋ ಹಾಗೂ ಬೆಂಡೆ ಬೆಳೆ ಭರ್ಜರಿ ಫಸಲು ಕೊಡುತ್ತಿವೆ. ಅತಿವೃಷ್ಟಿಯಿಂದ ಉಂಟಾದ ಪ್ರವಾಹ ಮತ್ತು ಬೆಲೆ ಇಳಿಕೆಯಿಂದ ತರಕಾರಿ ಬೆಳೆದ ರೈತ ಅಸಹಾಯಕತೆಯಿಂದ ಕೈ ಹಿಸುಕಿಕೊಳ್ಳುವಂತಾಗಿದೆ.

ಸಂಚಾರ ಆರಂಭಕ್ಕೆ ಕನಿಷ್ಟ 7 ದಿನ ಬೇಕು: ಈ ಸಮಸ್ಯೆ ಕೇವಲ ಗೋವಿಂದ ಚವ್ಹಾಣ ಅವರದಷ್ಟೇ ಅಲ್ಲ. ಆ ಭಾಗದಲ್ಲಿರುವ ಪ್ರತಿಯೊಬ್ಬ ರೈತರ ಸಮಸ್ಯೆಯೂ ಆಗಿದೆ. ನಿತ್ಯ ಒಂದಿಲ್ಲೊಂದು ಕಾರ್ಯಕ್ಕೆ ಮುಧೋಳಕ್ಕೆ ಆಗಮಿಸುತ್ತಿದ್ದ ಜನ ಕಳೆದೊಂದು ವಾರದಿಂದ ಯಾದವಾಡ ಸೇತುವೆ ಮೇಲೆ ನೀರು ನಿಂತಿದೆ. ಎರಡು ದಿನಗಳಿಂದ ಚಿಂಚಖಂಡಿ, ವಜ್ಜರಮಟ್ಟಿ ರಸ್ತೆಯೂ ನೀರಿನಿಂದ ಜಲಾವೃತಗೊಂಡು ಸಂಚಾರ ಸಂಪರ್ಕ ಕಡಿತಗೊಂಡಿವೆ. ಬುಧವಾರದಿಂದ ನದಿ ನೀರಿನ ಪ್ರಮಾಣದಲ್ಲಿ
ಇಳಿಕೆಯಾಗುತ್ತಿದ್ದು, ಇದೇ ರೀತಿ ನೀರು ಇಳಿಕೆಯಾದರೆ ಯಾದವಾಡ ರಸ್ತೆ ಸಂಪರ್ಕ ಶುರುವಾಗಲು ಕನಿಷ್ಟ ಒಂದು.

ಬೆಳೆದಿರುವ ತರಕಾರಿ ಫಸಲಾಗಿ ಕೈಗೆ ಬರುವ ಹೊತ್ತಿನಲ್ಲಿ ಪ್ರವಾಹದಿಂದ ರಸ್ತೆ ಸಂಪರ್ಕ ಬಂದ್‌ ಆಗಿದೆ. ಇದರ ನಡುವೆ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಪಾತಾಳಕ್ಕೆ ಕುಸಿದ ಪರಿಣಾಮ ತರಕಾರಿ ಬೆಳೆಗೆ ಖರ್ಚಾದ ಹಣ ಕೈಗೆ ಬಾರದ ಸ್ಥಿತಿ
ನಿರ್ಮಾಣವಾಗಿದೆ.
*ಗೋವಿಂದ ನಾರಾಯಣ ಚವ್ಹಾಣ, ಜಾಲಿಬೇರಿ ರೈತ

*ಗೋವಿಂದಪ್ಪ ತಳವಾರ

Advertisement

Udayavani is now on Telegram. Click here to join our channel and stay updated with the latest news.

Next