ಬೆಂಗಳೂರು: ಹಿರಿಯ ಲೇಖಕಿ ಡಾ. ಕಮಲಾ ಹಂಪನಾ ಅವರು ಇಂದು (ಶನಿವಾರ) ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.
ಕಮಲಾ ಹಂಪನಾ ಅವರು ವಯೋಸಹಜ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ರಾಜರಾಜೇಶ್ವರಿ ನಗರದಲ್ಲಿರುವ ಅವರ ಹಿರಿಯ ಪುತ್ರಿ ರಾಜಶ್ರೀ ಅವರ ನಿವಾಸದಲ್ಲಿ ನೆಲೆಸಿದ್ದರು. ಶನಿವಾರ ಬೆಳಗಿನ ಜಾವ ಹೃದಯಾಘಾತವಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಕಮಲಾ ಹಂ.ಪಾ ನಾಗರಾಜಯ್ಯ ಅವರಿಗೆ ಸಾಹಿತಿ, ಸಂಶೋಧಕರಾಗಿರುವ ಪತಿ ಹಂ.ಪ ನಾಗರಾಜಯ್ಯ, ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರ ಇದ್ದಾರೆ.
ಡಾ. ಕಮಲಾ ಹಂಪನಾ ಅವರ ದೇಹವನ್ನು ಎಂ.ಎಸ್.ರಾಮಯ್ಯ ಕಾಲೇಜಿಗೆ ದಾನ ಮಾಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕಮಲಾ ಹಂಪನಾ ಅವರು ಖ್ಯಾತ ವಾಗ್ಮಿಯಾಗಿದ್ದು, ಅವರು ಹಾಗೂ ಅವರ ಪತಿ ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಅವರಿಗೂ ಹಂಪಿ ವಿಶ್ವವಿದ್ಯಾಲಯ ನಾಡೋಜ ಪ್ರಶಸ್ತಿ ನೀಡಿ ಗೌರವಿಸಿದೆ. ಕಮಲಾ ಹಂಪನಾ ಅವರು ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು.
ಕಮಲಾ ಹಂಪನಾ ಅವರ ಪಾರ್ಥಿವ ಶರೀರವನ್ನು ರಾಜಾಜಿನಗರದ 18 ನೇ ಕ್ರಾಸ್ ನಲ್ಲಿರುವ ಅವರ ಸ್ವಂತ ನಿವಾಸಕ್ಕೆ ಕರೆತರಲಾಗುವುದು. ಅಲ್ಲಿ ಸಾರ್ವಜನಿಕರಿಗಾಗಿ ಅಂತಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಕುಟುಂಬದ ಸದಸ್ಯರು ಮಾಹಿತಿ ನೀಡಿದ್ದಾರೆ.